ಬೆಂಗಳೂರು(ಮೇ.27): ಉತ್ತರ ಭಾರತಕ್ಕೆ ದಾಂಗುಡಿಯಿಟ್ಟು ಲಕ್ಷಾಂತರ ಎಕರೆ ಬೆಳೆ ನಾಶ ಮಾಡಿರುವ ಮಿಡತೆಗಳ ಹಿಂಡಿನ ದಾಳಿಯ ಆತಂಕ ಇದೀಗ ರಾಜ್ಯಕ್ಕೂ ಆರಂಭವಾಗಿದೆ.

"

ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ ಭಾರಿ ಆರ್ಭಟ ನಡೆಸಿರುವ ಲಕ್ಷಾಂತರ ಮಿಡತೆಗಳಿರುವ ಹಿಂಡು ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ಸೋಮವಾರ ಕಾಲಿಟ್ಟಿದೆ. ಒಂದು ವೇಳೆ ಮಹಾರಾಷ್ಟ್ರದಲ್ಲಿ ಗಾಳಿಯು ದಕ್ಷಿಣದತ್ತ ಬೀಸತೊಡಗಿದರೆ ಈ ಮಾರಕ ಮಿಡತೆ ಹಿಂಡು ರಾಜ್ಯದ ಬೀದರ್‌ಗೆ ಆಗಮಿಸುವ ಆತಂಕ ಹುಟ್ಟಿಕೊಂಡಿದೆ. ಹೀಗಾಗಿ ರಾಜ್ಯ ಸರ್ಕಾರ ಮಿಡತೆ ದಾಳಿಗೆ ಪೂರ್ವ ಸಿದ್ಧತೆ ಆರಂಭಿಸಿದೆ.

ಮಿಡತೆ ಏನೀ ನಡತೆ? ಬಿರುಗಾಳಿಯಂತೆ ದಾಳಿ ಮಾಡುವ ಕೀಟಗಳು

ಮಿಡತೆ ದಾಳಿ ಆತಂಕವಿರುವ ಹಿನ್ನೆಲೆಯಲ್ಲಿ ಬೀದರ್‌ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್‌ ಕುಮಾರ್‌ ದೀಕ್ಷಿತ್‌ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಮಧ್ಯಪ್ರದೇಶ ಮಾರ್ಗವಾಗಿ ಮಹಾರಾಷ್ಟ್ರ ಪ್ರವೇಶಿಸಿರುವ ಕೋಟ್ಯಂತರ ಮಿಡತೆಗಳು ಪ್ರಸ್ತುತ ಮಹಾರಾಷ್ಟ್ರದ ಮೋರ್ಶಿ, ಅಸ್ಥಿ, ವಾಡಾಲಾ, ಸಾಹುರ್‌, ಅಮರಾವತಿ ಹಾಗೂ ವಾದ್ರಾ ಜಿಲ್ಲೆಗಳಲ್ಲಿ ಹಾವಳಿ ಆರಂಭಿಸಿವೆ. ಮಹಾರಾಷ್ಟ್ರದಲ್ಲಿರುವ ಈ ಮಿಡತೆಗಳು ಗಾಳಿಯ ಬೀಸುವಿಕೆ ಆಧರಿಸಿ ತಮ್ಮ ಪ್ರಯಾಣ ಮುಂದುವರೆಸುತ್ತವೆ. ದಕ್ಷಿಣದತ್ತ ಗಾಳಿ ಬೀಸತೊಡಗಿದರೆ ಅವು ಕರ್ನಾಟಕಕ್ಕೂ ಆಗಮಿಸುವ ಭೀತಿಯಿದೆ. ರಾಜ್ಯದ ಬೀದರ್‌ ಈ ಮಿಡತೆಯಿರುವ ಪ್ರದೇಶಗಳಿಂದ 428 ಕಿ.ಮೀ. ದೂರದಲ್ಲಿದೆ. ಅಲ್ಲಿಂದ ಬೀದರ್‌ ಮುಟ್ಟಲು ಈ ಮಿಡತೆಗಳ ಹಿಂಡಿಗೆ ಎರಡು ದಿನ ಬೇಕಾಗಬಹುದು.

ಇಷ್ಟಕ್ಕೂ ಮಿಡತೆ ದಾಳಿ ಕುರಿತು ಈವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಆದರೂ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಉತ್ತರ ಭಾರತಕ್ಕೆ ಭೀಕರ ಮಿಡತೆ ದಾಳಿ: 8000 ಕೋಟಿ ರು. ಬೆಳೆ ನಷ್ಟ ಆತಂಕ!

ಮಿಡತೆ ದಾಳಿಯಾದರೆ ಏನು ಮಾಡಬೇಕು?

ಬೀದರ್‌ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮಿಡತೆ ದಾಳಿಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಮಿಡತೆ ದಾಳಿ ಸಾಧ್ಯತೆ ಕಂಡುಬಂದರೆ ರೈತರಿಗೆ ಶೀಘ್ರ ಮಾಹಿತಿ ನೀಡಬೇಕು. ದಾಳಿ ಸಂಭವಿಸುವುದು ಖಚಿತವಾದರೆ ಹೊಲ, ಗದ್ದೆಗಳಲ್ಲಿ ಬೆಳೆದ ಬೆಳೆ ಮೇಲೆ ಮಿಡತೆ ಕೂರದಂತೆ ದೊಡ್ಡ ಶಬ್ದ ಮಾಡುತ್ತಿರಬೇಕು. ಮಿಡತೆಗಳು ಎಲ್ಲಿ ಹೋಗಿ ಕುಳಿತುಕೊಳ್ಳುತ್ತವೆ ಎಂಬುದನ್ನು ಪತ್ತೆ ಮಾಡಿ ಅಗ್ನಿಶಾಮಕ ವಾಹನದಲ್ಲಿ ನೀರಿನೊಂದಿಗೆ ಕೀಟನಾಶಕ ಔಷಧಿ ಮಿಶ್ರಣ ಮಾಡಿ ಸಿಂಪಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮಿಡತೆಗಳ ದಾಳಿಗೆ ಹೈರಾಣ: ನ್ಯಾಶನಲ್ ಎಮರ್ಜೆನ್ಸಿ ಘೋಷಿಸಿದ ಪಾಕಿಸ್ತಾನ!

ರಾಜ್ಯದ ಇತಿಹಾಸದಲ್ಲಿ ಇದುವರೆಗೂ ಮಿಡತೆ ದಾಳಿ ಸಂಭವಿಸಿದ ಉದಾಹರಣೆಯಿಲ್ಲ. ಈ ಬಾರಿಯೂ ಮಿಡತೆ ದಾಳಿ ಸಂಭವಿಸಿಯೇ ಬಿಡುತ್ತದೆ ಎಂದು ಹೇಳಲಾಗದು. ಆದರೂ, ಮುನ್ನೆಚ್ಚರಿಕೆ ವಹಿಸಲಾಗಿದೆ.

- ಬ್ರಿಜೇಶ್‌ ಕುಮಾರ್‌ ದೀಕ್ಷಿತ್‌, ಕೃಷಿ ಇಲಾಖೆ ಆಯುಕ್ತ