ಕಾವೇರಿಗಾಗಿ ಇಂದು ಕರ್ನಾಟಕ ಬಂದ್: ಏನೆಲ್ಲಾ ಇರುತ್ತೆ?, ಏನೆಲ್ಲಾ ಇರಲ್ಲ?
ಮಂಗಳವಾರ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಬೆಂಗಳೂರು ಬಂದ್ ಕರೆ ನೀಡಲಾಗಿತ್ತು. ಆ ಬಂದ್‌ಗೆ ನಗರದ ಜನರೂ ಸ್ವಯಂಪ್ರೇರಿತರಾಗಿ ಸ್ಪಂದಿಸಿದರು. ಎರಡು ದಿನಗಳ ಬೆನ್ನಲ್ಲೇ ಇದೀಗ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇದೀಗ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಬೆಂಗಳೂರು(ಸೆ.29): ರಾಜ್ಯದಲ್ಲಿ ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಶುಕ್ರವಾರ ಹಲವು ಕನ್ನಡ ಪರ ಹಾಗೂ ರೈತಪರ ಸಂಘಟನೆಗಳು ‘ಕರ್ನಾಟಕ ಬಂದ್’ಗೆ ಕರೆ ನೀಡಿವೆ. ಬಂದ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನಜೀವನ ಬಹುತೇಕ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ.
ಮಂಗಳವಾರ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ವತಿಯಿಂದ ಬೆಂಗಳೂರು ಬಂದ್ ಕರೆ ನೀಡಲಾಗಿತ್ತು. ಆ ಬಂದ್‌ಗೆ ನಗರದ ಜನರೂ ಸ್ವಯಂಪ್ರೇರಿತರಾಗಿ ಸ್ಪಂದಿಸಿದರು. ಎರಡು ದಿನಗಳ ಬೆನ್ನಲ್ಲೇ ಇದೀಗ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇದೀಗ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಕಾವೇರಿ ನೀರು ಬರಿದಾದ ಮೇಲೆ ತುರ್ತು ಸಭೆ ಕರೆದ ಸಿದ್ದರಾಮಯ್ಯ!
ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಬಂದ್‌ಗೆ ಕರೆ ನೀಡಿದ್ದು, ಇದಕ್ಕೆ ರಾಜ್ಯಾದ್ಯಂತ 1900ಕ್ಕೂ ಹೆಚ್ಚಿನ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ರಾಜ್ಯ ರೈತ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರವಲ್ಲದೆ, ಜನಜೀವನದ ಮೇಲೆ ಪರಿಣಾಮ ಬೀರುವ ಬೀದಿಬದಿ ವ್ಯಾಪಾರ, ಹೊಟೆಲ್ ಸಂಘಟನೆ ಪೂರ್ಣ ಸಹಮತ ಘೋಷಿಸಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿವೆ. ಇನ್ನು, ಸಾರಿಗೆ ನೌಕರರು, ಕಟ್ಟಡ ಕಾರ್ಮಿಕರು, ಎಪಿಎಂಸಿ ಕಾರ್ಮಿಕರ ಸಂಘ, ವಕೀಲರ ಸಂಘಗಳು ತಮ್ಮ ಕಾರ್ಯ ಕಲಾಪದಲ್ಲಿ ತೊಡಗಿ ನೈತಿಕ ಬೆಂಬಲ ನೀಡುವುದಾಗಿ ಹೇಳಿವೆ.
ಈ ಬಂದ್‌ನ ಪರಿಣಾಮ ರಾಜ್ಯಾದ್ಯಂತ ಆಗದಿದ್ದರೂ ರಾಜಧಾನಿ ಬೆಂಗಳೂರು, ಮಂಡ್ಯ ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಬಹುತೇಕ ಪೂರ್ಣ ಬಂದ್ ನಡೆದು, ಜನಾಕ್ರೋಶ ಭುಗಿಲೇಳುವ ನಿರೀಕ್ಷೆಯಿದೆ. ಉಳಿದೆಡೆ ಬಂದ್ ಪ್ರತಿಭಟನೆಗಳಿಗಷ್ಟೇ ಸೀಮಿತವಾಗುವ ನಿರೀಕ್ಷೆ ಇದೆ. ಇನ್ನು ಬಂದ್ ನಡೆಯುವ ಜಿಲ್ಲೆಗಳಲ್ಲಿ ಈಗಾಗಲೇ ಹೆದ್ದಾರಿ ಬಂದ್, ರೈಲ್ವೆ ತಡೆ, ಮೆರವಣಿಗೆ ಸೇರಿ ನಾನಾ ಸ್ವರೂಪದಲ್ಲಿ ಪ್ರತಿಭಟನೆ ವ್ಯಕ್ತಪಡಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ. ಪರಿಣಾಮ, ಸಂಚಾರ ಹಾಗೂ ಅಗತ್ಯ ವಸ್ತುಗಳ ಲಭ್ಯತೆ ಸೇರಿ ಹಲವು ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಂಭವವಿದೆ. ಅಹಿತಕರ ಘಟನೆಗೆ ಆಸ್ಪದ ನೀಡದಿರಲು ಪೊಲೀಸ್ ಇಲಾಖೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಭದ್ರತೆಗೆ ವ್ಯವಸ್ಥೆ ಮಾಡಿಕೊಂಡಿದೆ.
ಬೃಹತ್ ಮೆರವಣಿಗೆ:
ಬಂದ್ ಭಾಗವಾಗಿ ರಾಜಧಾನಿಯಲ್ಲಿ ಬೆಳಗ್ಗೆ 10ಕ್ಕೆ ಟೌನ್‌ಹಾಲ್ ಬಳಿ ನೂರಾರು ಸಂಘಟನೆಗಳ ಕಾರ್ಯಕರ್ತರು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ. ಸ್ವಾತಂತ್ರ್ಯ ಉದ್ಯಾನದವರೆಗೆ ಆಗಮಿಸಿ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ, ಗುರುವಾರ ಮಧ್ಯರಾತ್ರಿಯಿಂದಲೇ 144 ಸೆಕ್ಷನ್ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಮೆರವಣಿಗೆ ಆರಂಭದಲ್ಲೇ ಮುಖಂಡರು ಬಂಧನವಾಗುವ ಸಾಧ್ಯತೆಯೂ ಇದೆ. ಕರ್ನಾಟಕ ಚಲನಚಿತ್ರ ಮಂಡಳಿ ಬಳಿಯಿಂದ ನಡೆಯುವ ಧರಣಿಯಲ್ಲಿ ನಟ ಶಿವರಾಜ್‌ಕುಮಾರ್, ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್ ಸೇರಿ ಸಿನಿತಾರೆಯರು, ನಿರ್ಮಾಪಕರು ಪಾಲ್ಗೊಳ್ಳಲಿದ್ದಾರೆ.
ಹೆದ್ದಾರಿ ತಡೆ:
ಕರ್ನಾಟಕ ರಾಜ್ಯ ರೈತ ಸಂಘ ಸೇರಿ ಇತರೆ ಕಾರ್ಯಕರ್ತರು ಬೆಂಗಳೂರು-ಮೈಸೂರು, ತುಮಕೂರು, ಬಳ್ಳಾರಿ ಸೇರಿ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಇದಲ್ಲದೆ, ಗೆಜ್ಜಲಗೆರೆ ಬಳಿ ರೈಲು ಮಾರ್ಗ ತಡೆ ಮಾಡಲಾಗುವುದು ಎಂದೂ ತಿಳಿಸಿದ್ದಾರೆ. ಉಳಿದಂತೆ ರಾಜ್ಯ ಹೆದ್ದಾರಿ, ನಗರದ ಹಲವೆಡೆ ರಸ್ತೆಯಲ್ಲಿ ಮೆರವಣಿಗೆ, ಧರಣಿ ನಡೆಯಲಿರುವುದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಶಾಲೆಗೆ ರಜೆ ಡಿಸಿಗಳ ನಿರ್ಧಾರ:
ಬಂದ್ ಕಾರಣದಿಂದ ಬೆಂಗಳೂರು ವಿಶ್ವವಿದ್ಯಾಲಯ, ರಾಜ್ಯ ಕಾನೂನು ವಿಶ್ವವಿದ್ಯಾಲಯ, ತುಮಕೂರು ವಿವಿ, ವಿಜಯನಗರ ವಿವಿ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ದಾವಣಗೆರೆ ವಿವಿ, ರಾಣಿ ಚೆನ್ನಮ್ಮ ವಿವಿಗಳು ಶುಕ್ರವಾರ ನಡೆಯಬೇಕಿದ್ದ ವಿವಿಧ ಪರೀಕ್ಷೆಗಳನ್ನು ಮುಂಡೂಡಿವೆ. ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಹಾಸನ(ಸಕಲೇಶಪುರ, ಹೊಳೆನರಸೀಪುರ ತಾಲೂಕು ಹೊರತುಪಡಿಸಿ)ದಲ್ಲಿ ಖಾಸಗಿ ಶಾಲಾ-ಕಾಲೇಜು)ದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಪರಿಸ್ಥಿತಿ ನೋಡಿಕೊಂಡು ರಜೆ ಕುರಿತು ತೀರ್ಮಾನ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಸಂಚಾರ ವ್ಯತ್ಯಯ:
ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಇಲಾಖೆ ಎಲ್ಲರೂ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದ್ದು, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳು ಎಂದಿನಂತೆ ತಮ್ಮ ಸೇವೆ ಒದಗಿಸಲಿವೆ. ಇನ್ನು, ಖಾಸಗಿ ಸಾರಿಗೆಯ ಆಟೋರಿಕ್ಷಾ, ಓಲಾ ಊಬರ್, ಮ್ಯಾಕ್ಸಿಕ್ಯಾಬ್, ಬಸ್ಸುಗಳು ಸುಮಾರು 37ಕ್ಕೂ ಹೆಚ್ಚಿನ ಸಂಘಟನೆಗಳು ಕೂಡ ಇದೇ ರೀತಿ ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿದ್ದು, ಜನತೆಗೆ ಸೇವೆ ಒದಗಿಸಲಿವೆ ಎಂದು ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ ತಿಳಿಸಿದ್ದಾರೆ. ಏರ್‌ಪೋರ್ಟ್ ಟ್ಯಾಕ್ಸಿ ಬೆಂಬಲ ನೀಡಿರುವುದರಿಂದ ಕೆಐಎ ಕಡೆಯಿಂದ ನಗರದೆಡೆ ಬರುವ ಪ್ರಯಾಣಿಕರಿಗೆ ತೊಂದರೆಯಾಗಲಿದೆ.
ಬೆಳಗ್ಗೆ ಮದ್ಯ ಸಿಗಲ್ಲ:
ಫೆಡರೇಶನ್ ಆಫ್ ವೈನ್ ಮರ್ಚಂಟ್ ಅಸೋಸಿಯೇಶನ್ ಬೆಂಗಳೂರು ನಗರ ಸೇರಿ ಎಲ್ಲೆಡೆ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಲು ಸೂಚಿಸಿದೆ. ಆರು ಗಂಟೆ ಬಳಿಕ ಇವು ತೆರೆಯಲಿವೆ ಎಂದು ಅಧ್ಯಕ್ಷ ಗುರುಸ್ವಾಮಿ ಎಸ್. ತಿಳಿಸಿದ್ದಾರೆ. ಇನ್ನು ಕೆಲಸ ವೈನ್‌ಶಾಪ್‌ಗಳು ಹೋರಾಟಕ್ಕೆ ಸಹಮತ ವ್ಯಕ್ತಪಡಿಸಿವೆ.
ಸಂಜೆವರೆಗೆ ಚಿತ್ರಪ್ರದರ್ಶನ ಇಲ್ಲ:
ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಹಾಗೂ ಚಿತ್ರಮಂದಿರಗಳ ಮಾಲೀಕರು ಬೆಂಬಲಿಸಿದ್ದು, ಇಡೀ ದಿನ ಚಿತ್ರಿಕರಣ ನಿಲ್ಲಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗಿನ ಎಲ್ಲ ಚಿತ್ರ ಪ್ರದರ್ಶನ ರದ್ದುಪಡಿಸುವುದಾಗಿ ಹೇಳಿದ್ದು, ಬಳಿಕ ಎಂದಿನಂತೆ ಚಿತ್ರ ಪ್ರದರ್ಶನ ಇರಲಿದೆ.
ಬೆಂಬಲ ನೀಡಿರುವ ಸಂಘಟನೆಗಳು:
ಪ್ರವೀಣ್ ಶೆಟ್ಟಿ, ಶಿವರಾಮೇ ಗೌಡ ಅವರ ಕರವೇ ಸಂಘಟನೆ, ಬೆಂಗಳೂರಿನಲ್ಲಿನ ಉತ್ತರ ಕರ್ನಾಟಕ ನಾಗರಿಕ ಅಭಿವೃದ್ಧಿ ಸಂಘ, ಪಡಿತರ ವಿತಕರರ ಹಿತರಕ್ಷಣಾ ಸಂಘ ಬೆಂಬಲಿಸಿದೆ. ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಆದರ್ಶ ಆಟೋ ಚಾಲಕರ ಸಂಘ, ಡಾ. ರಾಜ್ ಕುಮಾರ್ ಸೇನೆ , ಕನ್ನಡ ಜನ ಶಕ್ತಿ ಕೇಂದ್ರ , ಕರ್ನಾಟಕ ಜನ ಸೈನ್ಯ, ಕುವೆಂಪು ಕಲಾನಿಕೇತನ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಕೈಗಾರಿಕಾ ಒಕ್ಕೂಟ ಸಂಘ ಕನ್ನಡ ಸಂಘ, ರಾಜ್ಯ ಬೇಕರಿ ಕಾಂಡಿಮೆಂಟ್ಸ್ ಸಂಘ, ಏರ್ ಪೋರ್ಟ್ ಟ್ಯಾಕ್ಸಿ ಚಾಲಕ ಸಂಘ, ಬಾರ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್, ಫೆಡರೇಶನ್ ಆಫ್ ವೈನ್ ಮರ್ಚಂಟ್ ಅಸೋಸಿಯೇಶನ್ ಬೆಂಬಲಿಸಿವೆ.
ರಾಜ್ಯಾದ್ಯಂತ ಶಾಂತಿಯುತ ಬಂದ್ ನಡೆಸಲಾಗುವುದು. ಸರ್ಕಾರ ವಿಧಿಸಿರುವ 144 ಸೆಕ್ಷನ್‌ಗೆ ಬಗ್ಗಲ್ಲ, ಆಡಳಿತದಲ್ಲಿರುವವರು ಬೆಂಬಲ ನೀಡಬೇಕು ಎಂದು ಕನ್ನಡಪರ ಒಕ್ಕೂಟ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಪ್ರತಿಭಟನೆ ನಡೆಸಲು ಯಾರಿಗೂ ಅಡ್ಡಿಯಿಲ್ಲ, ಆದರೆ ಬಂದ್ ಮಾಡಲು ಯಾರಿಗೂ ಅವಕಾಶವಿಲ್ಲ. ಕಾನೂನು ಪಾಲಿಸಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಎಲ್ಲೆಲ್ಲಿ ಬಂದ್ ಸಾಧ್ಯತೆ?
ಮಂಡ್ಯ, ಮೈಸೂರು, ಹಾಸನ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಾಮರಾಜನಗರ, ತುಮಕೂರು
ಎಲ್ಲೆಲ್ಲಿ ಮಿಶ್ರ ಪ್ರತಿಕ್ರಿಯೆ?
ದಾವಣಗೆರೆ, ಧಾರವಾಡ, ಕೊಪ್ಪಳ
ಏನೇನು ಇರಲ್ಲ?
ಆಟೋ, ಟ್ಯಾಕ್ಸಿ, ಹೋಟೆಲ್, ಚಿತ್ರಮಂದಿರ, ಖಾಸಗಿ ಬಸ್, ಕೆಲ ಅಂಗಡಿಗಳು,
ಏನೆಲ್ಲಾ ಇರುತ್ತೆ?
ಆಸ್ಪತ್ರೆ, ಮೆಡಿಕಲ್ಸ್, ಆಂಬ್ಯುಲೆನ್ಸ್, ಅಗತ್ಯ ವಸ್ತು ಮಳಿಗೆ, ರೈಲು, ಬಸ್ಸು
ಭಾಗಶಃ ಬಂದ್
ಶಾಲಾ-ಕಾಲೇಜುಗಳು, ಖಾಸಗಿ ಸಾರಿಗೆ
ಚಿತ್ರರಂಗ ಹೋರಾಟದಲ್ಲಿ ಶಿವಣ್ಣ, ಧ್ರುವ, ಮುರಳಿ
ಬೆಂಗಳೂರು: ಕಾವೇರಿ ಹೋರಾಟಕ್ಕೆ ಬೆಂಬಲ ಘೋಷಿಸಿರುವ ಚಿತ್ರರಂಗ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಧರಣಿ ಹಮ್ಮಿಕೊಂಡಿದೆ. ಶಿವರಾಜ್‌ಕುಮಾರ್, ಶ್ರೀಮುರಳಿ, ಧ್ರುವ ಸರ್ಜಾ ಸೇರಿದಂತೆ ಬಹುತೇಕ ಕಲಾವಿದರು, ತಂತ್ರಜ್ಞರು ಈ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿ ಮೋದಿಗೆ ಕರವೇ ರಕ್ತದಲ್ಲಿ 1 ಲಕ್ಷ ಪತ್ರ!
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆಯಲ್ಲಿನ ಸಮಸ್ಯೆ ಇತ್ಯರ್ಥ ಸಂಬಂಧ ಕೇಂದ್ರ ಸರ್ಕಾರದ ಗಮನ ಸೆಳೆಯಲು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಒಂದು ಲಕ್ಷ ಕಾರ್ಯಕರ್ತರು ಭಾನುವಾರ (ಅ.1) ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದು ರವಾನಿಸಲು ಹಾಗೂ ಅಕ್ಟೋಬರ್ 10ರಂದು ದೆಹಲಿ ಚಲೋ ನಡೆಸಲು ನಿರ್ಧರಿಸಿದ್ದಾರೆ.
ಬಂದ್‌ಗೆ ಅವಕಾಶವಿಲ್ಲ, ಪ್ರತಿಭಟನೆ ನಡೆಸಿ...
ಕಾವೇರಿ ನದಿ ನೀರು ಹಂಚಿಕೆ ಅನ್ಯಾಯದ ವಿರುದ್ಧ ಯಾವ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿವೆಯೋ ಅವರಿಗೆ ನಾನು ತಿಳಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಬಂದ್ ಮಾಡುವಂತಿಲ್ಲ. ಪ್ರತಿಭಟನೆ ಮಾಡಿಕೊಳ್ಳಬಹುದು. ಇದನ್ನು ಮೀರಿ ಬಂದ್ ನಡೆಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಡಾ।ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸರ್ಕಾರಕ್ಕೆ ಸೆಡ್ಡು ಹೊಡೆದ ಕರ್ನಾಟಕ ಬಂದ್ ಹೋರಾಟಗಾರರು: ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗಗಳೂ ತಡೆ
ಬೆಂಗಳೂರು ಸೇರಿ ಹಲವೆಡೆ ನಿಷೇಧಾಜ್ಞೆ
ಬೆಂಗಳೂರು: ಕರ್ನಾಟಕ ಬಂದ್ ವೇಳೆ ಪ್ರತಿಭಟನಾ ಮೆರವಣಿಗೆ ಹಾಗೂ ಯಾವುದೇ ಅಹಿತಕರ ಘಟನೆ ತಡೆಯುವ ಸಲುವಾಗಿ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮಧ್ಯರಾತ್ರಿಯವರೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಇಂದು ಕಾವೇರಿ ಪ್ರಾಧಿಕಾರ ಸಭೆ, ಕಾನೂನು ಪಂಡಿತರ ಜತೆ ಸಿಎಂ ಸಮಾಲೋಚನೆ
ಬೆಂಗಳೂರು: ತಮಿಳುನಾಡಿಗೆ 18 ದಿನಗಳ ಕಾಲ ನಿತ್ಯ 3000 ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಶಿಫಾರಸು ಬಗ್ಗೆ ನಿರ್ಣಯ ಕೈಗೊಳ್ಳುವ ಸಂಬಂಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ಸಭೆ ನಡೆಸಲಿದೆ. ಇದರಲ್ಲಿ ಕರ್ನಾಟಕ, ತಮಿಳುನಾಡು ರಾಜ್ಯಗಳ ಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದು ತಂತಮ್ಮ ಅಹವಾಲು ಮಂಡಿಸಲಿದ್ದಾರೆ. ಏತನ್ಮಧ್ಯೆ, ಕಾವೇರಿ ವಿಚಾರವಾಗಿ ಕಾನೂನು ಹೋರಾಟ ತೀವ್ರಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧರಿಸಿದ್ದು, ಈ ಬಗ್ಗೆ ಶುಕ್ರವಾರ ಬೆಳಗ್ಗೆ ಹಿರಿಯ ವಕೀಲರು ಹಾಗೂ ಕಾನೂನು ತಜ್ಞರ ಸಭೆ ಕರೆದಿದ್ದಾರೆ.