ಬೆಂಗಳೂರು[ಮಾ.08]: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಜಾರಿಗೆ ತಂದಿದ್ದ ‘ಶಾದಿ ಭಾಗ್ಯ’ ಯೋಜನೆಯನ್ನು ಬಿ.ಎಸ್‌. ಯಡಿಯೂರಪ್ಪ ತಮ್ಮ ಬಜೆಟ್‌ನಿಂದ ಕೈ ಬಿಟ್ಟಬೆನ್ನಲ್ಲೇ ಶಾದಿಭಾಗ್ಯ ಯೋಜನೆಯಡಿ ಯಾವುದೇ ಅರ್ಜಿ ಸ್ವೀಕರಿಸಿದಂತೆ ಅಲ್ಪಸಂಖ್ಯಾತ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ‘ಶಾದಿ ಭಾಗ್ಯ’ ಯೋಜನೆ ಬಹುತೇಕ ಕೈ ಬಿಟ್ಟಂತಾಗಿದೆ.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತ ವಧುವಿನ ವಿವಾಹ ಖರ್ಚು ಹಾಗೂ ಅಗತ್ಯಗಳಿಗೆ 50 ಸಾವಿರ ರು.ಗಳನ್ನು ಸರ್ಕಾರದಿಂದ ಒದಗಿಸಲು ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ವಿರೋಧಿಸಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ದೀರ್ಘಕಾಲದ ಧರಣಿ ಹೋರಾಟವನ್ನೂ ಬಿಜೆಪಿ ನಡೆಸಿತ್ತು.

ಇದೀಗ ಬಿ.ಎಸ್‌. ಯಡಿಯೂರಪ್ಪ ಅಧಿಕಾರಕ್ಕೆ ಬರುತ್ತಿದ್ದಂತೆ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಶಾದಿಭಾಗ್ಯ ಯೋಜನೆಗೆ ಹಣ ಮೀಸಲಿಟ್ಟಿಲ್ಲ. ಈ ಮೂಲಕ ಪರೋಕ್ಷವಾಗಿ ಯೋಜನೆ ಸ್ಥಗಿತಗೊಳಿಸಿದ್ದಾರೆ. ಬಜೆಟ್‌ನಲ್ಲಿ ಹಣ ಮೀಸಲಿಡದಿರುವ ಬಗ್ಗೆ ಅಲ್ಪಸಂಖ್ಯಾತ ಶಾಸಕರಾದ ಜಮೀರ್‌ ಅಹಮದ್‌ ಖಾನ್‌, ಎನ್‌.ಎ. ಹ್ಯಾರಿಸ್‌, ರಿಜ್ವಾನ್‌ ಅರ್ಷದ್‌, ತನ್ವೀರ್‌ ಸೇಠ್‌ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಯೋಜನೆ ಮುಂದುವರೆಸುವಂತೆ ಮನವಿ ಮಾಡಿದ್ದರು.

ಇದರ ಬೆನ್ನಲ್ಲೇ ಅಲ್ಪಸಂಖ್ಯಾತ ನಿರ್ದೇಶನಾಲಯದಿಂದ ಆದೇಶ ಹೊರಬಿದ್ದಿದ್ದು, 2020-21ನೇ ಸಾಲಿನ ಆಯವ್ಯಯದಲ್ಲಿ ಬಿದಾಯಿ ಯೋಜನೆಯಡಿ (ಶಾದಿಭಾಗ್ಯ) ಆರ್ಥಿಕ ಇಲಾಖೆಯು ಅನುದಾನ ನಿಗದಿಪಡಿಸದೇ ಇರುವುದರಿಂದ ಹೊಸ ಅರ್ಜಿಗಳ ಸ್ವೀಕೃತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಶಾದಿಭಾಗ್ಯದ ಹೊಸ ಅರ್ಜಿಗಳನ್ನು ಸ್ವೀಕರಿಸಬಾರದು. ಜತೆಗೆ ಯೋಜನೆಯಡಿ ಮಂಜೂರು ಮಾಡಲು ಬಾಕಿ ಇರುವ ಅರ್ಹ ಅರ್ಜಿಗಳ ಮಾಹಿತಿಯನ್ನು ಮಾ.9 ರ ಒಳಗಾಗಿ ನಿರ್ದೇಶನಾಲಯಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.