* ರಾಜ್ಯಪಾಲರನ್ನ ಭೇಟಿ ಮಾಡಿದ ಕರ್ನಾಟಕ ಬಿಜೆಪಿ ನಿಯೋಗ* ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಭೇಟಿ*  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಕಟೀಲ್ ನಿಯೋಗ

ಬೆಂಗಳೂರು, (ಜ.07): ಪಂಜಾಬ್‌ನ ಮೇಲ್ಸೇತುವೆ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಕಾರನ್ನು 20‌ ನಿಮಿಷ ತಡೆ ಹಿಡಿದ ವಿಚಾರ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ನರೇಂದ್ರ ಮೋದಿ ಯ ಜೀವಕ್ಕೆ ಕಟಂಕವಾಗುವ ರೀತಿ ಪಂಜಾಬ್ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ ಎಂದು ಟೀಕೆಗಳು ವ್ಯಕ್ತವಾಗಿವೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಸರ್ಕಾರವನ್ನು ವಜಾ ಮಾಡುವಂತೆ ಕರ್ನಾಟಕ ಬಿಜೆಪಿ ನಿಯೋಗ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ.

PM Modi Security Breach: ಎಲ್ಲಾ ದಾಖಲೆ ಸುರಕ್ಷಿತವಾಗಿಡಲು ಸುಪ್ರಿಂ ಆದೇಶ!

 ಪ್ರಧಾನಿ ನರೇಂದ್ರ ಮೋದಿಯವರಿಗೆ ಸರಿಯಾದ ಭದ್ರತೆ ಒದಗಿಸದೆ ತನ್ನ ಕರ್ತವ್ಯದಿಂದ ವಿಮುಖವಾಗಿರುವ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಮತ್ತು ಸರ್ಕಾರಿ ಯಂತ್ರವು ಖಲಿಸ್ತಾನ್ ಪರ ಅಂಶಗಳಿಂದ ಮುಕ್ತವಾಗುವವರೆಗೆ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ರಾಜ್ಯಾಧ್ಯಕ್ಷರು ನಳಿನ್ ಕುಮಾರ್ ಕಟೀಲ್ ನೇತೃತ್ವದ ಬಿಜೆಪಿ ನಿಯೋಗ ಇಂದು (ಶುಕ್ರವಾರ) ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.

 ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ನಳಿನ್ ಕುಮಾರ್ ಕಟೀಲ್ ನೇತೃತ್ವದ ಬಿಜೆಪಿ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಸಚಿವರುಗಳಾದ ಡಾ.ಅಶ್ವಥ್ ನಾರಾಯಣ, ಎಸ್ ಟಿ ಸೋಮಶೇಖರ್ ಮತ್ತು ಬೈರತಿ ಬಸವರಾಜು ಸಹ ಈ ನಿಯೋಗದಲ್ಲಿದ್ದರು.

Scroll to load tweet…

ಪಂಜಾಬ್ ಸರ್ಕಾರದ ಖಲಿಸ್ತಾನ್ ಮತ್ತು ಇತರ ಪಡೆಗಳೊಂದಿಗಿನ ಕ್ರಿಮಿನಲ್ ಬಾಂಧವ್ಯದ ಮೂಲಕ ಪ್ರಧಾನಮಂತ್ರಿಯವರನ್ನು ಗಂಭೀರವಾದ ಭದ್ರತಾ ಅಪಾಯಕ್ಕೆ ತಳ್ಳುವ ಉದ್ದೇಶಪೂರ್ವಕ ಪ್ರಯತ್ನ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭದಲ್ಲಿ ಭದ್ರತೆಯ ವಿಚಾರದಲ್ಲಿ ಅದು ನಿರ್ಲಕ್ಷ್ಯ ತೋರಿದೆ. ಖಲಿಸ್ತಾನ್ ಮತ್ತು ಭಾರತದ ಇತರ ಶತ್ರು ಶಕ್ತಿಗಳೊಂದಿಗೆ ಅದರ ಸ್ಪಷ್ಟವಾದ ಸಹಭಾಗಿತ್ವವನ್ನು ಇದು ಸಾಬೀತು ಪಡಿಸುವಂತಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಿದೆ.

ನರೇಂದ್ರ ಮೋದಿಯವರು ಸೇರಿದಂತೆ ರಾಷ್ಟ್ರೀಯವಾದಿಗಳ ವಿರುದ್ಧ ದೇಶವಿರೋಧಿ ಶಕ್ತಿಗಳು ಸಂಚು ಹೂಡಿವೆ. ಇದಕ್ಕೆ ಅಲ್ಲಿನ ಸರಕಾರವು ಕೈಜೋಡಿಸಿದೆ. ಇದು ಸಂಪೂರ್ಣವಾಗಿ ಆತಂಕಕಾರಿ ಮತ್ತು ಅಪಾಯಕಾರಿ ಆಯಾಮವಾಗಿದೆ, ಈ ಕ್ರಮ ಅತ್ಯಂತ ಖಂಡನೀಯ ಎಂದು ಹೇಳಿದೆ.

ಎಸ್‍ಪಿಜಿಗೆ ಪಂಜಾಬ್ ಡಿಜಿಪಿ ಅನುಮತಿ ನೀಡಿದ ನಂತರವೇ ಪ್ರಧಾನಿಯವರು ಭಟಿಂಡಾ ವಾಯುನೆಲೆಯಿಂದ ರಸ್ತೆ ಮೂಲಕ ತೆರಳಿದರು. ಪ್ರತಿಕೂಲ ಹವಾಮಾನದಿಂದಾಗಿ ಪ್ರಧಾನಿಯ ಹೆಲಿಕಾಪ್ಟರ್ ಟೇಕ್ ಆಫ್ ಆಗಲಿಲ್ಲ. ಪಂಜಾಬ್ ಪೊಲೀಸ್ ಮತ್ತು ಪಂಜಾಬ್ ಸರ್ಕಾರದ ಎಲ್ಲಾ ಅನುಮತಿಗಳನ್ನು ಪಡೆದ ನಂತರ ಪ್ರಧಾನಿಯವರ ಬೆಂಗಾವಲು ಪಡೆ ಭಟಿಂಡಾದಿಂದ ರಸ್ತೆಯ ಮೂಲಕ ಹೊರಟಿತ್ತು ಎಂದು ವಿವರಿಸಲಾಗಿದೆ.

ಪ್ರಧಾನಿಯವರ ಭದ್ರತೆಯ ವಿಚಾರದಲ್ಲಿ ವಿಫಲವಾಗಿರುವ ಪಂಜಾಬ್ ಸರ್ಕಾರವನ್ನು ತಕ್ಷಣವೇ ವಜಾಗೊಳಿಸಬೇಕೆಂದು ಕರ್ನಾಟಕ ಬಿಜೆಪಿ ಆಗ್ರಹಿಸುತ್ತದೆ. ಪಂಜಾಬ್ ಸರ್ಕಾರವು ಪ್ರಧಾನಿಯವರ ಜೀವದ ವಿಚಾರದಲ್ಲಿ ಚೆಲ್ಲಾಟವಾಡಲು ಮುಂದಾಗಿತ್ತು. ಪ್ರಧಾನಿಯವರು ಸುರಕ್ಷಿತವಾಗಿ ದೆಹಲಿಗೆ ಮರಳುವುದು ದೇವರ ಇಚ್ಛೆ ಮಾತ್ರ. 130 ಕೋಟಿ ಭಾರತೀಯರ ಸಾಮೂಹಿಕ ಪ್ರಾರ್ಥನೆಯೇ ಪ್ರಧಾನಿಯವರ ಜೀವ ಉಳಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Scroll to load tweet…