ಬೆಂಗಳೂರು :  ಈ ಬಾರಿ ರೈತಪರ ಬಜೆಟ್‌ ಮಂಡಿಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರದ ಸಿದ್ಧತೆ ಕೈಗೊಂಡಿದ್ದು, ರೈತರ ಬೆಳೆಸಾಲ ಯೋಜನೆಗೆ ಬಾಕಿ ಉಳಿದಿರುವ ಎಲ್ಲ ಹಣವನ್ನೂ ಹಂಚಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ಮಂಡಿಸಿದ್ದ ಬಜೆಟ್‌ ಗಾತ್ರ 2.18 ಲಕ್ಷ ಕೋಟಿ ರು.ಗಳಾಗಿದ್ದರೆ, ಫೆ.8ರಂದು ಮಂಡಿಸಲಿರುವ ಎರಡನೇ ಬಜೆಟ್‌ನ ಗಾತ್ರ 2.40 ಲಕ್ಷ ಕೋಟಿ ರು. ದಾಟುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ಸೋಮವಾರ ನಗರದಲ್ಲಿ ಮಾಧ್ಯಮ ಮುಖ್ಯಸ್ಥರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ಈ ಬಜೆಟ್‌ನಲ್ಲಿ ಸಾಲಮನ್ನಾ ಯೋಜನೆಯ ಎಲ್ಲ ಹಣ ಹಂಚಿಕೆ ಮಾಡಿ ಪೂರ್ಣಗೊಳಿಸಬೇಕು ಎಂಬ ಉದ್ದೇಶವಿದೆ. ನೋಡೋಣ ಎಂದು ಸೂಚ್ಯವಾಗಿ ಹೇಳಿದರು.

ರೈತರು ಸ್ವಾತಂತ್ರ್ಯಾನಂತರದ ಅವಧಿಯಿಂದ ಈವರೆಗೆ ಸಾಕಷ್ಟುಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದು ಗೊತ್ತಿದೆ. ಆದರೆ, ನಾನು ಒಂದೇ ರಾತ್ರಿಯಲ್ಲಿ ಎಲ್ಲವನ್ನೂ ಪರಿಹರಿಸಲು ಸಾಧ್ಯವಿಲ್ಲ. ನನಗೆ ಸಮಯ ಬೇಕು. ರೈತರ ಹಿತರಕ್ಷಣೆಗಾಗಿ ಮತ್ತು ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಉದ್ದೇಶದಿಂದ ನಾನು ಅನೇಕ ಯೋಜನೆಗಳನ್ನು ಹೊಂದಿದ್ದೇನೆ ಎಂದು ಹೇಳಿದರು.

ಸಾಲಮನ್ನಾದಿಂದ ರೈತರಿಗೆ ಶಾಶ್ವತ ಪರಿಹಾರ ಸಿಕ್ಕಂತಾಗುವುದಿಲ್ಲ. ಆದರೆ, ರಾಜ್ಯದ ಹಲವೆಡೆ ನಿರಂತರ ಬರ ಪರಿಸ್ಥಿತಿ ಇತ್ತು. ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರಿಗೆ ಕೃಷಿ ಪದ್ಧತಿಯಲ್ಲಿ ಮಾರ್ಪಾಡುಗಳನ್ನು ತರಬೇಕಾಗಿದೆ. ಇಲ್ಲದಿದ್ದರೆ ಎಷ್ಟುವರ್ಷ ಸಾಲಮನ್ನಾ ಮಾಡಿದರೂ ಪ್ರಯೋಜನವಾಗುವುದಿಲ್ಲ. ಸಾಲಮನ್ನಾ ಮಾಡಿದಾಕ್ಷಣ ರೈತರ ಮನೆ ಬಾಗಿಲಿಗೆ ಸೌಭಾಗ್ಯ ತಂದುಕೊಡುತ್ತೇವೆ ಎಂದು ಹೇಳುವುದಿಲ್ಲ. ರೈತರ ಸಮಗ್ರ ಏಳಿಗೆ ಬಗ್ಗೆ ಯೋಜನೆ ರೂಪಿಸದಿದ್ದರೆ ಮುಂದಿನ ದಿನಗಳಲ್ಲಿ ರೈತರ ಬದುಕು ಮತ್ತಷ್ಟುದುಸ್ತರವಾಗುತ್ತದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ಜನಪ್ರಿಯ ಯೋಜನೆಗಳಿಗೆ ಅನಿವಾರ್ಯವಾಗಿ ಮೊರೆ ಹೋಗಬೇಕಾಗಿದೆ. ಆರ್ಥಿಕ ಶಿಸ್ತಿನ ಚೌಕಟ್ಟು ದಾಟಿಲ್ಲ. ದಾಟುವುದೂ ಇಲ್ಲ. ಶಿಸ್ತು ಕಾಪಾಡುವಲ್ಲಿ ನಾವು ಎಡವಿಲ್ಲ ಎಂದು ಪ್ರತಿಪಾದಿಸಿದರು.

ರೈತರಿಗೆ ಉಚಿತ ವಿದ್ಯುತ್‌ಗಾಗಿ 11 ಸಾವಿರ ಕೋಟಿ ರು. ಸಬ್ಸಿಡಿ ನೀಡುತ್ತಿದ್ದೇವೆ. ಹಾಲಿಗೆ ಪ್ರೋತ್ಸಾಹಧನಕ್ಕೂ ಸಹಸ್ರಾರು ಕೋಟಿ ರು. ವ್ಯಯವಾಗುತ್ತಿದೆ. ಶೇ.85ರಷ್ಟುಜನರಿಗೆ ಬಿಪಿಎಲ್‌ ಕಾರ್ಡ್‌ಗಳನ್ನು ಹಂಚಿದ್ದೇವೆ. ಏಳು ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸುವುದನ್ನು ಐದು ಕೆ.ಜಿ.ಗೆ ಇಳಿಸಲು ಮುಂದಾದರೂ ನಂತರ ಬಂದ ಒತ್ತಡದಿಂದಾಗಿ ಆಗಲಿಲ್ಲ. ಆದರೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚಿನ ಜನಪ್ರಿಯ ಯೋಜನೆಗಳು ಅನುಷ್ಠಾನದಲ್ಲಿ ಇಲ್ಲ. ಹಿಂದಿನ ಸರ್ಕಾರದ ಯಾವ ಯೋಜನೆಗಳನ್ನೂ ಸ್ಥಗಿತಗೊಳಿಸದೆ ನಾನು ಕಳೆದ ಬಾರಿ ಬಜೆಟ್‌ ಮಂಡಿಸಿದೆ.

ಸಾಲಮನ್ನಾ ಯೋಜನೆಯಲ್ಲಿ ಬುಕ್‌ ಅಡ್ಜಸ್ಟ್‌ಮೆಂಟ್‌ಗೆ ಅವಕಾಶ ಕೊಟ್ಟಿಲ್ಲ. ರೈತನ ಅಕೌಂಟ್‌ಗೆ ನೇರವಾಗಿ ಹಣ ಹೋಗುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಒಂದು ನಯಾಪೈಸೆಯೂ ಮಧ್ಯವರ್ತಿಗಳ ಪಾಲಾಗದಂತೆ ಎಚ್ಚರಿಕೆ ವಹಿಸಿದ್ದೇವೆ. ಅದಕ್ಕಾಗಿಯೇ ಯೋಜನೆ ಜಾರಿಗೆ ತುಸು ವಿಳಂಬವಾಯಿತು. ಹಣದ ಸಮಸ್ಯೆ ಇಲ್ಲ. ಹಣ ಇಟ್ಟಿದ್ದೇವೆ. ಸಿದ್ದರಾಮಯ್ಯ ಕಾಲದಲ್ಲಿ ಮಾಡಿದ ಸಾಲಮನ್ನಾ ಯೋಜನೆಗಾಗಿ ಸುಮಾರು ಮೂರು ಸಾವಿರ ಕೋಟಿ ರು. ಮತ್ತು ಈಗ ನಾನು ಘೋಷಿಸಿದ ಸಾಲಮನ್ನಾ ಯೋಜನೆಗೆ ಒಂಬತ್ತು ಸಾವಿರ ಕೋಟಿ ರು. ಅವಕಾಶ ಕಲ್ಪಿಸಿದ್ದೇವೆ ಎಂದು ವಿವರಿಸಿದರು.

ಈ ಸಾಲಮನ್ನಾ ಯೋಜನೆಯಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನುಕೂಲವಾಗಿದೆ. ಉತ್ತರ ಕರ್ನಾಟಕಕ್ಕೆ 29 ಸಾವಿರ ಕೋಟಿ ರು., ದಕ್ಷಿಣ ಕರ್ನಾಟಕಕ್ಕೆ 12 ಸಾವಿರ ಕೋಟಿ ರು., ಮಧ್ಯ ಕರ್ನಾಟಕಕ್ಕೆ ಮೂರು ಸಾವಿರ ಕೋಟಿ ರು. ಮತ್ತು ಕರಾವಳಿಗೆ ಎರಡು ಸಾವಿರ ಕೋಟಿ ರು. ಹಂಚಿಕೆಯಾಗಲಿದೆ ಎಂದು ಹೇಳಿದರು.

ಸಾಲ ಮಾಡಲೇಬೇಕು- ಸಿಎಂ:  ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಸರ್ಕಾರದ ಯೋಜನೆಗಳಿಗಾಗಿ ಸಾಲ ಮಾಡಲೇಬೇಕಾಗುತ್ತದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಲದ ಪ್ರಮಾಣ 2015ರಲ್ಲಿ 54 ಲಕ್ಷ ಕೋಟಿ ರು. ಇದ್ದದ್ದು ಈಗ 84 ಲಕ್ಷ ಕೋಟಿ ರು. ಆಗಿದೆ ಎಂಬುದನ್ನು ಮಾಧ್ಯಮಗಳೇ ವರದಿ ಮಾಡಿವೆ. ಅಭಿವೃದ್ಧಿ ಮಾಡಬೇಕಾದಲ್ಲಿ ಪ್ರತಿಯೊಂದು ಸರ್ಕಾರ ಸಾಲ ಮಾಡಲೇಬೇಕಾಗುತ್ತದೆ. ಆದರೆ, ನಿಯಮಾವಳಿಯ ವ್ಯಾಪ್ತಿಯಲ್ಲಿಯೇ ಸಾಲ ಮಾಡುತ್ತೇವೆ ಎಂದು ಸಮರ್ಥಿಸಿಕೊಂಡರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಪೊಲೀಸರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಔರಾದ್ಕರ್‌ ವರದಿ ಬಗ್ಗೆ ಪರಿಶೀಲಿಸಲು ಸೂಚಿಸಿದ್ದೇನೆ. ಆ ವರದಿ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳಲ್ಲಿ ಭಿನ್ನಾಭಿಪ್ರಾಯವಿದೆ. ಹೀಗಾಗಿ, ಪರಿಹಾರ ಕಂಡು ಹಿಡಿಯುವಂತೆ ಹೇಳಿದ್ದೇನೆ. ಪೊಲೀಸರ ಶ್ರಮಕ್ಕೆ ತಕ್ಕಂತೆ ವೇತನ ನೀಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.