ರಾಜ್ಯದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಹೇಳಿರುವ ಹೇಳಿಕೆ ಅದು ವೈಯಕ್ತಿಕ ಹೇಳಿಕೆಯಾಗಿದೆ. ಅದು ಪಕ್ಷದ ಹೇಳಿಕೆಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರು (ಜ.15): ರಾಜ್ಯದಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಹೇಳಿರುವ ಹೇಳಿಕೆ ಅದು ವೈಯಕ್ತಿಕ ಹೇಳಿಕೆಯಾಗಿದೆ. ಅದು ಪಕ್ಷದ ಹೇಳಿಕೆಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

2024ರ‌ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಬಳಿಯ ಮಾರುತಿ ಆಸ್ಪತ್ರೆ ಮುಂದಿನ ಗೋಡೆ ಮೇಲೆ 'ಮತ್ತೊಮ್ಮೆ ಮೋದಿ' ಗೋಡೆ ಬರಹದ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಮೋದಿಜಿ ಮೂರನೇ ಬಾರಿಗೆ ಪ್ರಧಾನಿ ಆಗಬೇಕು. ರಾಷ್ಟ್ರೀಯ ಅಧ್ಯಕ್ಷರು ಗೋಡೆ ಬರಹಕ್ಕೆ ಇದಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯಾದ್ಯಂತ ಗೋಡೆ ಬರಹಕ್ಕೆ ಚಾಲನೆ ನೀಡುತ್ತೇವೆ. ಕಾರ್ಯಕರ್ತರು ಮಾಡಲಿದ್ದಾರೆ. ಮೋದಿಯವರ ಯೋಜನೆ ಜನರಿಗೆ ಮನೆ ಮನೆ ತಲಪುತ್ತಿದೆ. ಇನ್ನು ಗೋಡೆ ಬರಹದ ಕಾರ್ಯಕ್ರಮಕ್ಕೆ ನನ್ನೊಂದಿಗೆ ಬೆಂಗಳೂರು ನಗರ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾದ ಎಸ್.ಹರೀಶ್, ಪ್ರೀತಮ್ ಗೌಡ, ಸಪ್ತಗಿರಿ ಗೌಡ ಭಾಗಿ‌ಯಾಗಿದ್ದರು ಎಂದು ಹೇಳಿದರು.

ಹಾವೇರಿ ಗ್ಯಾಂಗ್‌ ರೇಪ್ ಸಂತ್ರಸ್ತೆ ಬಗ್ಗೆ ಮಾನವೀಯತೆಯನ್ನೂ ತೋರಿಸದ ಸಿಎಂ ಸಿದ್ದರಾಮಯ್ಯ!

ಸಂಸದ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆಗಳ ವಿಚಾರದ ಕುರಿತು ಮಾತನಾಡಿ, ಮೊದಲೇ ರಾಜಕಾರಣಿಗಳು ಅಂದ್ರೆ ಜನ‌ ನಂಬಲ್ಲ, ಅಂಥ‌ ಪರಿಸ್ಥಿತಿ‌ ಇದೆ. ಯಾರೇ ಇದ್ರೂ ನಮ್ಮ ಹೇಳಿಕೆ ಗಂಭೀರವಾಗಿರಬೇಕು. ಸಮಾಜ ಒಪ್ಪುವಂತೆ ಮಾತು ಇರಬೇಕು. ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗಳನ್ನು ನಾನೂ ಗಮನಿಸಿದ್ದೇನೆ. ನಾನು ಅವರ ಜತೆಗೂ ಇದರ ಬಗ್ಗೆ ಮಾತಾಡ್ತೇನೆ. ಅನಂತ ಕುಮಾರ್ ಹೆಗಡೆ ಜೊತೆ ವೈಯಕ್ತಿಕವಾಗಿ ಮಾತನಾಡುತ್ತೇನೆ. ಅದು ಅದು ಅವರ ವೈಯಕ್ತಿಕ ನಿಲುವು, ಅದು ಪಕ್ಷದ ನಿಲುವು ಅಲ್ಲ. ಈ ವಿಷಯದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸುತ್ತೇನೆ. ಯಾರೇ ಇರಲಿ, ಮಾತನಾಡೋದನ್ನ ಜನ ಗ್ರಹಿಸ್ತಾರೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಪರೋಕ್ಷವಾಗಿ ಬೇಸರ ವ್ಯಕ್ತ ಪಡಿಸಿದರು.

ಮಾಜಿ ಸಚಿವ ವಿ. ಸೋಮಣ್ಣ ದೆಹಲಿ ಭೇಟಿ ವಿಚಾರದ ಕರಿತು ಮಾತನಾಡಿ, ಇತ್ತೀಚೆಗೆ ‌ನಡೆದ‌ ಚುನಾವಣೆಯಲ್ಲಿ ಎರಡೂ‌ ಕಡೆ ಗೆಲ್ತೇವೆ ಅಂತಾ ಹೋಗಿದ್ದರು. ಆದ್ರೆ ಪರಾಭವಗೊಂಡಿದ್ದಾರೆ. ಈ ಬಗ್ಗೆ ನಮಗೂ ನೋವಿದೆ. ಸೋಮಣ್ಣ ‌ಲೋಕಸಭಾ ಸ್ಪರ್ಧೆಗೆ ರಾಜ್ಯ‌ ಬಿಜೆಪಿ ಸಹಮತ‌ ಇದೆಯಾ? ಎಂದು ಕೇಳಿದ್ದಕ್ಕೆ ಯಾರೇ ಸ್ಪರ್ಧಿಸಿದರೂ‌ ಸಹಮತವಿದೆ. ಆದರೆ, ಸ್ಪರ್ಧೆಯ ಬಗ್ಗೆ ರಾಷ್ಟ್ರೀಯ ‌ನಾಯಕರು ತೀರ್ಮಾನ ಮಾಡಲಿದ್ದಾರೆ. ಲೋಕಸಭಾ ಸ್ಪರ್ಧೆಗೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡೋದು ವಿಜಯೇಂದ್ರ‌ ಅಲ್ಲ, ಹೈಕಮಾಂಡ್‌ ತೀರ್ಮಾನ ಮಾಡೋದು. ಹೈಕಮಾಂಡ್ ತೀರ್ಮಾನವನ್ನು ‌ಕಾರ್ಯಕರ್ತರಾಗಿ ನಾವು ಪಾಲನೆ ಮಾಡ್ತೇವೆ ಎಂದರು.

ಶ್ರೀರಾಮ ಜನ್ಮಸ್ಥಳ ಅಯೋಧ್ಯೆ ಬೆನ್ನಲ್ಲೇ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯೂ ವಿಸ್ಮಯ ತಾಣವಾಗುತ್ತಿದೆ!

ಹಾನಗಲ್ ಪ್ರಕರಣದಲ್ಲಿ ನಾನು ರಾಜಕೀಯ ಮಾಡೋದಿಲ್ಲ. ಬೆಳಗಾವಿ ಘಟನೆ ಇರಬಹುದು, ಹಾನಗಲ್ ಪ್ರಕರಣ ಇರಬಹುದು ಎಫ್‌ಐಆರ್‌ ಕೂಡ ಹಾಕಿರಲಿಲ್ಲ. ಈ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಪೊಲೀಸ್ ವ್ಯವಸ್ಥೆ ಕೂಡ ರಾಜ್ಯ ಸರ್ಕಾರದ ತಾಳಕ್ಕೆ ಕುಣಿಯುತ್ತಿದೆ. ಹಾನಗಲ್ ಪ್ರಕರಣ ಎಸ್‌ಐಟಿ ತನಿಖೆ ಆಗಬೇಕು. ಸಿಎಂ ಸಿದ್ದರಾಮಯ್ಯ ಉಡಾಫೆ ಆಗಿ ಮಾತಾಡ್ತಾ ಇದ್ದಾರೆ. ಇದು ಹೆಣ್ಣಿನ ಗೌರವ, ಮಾನದ ಪ್ರಶ್ನೆ ,ಇದು ರಾಜಕೀಯ ಅಲ್ಲ. ಸಿದ್ದರಾಮಯ್ಯ ಹುಡುಗಾಟ ಮಾಡೋದು ಕೈ ಬಿಡಬೇಕು ಎಂದು ಕಿಡಿ ಕಾರಿದರು.