* ಹಿಂದೂಗಳ ಹತ್ಯೆಗೆ ಮರುಕಪಡದ ಸಿದ್ದು: ಕಟೀಲ್* ಮತ್ತೆ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ ನಳಿನ್ ಕುಮಾರ್ ಕಟೀಲ್* ಬಿಜೆಪಿ ಸಂಘಟನಾತ್ಮಕ ಸಭೆಯಲ್ಲಿ ಸಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಾಗ್ದಾಳಿ
ಬೆಂಗಳೂರು(ಏ.25): ಮೃಧು ಧೋರಣೆಯಿಂದ ಹಿಂದುತ್ವ ಕುರಿತು ಮಾತನಾಡುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ಹತ್ಯೆಗೀಡಾದ ಹಿಂದೂ ಕಾರ್ಯಕರ್ತರ ಸಾವಿಗೆ ಮರುಕ ಪಡಲಿಲ್ಲ. ಅವರ ಕಣ್ಣಲ್ಲಿ ಯಾಕೆ ಹನಿ ಕಣ್ಣೀರು ಬರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಬೆಂಗಳೂರು ಬೆಂಗಳೂರು ಮಹಾನಗರ ಬಿಜೆಪಿ ವತಿಯಿಂದ ಭಾನುವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಂಘಟನಾತ್ಮಕ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರ ಇಲ್ಲದಿದ್ದಾಗ ರಾಜ್ಯದಲ್ಲಿ ಗಲಭೆ ಎಬ್ಬಿಸುವುದು ಕಾಂಗ್ರೆಸ್‌ನ ಇತಿಹಾಸ. ಹತ್ಯೆಯಾದ ಹಿಂದೂ ಕಾರ್ಯಕರ್ತರು ಹಾಗೂ ಹಿಂದುತ್ವ ಕುರಿತು ಈಗ ಮೃಧುವಾಗಿ ಮಾತನಾಡುವ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಹತ್ಯೆಗೀಡಾದ 23 ಹಿಂದುಗಳ ಸಾವಿಗೆ ಅವರು ಮರುಕಪಡಲಿಲ್ಲ. ಮಹಿಳೆಯರು, ಹಿಂದುಗಳು ಮತ್ತು ಅಧಿಕಾರಿಗಳಿಗೆ ಕಾಂಗ್ರೆಸ್ ಅವಧಿಯಲ್ಲಿ ರಕ್ಷಣೆ ಇರಲಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆಯದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಹುಬ್ಬಳ್ಳಿ ಗಲಭೆ, ಶಿವಮೊಗ್ಗದಲ್ಲಿನ ಹರ್ಷ ಹತ್ಯೆ ಹಿಂದೆಯೂ ಕಾಂಗ್ರೆಸ್ ಕೈವಾಡವಿದೆ. ಭಯೊತ್ಪಾದನೆಯನ್ನು ಕಾಂಗ್ರೆಸ್ ಸದಾ ಬೆಂಬಲಿಸುತ್ತಲೇ ಬಂದಿದೆ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್ ಪಕ್ಷ. ರಾಷ್ಟ್ರ, ರಾಜ್ಯದ ಕಾಂಗ್ರೆಸ್‌ನ ಕೆಲ ನಾಯಕರು ಜಾಮೀನಿನಲ್ಲಿ ಹೊರಗಿರುವುದೇ ಅದಕ್ಕೆ ಸಾಕ್ಷಿ ಎಂದು ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಕೋವಿಡ್ ಕಾಲದಲ್ಲೂ ಅನೇಕ ಜನಪರ ಯೋಜನೆ ಜಾರಿ ಮಾಡಿದೆ. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅರಾಜಕತೆ ಸೃಷ್ಟಿಸಲು ಹೊರಟಿದ್ದಾರೆ. ಕಾಂಗ್ರೆಸ್ ಶಾಸಕರು ತಮ್ಮನ್ನು ಪ್ರಶ್ನೆ ಮಾಡಿದರೆಂದು ಯುವಕನಿಗೆ ಕಪಾಳಮೋಕ್ಷ ಮಾಡಿದರು ಆ ಬಗ್ಗೆ ಇಬ್ಬರು ನಾಯಕರು ಏಕೆ ಪ್ರಶ್ನೆಸುತ್ತಿಲ್ಲ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ಎಸ್.ಟಿ. ಸೋಮಶೇಖರ್, ಎನ್. ಮುನಿರತ್ನ, ಕೆ.ಗೋಪಾಲಯ್ಯ, ಭೈರತಿ ಬಸವರಾಜ, ಸಂಸದರಾದ ತೇಜಸ್ವಿ ಸೂರ್ಯ, ಕೆ.ಸಿ.ರಾಮಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕಾರ್ಯದರ್ಶಿ ತುಳಸಿ ಮುನಿರಾಜುಗೌಡ, ಶಾಸಕರಾದ ಎಸ್. ರಘು ಮತ್ತು ಸತೀಶ್ ರೆಡ್ಡಿ, ವಿಧಾನಪರಿಷತ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
‘ಕೈ’ ಕುರ್ಚಿ ಕಲಹ: ಬಿಜೆಪಿಗೆ 150 ಸ್ಥಾನ
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಕುರಿತು ಸ್ಪಷ್ಟನಿಲುವಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಕುರ್ಚಿ ಕಲಹ ಆರಂಭವಾಗಿದೆ. ಅಕ್ಟೋಬರ್ ವೇಳೆಗೆ ಕಾಂಗ್ರೆಸ್ ಇಬ್ಭಾಗ ಆಗಲಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿಯ ಗಲಭೆ ವೇಳೆ ಕೈ ಮುಖಂಡರು ತಮ್ಮ ಶಾಸಕರ ಪರ ನಿಲ್ಲಲಿಲ್ಲ. ಇಂದಿರಾಗಾಂಧಿ, ಸೋನಿಯಾಗಾಂಧಿ ಮತ್ತಿತರರಿಗೆ ಜೈಕಾರ ಹಾಕುವ ಕಾಂಗ್ರೆಸ್ ಮುಖಂಡರು, ದೇಶಪÜರ ಜೈಕಾರ ಕೂಗುವುದಿಲ್ಲ. ಸದ್ಯ ರಾಜ್ಯದಲ್ಲಿ ಬಿಜೆಪಿ ಅಲೆ ಕಂಡು ಕಾಂಗ್ರೆಸ್‌ನವರಿಗೆ ದಿಗಿಲು ಬಂಡಿದಂತಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ150 ಸ್ಥಾನ ಗಳಿಸಿ ಪುನಃ ಅಧಿಕಾರ ಹಿಡಿಯಲಿದೆ ಎಂದು ಕಟಿಲ್ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಬೆಂಗಳೂರು ಘಟಕದಿಂದ ನಡೆದ ಸಂಘಟನಾತ್ಮಕ ಸಭೆಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಚಾಲನೆ ನೀಡಿದರು. ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಎಸ್.ಟಿ.ಸೋಮಶೇಖರ್, ಎನ್.ಮುನಿರತ್ನ, ಕೆ.ಗೋಪಾಲಯ್ಯ, ಭೈರತಿ ಬಸವರಾಜ, ತೇಜಸ್ವಿ ಸೂರ್ಯ, ಕೆ.ಸಿ.ರಾಮಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.
