ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ಇದು ಜನಕಲ್ಯಾಣ ಮತ್ತು ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಿದೆ. ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ, ಶಿಕ್ಷಣ, ಮಹಿಳಾ ಕಲ್ಯಾಣ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ಬೃಹತ್ ಅನುದಾನವನ್ನು ಘೋಷಿಸಲಾಗಿದೆ.
ಬೆಂಗಳೂರು (ಮಾ.6): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಜನಕಲ್ಯಾಣ ಮತ್ತು ಅಭಿವೃದ್ಧಿ ಎರಡಕ್ಕೂ ಸಮಾನ ಆದ್ಯತೆ ನೀಡಿದ್ದಾರೆ. ಸುಮಾರು 4.5 ಲಕ್ಷ ಕೋಟಿ ರೂಪಾಯಿಗಳಿಗೂ ಮೀರಿದ ಬೃಹತ್ ಗಾತ್ರದ ಈ ಆಯವ್ಯಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೇ ಶಿಕ್ಷಣ, ಮಹಿಳಾ ಕಲ್ಯಾಣ ಮತ್ತು ಮೂಲಸೌಕರ್ಯಕ್ಕೆ ಭರ್ಜರಿ ಕೊಡುಗೆ ನೀಡಲಾಗಿದೆ.
ಯಾವ ಇಲಾಖೆಗೆ ಸಿಂಹಪಾಲು
ನಿರೀಕ್ಷೆಯಂತೆಯೇ ಈ ಬಾರಿಯೂ ಶಿಕ್ಷಣ ಇಲಾಖೆಗೆ ಅತಿ ಹೆಚ್ಚು ಅಂದರೆ 47,224 ಕೋಟಿ ರೂ. ಅನುದಾನ ನೀಡುವ ಮೂಲಕ ಜ್ಞಾನದಾಸೋಹಕ್ಕೆ ಸರ್ಕಾರ ಒತ್ತು ನೀಡಿದೆ. ಇನ್ನು ಗೃಹಲಕ್ಷ್ಮಿಯಂತಹ ಯೋಜನೆಗಳನ್ನು ಒಳಗೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,929 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
| ಇಲಾಖೆಯ ಹೆಸರು | ಮಂಜೂರಾದ ಅನುದಾನ (ಕೋಟಿ ರೂ.) |
| ಶಿಕ್ಷಣ | 47,224 |
| ಮಹಿಳಾ ಮತ್ತು ಮಕ್ಕಳ ಕಲ್ಯಾಣ | 34,929 |
| ಇಂಧನ | 29,947 |
| ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR), | 26,559 |
| ಒಳಾಡಳಿತ ಮತ್ತು ಸಾರಿಗೆ | 23,100 |
| ನೀರಾವರಿ | 22,436 |
| ನಗರಾಭಿವೃದ್ಧಿ ಮತ್ತು ವಸತಿ | 22,203 |
| ಕಂದಾಯ | 19,843 |
| ಸಮಾಜ ಕಲ್ಯಾಣ | 18,612 |
| ಆರೋಗ್ಯ | 17,817 |
| ಲೋಕೋಪಯೋಗಿ (PWD) | 11,424 |
| ಕೃಷಿ | 8,373 |
| ಆಹಾರ ಮತ್ತು ನಾಗರಿಕ ಸರಬರಾಜು | 7,942 |
| ಪಶುಸಂಗೋಪನೆ ಮತ್ತು ಮೀನುಗಾರಿಕೆ | 4,084 |
| ಇತರೆ (ಸಾಲ ಮರುಪಾವತಿ ಇತ್ಯಾದಿ) | 1,72,757 |
ಬಜೆಟ್ ಪ್ರಮುಖ ಅಂಶಗಳು
ಇಂಧನ ವಲಯ: ಗೃಹಜ್ಯೋತಿ ಯೋಜನೆಯ ಅಡಿ ಉಚಿತ ವಿದ್ಯುತ್ ನೀಡುವ ಹಿನ್ನೆಲೆಯಲ್ಲಿ ಇಂಧನ ಇಲಾಖೆಗೆ 29,947 ಕೋಟಿ ರೂ. ನೀಡಲಾಗಿದ್ದು, ಸೌರಶಕ್ತಿ ಯೋಜನೆಗಳಿಗೂ ಒತ್ತು ನೀಡಲಾಗಿದೆ.
ನೀರಾವರಿ ಮತ್ತು ಕೃಷಿ: ರೈತರ ಜೀವನಾಡಿಯಾದ ನೀರಾವರಿ ಯೋಜನೆಗಳಿಗೆ 22,436 ಕೋಟಿ ರೂ. ಮೀಸಲಿಟ್ಟಿದ್ದು, ಕೃಷಿ ವಲಯಕ್ಕೆ 8,373 ಕೋಟಿ ರೂ. ನೀಡಲಾಗಿದೆ.
ಆರೋಗ್ಯ ಕ್ಷೇತ್ರ: ರಾಜ್ಯದಾದ್ಯಂತ ನಮ್ಮ ಕ್ಲಿನಿಕ್ ಮತ್ತು ಆಸ್ಪತ್ರೆಗಳ ಮೇಲ್ದರ್ಜೆಗೆ ಏರಿಸಲು 17,817 ಕೋಟಿ ರೂ. ವ್ಯಯಿಸಲಾಗುತ್ತಿದೆ.
ಗ್ಯಾರಂಟಿ ಯೋಜನೆಗಳ ಭಾರದ ನಡುವೆಯೂ ಸಿದ್ದರಾಮಯ್ಯ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮೀಸಲಿಡುವ ಮೂಲಕ ಆರ್ಥಿಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

