*  ಭ್ರಷ್ಟರಲ್ಲೂ ಜಾತಿ-ಧರ್ಮ ಅರಸುತ್ತಿರುವ ಡಿ.ಕೆ. ಶಿವಕುಮಾರ್*  ರಾಹುಲ್‌ ಗಾಂಧಿ ಎದುರು ಕಣ್ಣೀರಿಟ್ಟರೂ ಪ್ರಯೋಜನವಿಲ್ಲ*  ಭ್ರಷ್ಟರಲ್ಲೂ ವರ್ಗ, ಜಾತಿ ಹುಡುಕುತ್ತಿರುವುದು ದುರಂತವೇ ಸರಿ  

ಬೆಂಗಳೂರು(ಆ.06): ಶಾಸಕ ಜಮೀರ್‌ ಅಹ್ಮದ್‌ ಖಾನ್‌ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ನಡೆಸಿದ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ರಾಜ್ಯ ಬಿಜೆಪಿ ತೀವ್ರ ತರಾಟೆಗೆ ತೆಗೆದುಕೊಂಡಿದೆ. 

ಭ್ರಷ್ಟ ಕಾಂಗ್ರೆಸ್‌ ಶಾಸಕನ ಪರವಾಗಿ ಭ್ರಷ್ಟ ಕಾಂಗ್ರೆಸ್‌ ಅಧ್ಯಕ್ಷ ವಕಾಲತ್ತು ವಹಿಸುತ್ತಿದ್ದಾರೆ. ಒಂದು ವರ್ಗವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎನ್ನುವ ಮೂಲಕ ಶಿವಕುಮಾರ್‌ ಭ್ರಷ್ಟರಲ್ಲೂ ಜಾತಿ-ಧರ್ಮ ಅರಸುತ್ತಿದ್ದಾರೆ. ಭ್ರಷ್ಟರಲ್ಲೂ ವರ್ಗ, ಜಾತಿ ಹುಡುಕುತ್ತಿರುವುದು ದುರಂತವೇ ಸರಿ ಎಂದು ಟೀಕಿಸಿದೆ.

ಪದಾಧಿಕಾರಿಗಳ ನೇಮಕಕ್ಕೂ ಪರಿತಪಿಸುತ್ತಿರುವ ಡಿ.ಕೆ.ಶಿವಕುಮಾರ್‌ ಅವರ ಸುತ್ತಲೂ ಶತ್ರುಗಳು ತುಂಬಿಕೊಂಡಿದ್ದಾರೆ. ಐವರು ಕಾರ್ಯಾಧ್ಯಕ್ಷರ ನೇಮಕವಾಗುವಂತೆ ನೋಡಿಕೊಳ್ಳುವ ಮೂಲಕ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರ ಕೈ ಕಟ್ಟಿಹಾಕಿದ್ದಾರೆ. ರಾಹುಲ್‌ ಗಾಂಧಿ ಎದುರು ಕಣ್ಣೀರಿಟ್ಟರೂ ಪ್ರಯೋಜನವಿಲ್ಲದಂತಾಗಿರುವ ಏಕಾಂಗಿ ಮಹಾನಾಯಕ ಎಂದು ಟ್ವೀಟ್‌ ಮೂಲಕ ಕಿಡಿಕಾರಿದೆ.

ಡಿಲೀಟ್ ಮಾಡಿಸಿದ್ದರೂ ಜಮೀರ್‌ಗೆ ಮುಳುವಾಯ್ತಾ ಕ್ಲೌಡ್ ಮಾಹಿತಿ.?

ಎಐಸಿಸಿಗೆ ಹಂಗಾಮಿ ಅಧ್ಯಕ್ಷರು ಕಾಯಂ ಆಗಿದ್ದಾರೆ. ಏಕೆಂದರೆ ಕುಟುಂಬದ ಅಧಿಕಾರ ಕಾಪಾಡಿಕೊಳ್ಳುವುದಕ್ಕೆ ಇರುವುದೊಂದೇ ದಾರಿ. ಆದರೆ ಕೆಪಿಸಿಸಿ ಅಧ್ಯಕ್ಷರಿಗೆ ಏನಾಗಿದೆ? ಅಧಿಕಾರ ಸ್ವೀಕರಿಸಿ ವರ್ಷವಾದರೂ ಮಹಾನಾಯಕ ಇನ್ನು ಏಕಾಂಗಿಯಾಗಿಯೇ ಉಳಿದಿದ್ದಾರೆ. ಪದಾಧಿಕಾರಿಗಳನ್ನು ನೇಮಿಸಿಕೊಳ್ಳಲಾರದೆ ಪರದಾಡುತ್ತಿದ್ದಾರೆ.

ಐಟಿ, ಇಡಿ, ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುವ ಚಾಳಿ ಇರುವುದು ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ. ಇದಕ್ಕೆ ದೇಶ ಹಲವು ಬಾರಿ ಸಾಕ್ಷಿಯಾಗಿದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಎಸಿಬಿ ಸ್ಥಾಪನೆ ಮಾಡಿ ಅದನ್ನು ರಾಜಕೀಯ ದ್ವೇಷಕ್ಕೆ ಬಳಸಿಕೊಂಡಿದ್ದನ್ನು ನಾಡಿನ ಜನತೆ ಇನ್ನೂ ಮರೆತಿಲ್ಲ. ಎರಡು ವರ್ಷ ಆಯ್ತು ಎಂಬ ಕಾರಣಕ್ಕೆ ಐಎಂಎ ಪ್ರಕರಣದ ತನಿಖೆಯನ್ನು ಈಗ ನಡೆಸಬಾರದೆ ಶಿವಕುಮಾರ್‌ ಅವರೇ? ಬಡವರು ಹತ್ತಾರು ವರ್ಷ ಶ್ರಮವಹಿಸಿ ಗಳಿಸಿದ ಉಳಿಕೆಯನ್ನು ಜಮೀರ್‌ ಕಬಳಿಸಿದಾಗ ನೀವ್ಯಾಕೆ ಮೌನವಾಗಿದ್ದಿರಿ? ನಿಮಗೂ ಅದರಲ್ಲಿ ಪಾಲು ಇತ್ತೇ? ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.