ಬೆಂಗಳೂರು[ಫೆ.07]: ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಅವರಿಂದ ಹಲ್ಲೆಗೊಳಗಾಗಿದ್ದ ವಿಜಯನಗರ ಶಾಸಕ ಆನಂದ್‌ಸಿಂಗ್‌ ಸಂಪೂರ್ಣ ಚೇತರಿಕೆ ಕಾಣದಿದ್ದರೂ ಜಂಟಿ ಅಧಿವೇಶನಕ್ಕೆ ಹಾಜರಾಗಿ ತಾವು ಕಾಂಗ್ರೆಸ್‌ ಜೊತೆಗಿರುವುದಾಗಿ ಘೋಷಿಸಿದ್ದಾರೆ.

ಪಕ್ಕೆಲುಬು ಹಾಗೂ ಕಣ್ಣಿನ ಸಮಸ್ಯೆಯಿಂದಾಗಿ ವೈದ್ಯರ ಸೂಚನೆ ಪ್ರಕಾರ ಇನ್ನೂ ಒಂದು ತಿಂಗಳು ವಿಶ್ರಾಂತಿ ಪಡೆಯಬೇಕಾಗಿತ್ತು. ಆದರೂ, ಪಕ್ಷ ವಿಪ್‌ ಜಾರಿ ಮಾಡಿದ್ದರಿಂದ ಅನಾರೋಗ್ಯದ ಹೊರತಾಗಿಯೂ ಸದನಕ್ಕೆ ಹಾಜರಾಗಿದ್ದರು.

ಸದಸ್ಯರಿಂದ ಆರೋಗ್ಯ ವಿಚಾರಣೆ:

ಸಲೀಸಾಗಿ ನಡೆಯಲೂ ಆಗದ ಪರಿಸ್ಥಿತಿಯಲ್ಲಿದ್ದ ಆನಂದ್‌ಸಿಂಗ್‌ ಬಲಗಣ್ಣಿಗೆ ಗಾಯವಾಗಿ ಸಂಪೂರ್ಣ ಕಪ್ಪಾಗಿರುವುದರಿಂದ ಕಪ್ಪು ಕನ್ನಡಕ ಧರಿಸಿ ಸದನಕ್ಕೆ ಆಗಮಿಸಿದ್ದರು. ಸದನಕ್ಕೆ ಆಗಮಿಸುತ್ತಿದ್ದಂತೆ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಸದಸ್ಯರು ಆಗಮಿಸಿ ಆನಂದ್‌ಸಿಂಗ್‌ ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ತಮಗೆ ಆಗುತ್ತಿರುವ ನೋವು ಹಾಗೂ ಸಮಸ್ಯೆಗಳ ಬಗ್ಗೆ ಆನಂದ್‌ಸಿಂಗ್‌ ಮಾಹಿತಿ ಹಂಚಿಕೊಂಡರು. ನೋವಿನಿಂದಲೇ ಕಷ್ಟಪಟ್ಟು ಕತ್ತು ತಿರುಗಿಸಿ ಎಲ್ಲರ ಜೊತೆ ಮಾತನಾಡಿದರು.

ದೂರು ಹಿಂಪಡೆಯಲ್ಲ-ಆನಂದ್‌ಸಿಂಗ್‌:

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಲ್ಲಿಯೂ ಹೋಗಿಲ್ಲ. ಕಾಂಗ್ರೆಸ್‌ ಜತೆಗೆ ಇದ್ದೇನೆ. ಯಾರ ಆಮಿಷಕ್ಕೂ ಒಳಗಾಗುವುದಿಲ್ಲ. 15-20 ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಕಣ್ಣು, ತಲೆ, ಕುತ್ತಿಗೆಗೆ ನೋವಾಗಿದೆ. ನನ್ನ ಹಾಗೂ ಗಣೇಶ್‌ ನಡುವೆ ರಾಜಿ ಸಂಧಾನಕ್ಕೆ ಯಾರೂ ಮುಂದಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದು, ದೂರು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮತ್ತೆ ಆಸ್ಪತ್ರೆಗೆ ದಾಖಲು:

ಬುಧವಾರ ಬೆಳಗ್ಗೆ ಜಂಟಿ ಅಧಿವೇಶನಕ್ಕೂ ಆಗಮಿಸಿದ್ದ ಅವರು ಮನೆಗೆ ವಾಪಸಾದ ಬಳಿಕ ವಾಂತಿ ಹಾಗೂ ಪಕ್ಕೆಲುಬು ನೋವು ಕಾಣಿಸಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಪಕ್ಕೆಲುಬು ಮುರಿದಿದ್ದರಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿತ್ತು. ಆದರೆ ವಿಪ್‌ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದರು. ವಿಧಾನಸೌಧದ ಮೊದಲ ಮಹಡಿಯಲ್ಲಿರುವ ವಿಧಾನಸಭೆಗೆ ಮೆಟ್ಟಿಲ ಮೂಲಕವೇ ಹತ್ತಿ ಇಳಿದರು. ಇದರಿಂದ ಮತ್ತೆ ನೋವು ಹೆಚ್ಚಾಗಿದೆ.

ಹೀಗಾಗಿ ರಾಜ್ಯಪಾಲರ ಭಾಷಣದ ಪ್ರಹಸನ ಮುಗಿದ ತಕ್ಷಣವೇ ಸದನದಿಂದ ಹೊರ ನಡೆದರು. ಅವರನ್ನು ಖುದ್ದು ಜಮೀರ್‌ ಅಹಮದ್‌ಖಾನ್‌ ಅವರು ಕರೆದುಕೊಂಡು ಹೋಗಿ ಕಾರು ಹತ್ತಿಸಿದರು. ಬಳಿಕ ವಸಂತನಗರದ ಮನೆಗೆ ತೆರಳಿದ ಬಳಿಕ ವಾಂತಿ ಆಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಗಣೇಶ್‌ ಬಂಧನ ಖಚಿತ: ಎಂಬಿ ಪಾಟೀಲ್‌

ಆನಂದ್‌ಸಿಂಗ್‌ ಮೇಲೆ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿರುವ ಶಾಸಕ ಜೆ.ಎನ್‌. ಗಣೇಶ್‌ ಇಂದು ಸದನಕ್ಕೆ ಗೈರುಹಾಜರಾಗಿದ್ದಾರೆ. ಗಣೇಶ್‌ ಪತ್ತೆಗೆ ಪೊಲೀಸರು ಎಲ್ಲ ರೀತಿ ಪ್ರಯತ್ನ ನಡೆಸಿದ್ದಾರೆ. ಅವರ ಮೇಲೆ 307 ಪ್ರಕರಣ ದಾಖಲಾಗಿದ್ದು, ಯಾವುದೇ ಕಾರಣಕ್ಕೂ ಜಾಮೀನು ಸಿಗುವುದಿಲ್ಲ. ಅವರನ್ನು ಆದಷ್ಟುಬೇಗ ಖಚಿತವಾಗಿ ಬಂಧಿಸುತ್ತೇವೆ.

- ಎಂ.ಬಿ. ಪಾಟೀಲ್‌, ಗೃಹ ಸಚಿವ