ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಎಚ್‌ಎಂಟಿ ಲಿಮಿಟೆಡ್‌ಗೆ ಸೇರಿದ 430 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ಭೂಮಿ ಹಸ್ತಾಂತರಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿರುವ ನ್ಯಾಯಪೀಠ, ಮುಂದಿನ ಆದೇಶದವರೆಗೆ ಎಚ್‌ಎಂಟಿಯನ್ನು ತೆರವುಗೊಳಿಸಬಾರದು ಎಂದು ಮಧ್ಯಂತರ ಆದೇಶ ನೀಡಿದೆ.

ಬೆಂಗಳೂರು: ಬೆಂಗಳೂರಿನ ಜಾಲಹಳ್ಳಿಯಲ್ಲಿ ಎಚ್‌ಎಂಟಿ ಲಿಮಿಟೆಡ್‌ ಕಂಪನಿಗೆ ಸೇರಿದ 430 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌‌ ನಿರ್ದೇಶಿಸಿದೆ. ಭೂಮಿಯನ್ನು 30 ದಿನಗಳಲ್ಲಿ ತನಗೆ ಹಸ್ತಾಂತರ ಮಾಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜೂ.15ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಎಚ್‌ಎಂಟಿ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಪೀಠ ಈ ಮಧ್ಯಂತರ ಆದೇಶವನ್ನು ಮಾಡಿದೆ.

ವಿಚಾರಣೆ ವೇಳೆ ಎಚ್‌ಎಂಟಿ ಪರ ಹಾಜರಾದ ಹಿರಿಯ ವಕೀಲರು, ವಿವಾದಿತ ಭೂಮಿ ಹೊರತುಪಡಿಸಿ ಉಳಿದ ಭೂಮಿಯನ್ನು ಸಂಸ್ಥೆ ಪರಭಾರೆ ಮಾಡುವುದಿಲ್ಲವೆಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ನೀಡಲಾಗುವುದು ಎಂದು ತಿಳಿಸಿದರು.

ಯಾವುದೇ ಮರಗಳನ್ನು ಕತ್ತರಿಸಬಾರದು

ಆ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಎಚ್‌ಎಂಟಿ ಉಳಿದ ಭೂಮಿಯ ಮಾರಾಟ, ಗುತ್ತಿಗೆ, ಪರವಾನಗಿ, ಅಡಮಾನ ಅಥವಾ ಇತರೆ ಯಾವುದೇ ರೀತಿಯಲ್ಲಿ ಬದಲಾಯಿಸುವಂತಿಲ್ಲ. ಯಾವುದೇ ಮರಗಳನ್ನು ಕತ್ತರಿಸಬಾರದು ಅಥವಾ ವಿವಾದಿತ ಆಸ್ತಿಯ ಮೇಲೆ ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಸೃಷ್ಟಿಸಬಾರದು‌ ಇನ್ನೂ ಮುಂದಿನ ವಿಚಾರಣೆಯವರೆಗೆ ಹಾಲಿ ಸ್ವಾಧೀನದಲ್ಲಿರುವ ಎಚ್‌ಎಂಟಿಯನ್ನು ತೆರವುಗೊಳಿಸಬಾರದು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಆದೇಶ ಮಾಡಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ನ್ಯಾಯಾಲಯದ ಮುಂದೆ ಪ್ರಶ್ನಿಸಿರುವ ಆದೇಶ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ನಿಲುವಿಗೆ ವಿರುದ್ಧವಾಗಿದೆ. ರಾಜ್ಯ ಸರ್ಕಾರ ಈ ಹಿಂದೆ ಭೂಮಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ, ನಂತರ ಅದನ್ನು ಹಿಂಪಡೆಯಲು ಪ್ರಯತ್ನಿಸಿದೆ. ಈ ಮಧ್ಯೆ, ಭೂಮಿ ಡಿನೋಟಿಫೈ ಮಾಡಲು ರಾಜ್ಯಕ್ಕೆ ನಿರ್ದೇಶನಗಳನ್ನು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸುಮಾರು 178 ಎಕರೆಗಳನ್ನು ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮತ್ತಿತರರಿಗೆ ಮಾರಾಟ ಮಾಡಲಾಗಿದೆ. ಆದರೆ, ಇದನ್ನು ದಾಖಲೆ ಸಹಿತ ಸಲ್ಲಿಸಿದ್ದರೂ ಸಹ ಉಪ ಸಂರಕ್ಷಣಾಧಿಕಾರಿ ಸಂಪೂರ್ಣ ವಿಸ್ತೀರ್ಣದ ಭೂಮಿ ಲಭ್ಯವಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್‌ ರೋಣ್‌, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಅರ್ಜಿಯನ್ನು ಹಿಂತೆಗೆದುಕೊಂಡಿದೆ. ಮೂಲ ಭೂಮಿಯ ಗಣನೀಯ ಭಾಗವನ್ನು ಈಗಾಗಲೇ ವರ್ಗಾಯಿಸಲಾಗಿದ್ದರೂ, ಸುಮಾರು 290 ಎಕರೆಗಳು ಗಮನಾರ್ಹ ಹಸಿರು ಹೊದಿಕೆಯೊಂದಿಗೆ ಖಾಲಿಯಾಗಿ ಉಳಿದಿದೆ. ಎಚ್‌ಎಂಟಿಯನ್ನು ಮರಗಳನ್ನು ಕಡಿಯದಂತೆ ನಿರ್ಬಂಧಿಸಬೇಕೆಂದು ಮನವಿ ಮಾಡಿದರು.