* ಅಮಿರ್-ಇ-ಷರಿಯತ್ ಸಂಘಟನೆಯಿಂದ ಬಂದ್‌ಗೆ ಕರೆ* ನೌಕರರಿಗೆ ಕರ್ತವ್ಯಕ್ಕೆ ಗೈರಾಗಲು ಮನವಿ* ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಸಮ್ಮತಾರ್ಹವಲ್ಲ
ಬೆಂಗಳೂರು(ಮಾ.17): ಹಿಜಾಬ್(Hijab) ಧಾರ್ಮಿಕ ಆಚರಣೆ ಅಲ್ಲ ಎಂಬ ಹೈಕೋರ್ಟ್ ತೀರ್ಪಿನ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಮುಸ್ಲಿಂ ಧಾರ್ಮಿಕ ಪರಿಷತ್ ಎನಿಸಿದ ಅಮಿರ್-ಇ-ಷರಿಯತ್ ಗುರುವಾರ ರಾಜ್ಯ ಬಂದ್‌ಗೆ ಕರೆ ನೀಡಿದೆ. ವೈದ್ಯರು, ಕಾರ್ಮಿಕರು, ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಸಮುದಾಯದ ಎಲ್ಲರೂ ಬಂದ್ ಪಾಲ್ಗೊಳ್ಳುವಂತೆ ಕೋರಿದೆ. ಸಮುದಾಯದ ಶಾಲಾ-ಕಾಲೇಜುಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದೆ. ಆದರೆ, ಇದು ಶಾಂತಿಯುತ ಪ್ರತಿಭಟನೆಯಾಗಿದ್ದು(Protest), ಬಲವಂತದ ಬಂದ್ ಮಾಡಬಾರದು, ಜಾಥಾ, ಮೆರವಣಿಗೆ ಕೂಡ ನಡೆಸಬಾರದು ಎಂದು ಕೋರಿದೆ.
ಶಾಲಾ- ಕಾಲೇಜಿನಲ್ಲಿ ಹಿಜಾಬ್ ಧರಿಸುವಂತಿಲ್ಲ, ಸರ್ಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವಂತಿಲ್ಲ ಎಂದು ಮಂಗಳವಾರ ಕರ್ನಾಟಕ ಹೈಕೋರ್ಟ್(High Court of Karnataka) ತೀರ್ಪು(Verdict) ನೀಡಿತ್ತು. ಈ ಹಿನ್ನೆಲೆಯಲ್ಲಿ ಅಮೀರ್ ಇ- ಷರಿಯತ್‌ನ ಮುಖ್ಯಸ್ಥ ಮೌಲಾನಾ ಸಗೀರ್ ಅಹ್ಮದ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಸಿದ ವಿವಿಧ ಮುಸ್ಲಿಂ ಸಂಘಟನೆಗಳು ಗುರುವಾರ ಕರ್ನಾಟಕ ಬಂದ್(Karnataka Bandh) ತೀರ್ಮಾನಿಸಿವೆ.
ಶಿಕ್ಷಣ, ಧರ್ಮ ಎರಡು ಕಣ್ಣುಗಳಿದ್ದಂತೆ: ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ತಂದೆ ಹೇಳಿಕೆ
ಬಂದ್‌ಗೆ ಎಸ್‌ಡಿಪಿಐ(SDPI), ಪಿಎಫ್‌ಐ(PFF), ದಲಿತ್ ಮತ್ತು ಮೈನಾರಿಟಿ ಸೇನೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಮುಸ್ಲಿಂ ಸಂಘಟನೆಗಳ ಒಕ್ಕೂಟ ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಮುಸ್ಲಿಂ ಸಂಘಟನೆಗಳು, ಮುಸ್ಲಿಂ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಗುರುವಾರ ಎಲ್ಲರೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ತಮ್ಮ ವಿರೋಧ ವ್ಯಕ್ತಪಡಿಸಬೇಕು. ನ್ಯಾಯಕ್ಕಾಗಿ ಒತ್ತಾಯಿಸಿ ಈ ಬಂದ್ ಕರೆ ನೀಡಲಾಗಿದ್ದು, ಬಂದ್ ಶಾಂತಿಯುತವಾಗಿಬೇಕು. ಬಲವಂತದ ಬಂದ್ ನಡೆಸಬಾರದು. ಜಾಥಾ, ಮೆರವಣಿಗೆ ಕೂಡ ನಡೆಸಬಾರದು. ಸಮುದಾಯದ ಶಾಲಾ-ಕಾಲೇಜು(School-Colleges) ಬಂದ್ ಮಾಡಲು ಮೌಲಾನಾ ಸಗೀರ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪು ಸ್ವೀಕಾರಾರ್ಹವಲ್ಲ. ಈ ತೀರ್ಪನ್ನು ಇಡೀ ನಾಗರಿಕ ಸಮಾಜ ಹಾಗೂ ಮುಸ್ಲಿಂ(Mulsim) ಸಮುದಾಯ ವಿರೋಧಿಸಿದೆ. ಮುಸ್ಲಿಂ ಸಮುದಾಯದ ಅತ್ಯುನ್ನತ ನಾಯಕ ಅಮೀರ್ ಎ ಶರೀಯತ್ ಮೌಲಾನಾ ಸಗೀರ್ ಅಹ್ಮದ್ ನೇತೃತ್ವದಲ್ಲಿ ರಾಜ್ಯಮಟ್ಟದ ಮುಸ್ಲಿಂ ನಾಯಕರು ಸಭೆ ನಡೆಸಿ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ಪ್ರತಿಭಟನಾರ್ಥವಾಗಿ ಗುರುವಾರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ ಎಂದರು.
ಕೆಲವೇ ದಿನಗಳಲ್ಲಿ ತಮ್ಮ ತಪ್ಪು ಅರ್ಥೈಯಿಸಿಕೊಂಡು ಶಾಲೆಗೆ ಬರ್ತಾರೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಮಾತನಾಡಿ, ಹಿಜಾಬ್ ಕುರಿತು ಹೈಕೋರ್ಟ್ ಆದೇಶದಿಂದ ಮುಸ್ಲಿಂ ಸಮುದಾಯಕ್ಕೆ ಆಘಾತವಾಗಿದೆ. ನಮ್ಮ ನೋವನ್ನು ವ್ಯಕ್ತಪಡಿಸಲು ಒಂದು ದಿನದ ಶಾಂತಿಯುತ ಬಂದ್‌ಗೆ ಕರೆ ನೀಡಲಾಗಿದ್ದು, ಎಲ್ಲ ನಾಗರಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಮುಖಂಡ ಅಕ್ಬರಲಿ ಉಡುಪಿ ಮಾತನಾಡಿ, ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಸಮ್ಮತಾರ್ಹವಲ್ಲ, ಈ ಬಗ್ಗೆ ನಮಗೆ ಖೇದವಿದೆ ಎಂಬುದನ್ನು ಅಭಿವ್ಯಕ್ತಿಪಡಿಸಲು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್(Supreme Court) ಮೊರೆ ಹೋಗಲಾಗುವುದು. ಮಾತ್ರವಲ್ಲ. ರಾಜ್ಯದ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಪ್ರಥಮ ಹಂತದಲ್ಲಿ ನಾಳೆ ತೀರ್ಪನ್ನು ವಿರೋಧಿಸಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಎಲ್ಲಾ ಮುಸ್ಲಿಂ ಸಂಸ್ಥೆಗಳು, ಶಾಲಾ ಕಾಲೇಜುಗಳು, ಅಂಗಡಿ ಮುಗ್ಗಟ್ಟು ಬಂದ್ ಆಗಲಿವೆ. ವಕೀಲರು, ವೈದ್ಯರು, ಇತರೆ ನೌಕರರು ನಾಳೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ತಿಳಿಸಿದರು.
