ಬೆಂಗಳೂರು:  ಆಡಳಿತಾರೂಢ ಕಾಂಗ್ರೆಸ್‌ ಶಾಸಕರ ಅಸಮಾಧಾನ, ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳ ಮುಖಂಡರ ನಡುವಿನ ವಾಕ್ಸಮರ, ಆಪರೇಷನ್‌ ಕಮಲದ ಸಾಧ್ಯತೆಯ ಹಿನ್ನೆಲೆಯಲ್ಲಿ ತೀವ್ರ ಹೈಡ್ರಾಮಾ ನಡೆಯಲಿದೆಯಾ ಎಂಬ ಕುತೂಹಲ ಮೂಡಿಸಿರುವ ವಿಧಾನಮಂಡಲದ ಉಭಯ ಸದನಗಳ ಬಜೆಟ್‌ ಅಧಿವೇಶನ ಬುಧವಾರದಿಂದ ಆರಂಭಗೊಳ್ಳಲಿದೆ.

ಕಾಂಗ್ರೆಸ್ಸಿನ ಅತೃಪ್ತ ಶಾಸಕರ ಪೈಕಿ ಎಷ್ಟು ಮಂದಿ ಮೊದಲ ದಿನದ ಕಲಾಪಕ್ಕೆ ಆಗಮಿಸಲಿದ್ದಾರೆ, ಆಗಮಿಸಿದವರು ರಾಜೀನಾಮೆ ನೀಡುತ್ತಾರೆಯೇ ಅಥವಾ ರಾಜೀನಾಮೆ ನೀಡುವುದಾಗಿ ದೂರ ಉಳಿದಿರುವರು ಮಣಿಯುತ್ತಾರೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಬುಧವಾರ ಸ್ಪಷ್ಟ ಉತ್ತರ ಸಿಗುವ ನಿರೀಕ್ಷೆಯಿದೆ.

ಈಗಾಗಲೇ ಕಾಂಗ್ರೆಸ್‌ ಪಕ್ಷ ತನ್ನ ಶಾಸಕರಿಗೆ ಅಧಿವೇಶನದ ಮೊದಲ ದಿನದಿಂದ ಕೊನೆಯ ದಿನದವರೆಗಿನ ಕಾರ್ಯಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಿ ವಿಪ್‌ ನೀಡಿರುವುದರಿಂದ ಅತೃಪ್ತ ಶಾಸಕರು ಇಕ್ಕಟ್ಟಿನಲ್ಲಿ ಸಿಲುಕಿಕೊಂಡಂತಾಗಿದೆ. ಕಲಾಪಕ್ಕೆ ಆಗಮಿಸದಿದ್ದರೆ ಅನರ್ಹತೆಯ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಹೀಗಾಗಿ, ಮೊದಲ ದಿನದ ಕಲಾಪ ಕುತೂಹಲ ಕೆರಳಿಸಿದೆ.

ಮಾಜಿ ಸಚಿವ ಹಾಗೂ ಶಾಸಕ ರಮೇಶ್‌ ಜಾರಕಿಹೊಳಿ ಸೇರಿದಂತೆ ಮೂರ್ನಾಲ್ಕು ಶಾಸಕರು ಗೈರು ಹಾಜರಾಗಬಹುದು ಎಂಬ ವದಂತಿ ಕಳೆದ ಹಲವು ದಿನಗಳಿಂದ ಕೇಳಿಬರುತ್ತಿದ್ದರೂ ಈ ಬಗ್ಗೆ ಸ್ಪಷ್ಟಮಾಹಿತಿಯಿಲ್ಲ. ರಾಜ್ಯಪಾಲರ ಭಾಷಣ ಆರಂಭವಾಗುವ ಮೊದಲೇ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂಬ ಗುಸು ಗುಸು ಇದ್ದರೂ ನಿಖರ ಮಾಹಿತಿ ಲಭ್ಯವಿಲ್ಲ.

ಈ ನಡುವೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಾಳೆಯದಲ್ಲಿ ತಮ್ಮ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ ಎಂಬ ವಿಶ್ವಾಸ ಕಾಣುತ್ತಿದ್ದರೆ, ಪ್ರತಿಪಕ್ಷ ಬಿಜೆಪಿ ಪಾಳೆಯದಲ್ಲಿ ಈ ಸರ್ಕಾರಕ್ಕೆ ಅತೃಪ್ತರಿಂದ ಧಕ್ಕೆ ಉಂಟಾಗುವ ಸಾಧ್ಯತೆಯಿದೆ ಎಂಬ ಆಶಾಭಾವವೂ ಕಂಡು ಬರುತ್ತಿದೆ. ಹೀಗಾಗಿ, ರಾಜಕೀಯ ಬೆಳವಣಿಗೆಗಳನ್ನು ಊಹಿಸುವುದು ಕಷ್ಟವಾಗಿದೆ.

ಅಧಿವೇಶನಕ್ಕೆ ಸಕಲ ಸಿದ್ಧತೆ:  

ಇದೆಲ್ಲದರ ನಡುವೆ ಈ ವರ್ಷದ ಮೊದಲ ಅಧಿವೇಶನ ಫೆ.6ರಿಂದ 15ರವರೆಗೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಮಾನ್ಯವಾಗಿ ಜನವರಿ ತಿಂಗಳೊಳಗೆ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡುವುದು ಸಂಪ್ರದಾಯ. ಇದಾದ ನಂತರ ಫೆಬ್ರವರಿ ಅಂತ್ಯ ಇಲ್ಲವೇ ಮಾರ್ಚ್ ಆರಂಭದಲ್ಲಿ ಬಜೆಟ್‌ ಮಂಡಿಸಲಾಗುತ್ತಿತ್ತು. ಆದರೆ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಯವ್ಯಯವನ್ನು ಬೇಗ ಮಂಡಿಸಲು ಮುಂದಾಗಿರುವುದರಿಂದ ಈ ಬಾರಿ ಅಧಿವೇಶನ ತಡವಾಗಿ ಆರಂಭವಾಗಿದೆ.

ಬುಧವಾರ ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣದ ನಂತರ ಕಳೆದ ಅಧಿವೇಶನದಿಂದ ಈಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಲಿದೆ. ಫೆ.7ರಂದು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮುಗಿದ ನಂತರ ಫೆ.8 ರಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಧ್ಯಾಹ್ನ 12.30ಕ್ಕೆ ಬಜೆಟ್‌ ಮಂಡಿಸಲಿದ್ದಾರೆ. ಫೆ.11ರಿಂದ ಬಜೆಟ್‌ ಮೇಲೆ ಚರ್ಚೆ ನಡೆಯಲಿದೆ.

ಮೇಲ್ಮನೆಯಲ್ಲಿ 684 ಪ್ರಶ್ನೆ ಸ್ವೀಕಾರ:

ಫೆ.8ರಂದು ಬಜೆಟ್‌ ಮಂಡನೆ ನಂತರ ಫೆ.11ರಿಂದ ಆಯವ್ಯಯದ ಮೇಲೆ ಚರ್ಚೆ ನಡೆಯಲಿದೆ. ಜೊತೆಗೆ ಇತರೆ ಕಾರ್ಯಕಲಾಪಗಳು ನಡೆಯಲಿವೆ. ಮೇಲ್ಮನೆಯಲ್ಲಿ ಒಟ್ಟು 684 ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ನಿಯಮ 72ರ ಅಡಿಯಲ್ಲಿ 55 ಸೂಚನೆ ಹಾಗೂ ನಿಯಮ 330ರ ಅಡಿ 24 ಸೂಚನೆ ಸ್ವೀಕರಿಸಲಾಗಿದೆ.

ಸ್ಪೀಕರ್‌, ಸಭಾಪತಿ ಪತ್ರಿಕಾಗೋಷ್ಠಿ ಇಲ್ಲ!

ಸಾಮಾನ್ಯವಾಗಿ ಅಧಿವೇಶನದ ಮುನ್ನ ವಿಧಾನ ಪರಿಷತ್‌ ಸಭಾಪತಿ ಹಾಗೂ ವಿಧಾನಸಭೆಯ ಸಭಾಧ್ಯಕ್ಷರು ಪ್ರತ್ಯೇಕವಾಗಿ ಮಾಧ್ಯಮಗೋಷ್ಠಿ ಕರೆದು ಅಧಿವೇಶನದಲ್ಲಿ ಮಂಡಿಸಲಿರುವ ವಿಧೇಯಕಗಳು, ಪ್ರಶ್ನೆಗಳು, ಚರ್ಚಿಸಲಿರುವ ಪ್ರಮುಖ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆದರೆ ಸಮ್ಮಿಶ್ರ ಸರ್ಕಾರದ ಉಭಯ ಪಕ್ಷಗಳಲ್ಲಿ ನಡೆಯುತ್ತಿರುವ ಗೊಂದಲದ ಪರಿಣಾಮ ಈ ಬಾರಿ ಮಾಧ್ಯಮಗೋಷ್ಠಿಯನ್ನೇ ಕರೆದಿಲ್ಲ.