ಎಡಗೈ ಊತ ಹಾಗೂ ನೋವಿನಿಂದಾಗಿ ಬಳಲುತ್ತಿರುವ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರವೂ ಚಿಕಿತ್ಸೆ ಪಡೆದಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಚೇತರಿಸಿಕೊಂಡು ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು.

ಬೆಂಗಳೂರು (ಮೇ.13) : ಎಡಗೈ ಊತ ಹಾಗೂ ನೋವಿನಿಂದಾಗಿ ಬಳಲುತ್ತಿರುವ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರವೂ ಚಿಕಿತ್ಸೆ ಪಡೆದಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಚೇತರಿಸಿಕೊಂಡು ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು.

ಸೋಂಕಿನಿಂದಾಗಿ ಸಿದ್ದರಾಮಯ್ಯ(Siddaramaiah) ಅವರ ಎಡಗೈನಲ್ಲಿ ಹಲವು ದಿನಗಳಿಂದ ಊತ ಹಾಗೂ ನೋವು ಇದೆ. ಇದಕ್ಕೆ ಶುಕ್ರವಾರವೂ ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಲ್ಲಿ ಸಿದ್ದರಾಮಯ್ಯ ಅವರು ಚಿಕಿತ್ಸೆ ಪಡೆದರು. ನೋವಿನಿಂದಾಗಿ ಎಲ್ಲೂ ಹೋಗದ ಸಿದ್ದರಾಮಯ್ಯ ಅವರು ಮನೆಯಲ್ಲೇ ವಿಶ್ರಾಂತಿ ಪಡೆದರು. ಬಳಿಕ ಶುಕ್ರವಾರ ಸಂಜೆಯ ವೇಳೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಯೋಜಿಸಿದ್ದ ಪ್ರಮುಖ ನಾಯಕರ ಸಭೆಯಲ್ಲಿ ಪಾಲ್ಗೊಂಡು ಅನಂತರ ಮೈಸೂರಿನತ್ತ ಪ್ರಯಾಣ ಬೆಳೆಸಿದರು.

ಫಲಿತಾಂಶಕ್ಕೆ ಕೆಲ ಗಂಟೆಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಸರಣಿ ಸಭೆ, ಪಕ್ಷೇತರ ಅಭ್ಯರ್ಥಿಗಳಿಗೆ ಸಿದ್ದರಾಮಯ್ಯ ಕರೆ

ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ರವಿಕುಮಾರ್‌ ಮಾತನಾಡಿ, ಸಿದ್ದರಾಮಯ್ಯ ಅವರ ಕೈಗೆ ವೈರಲ್‌ ಹರ್ಪೀಸ್‌ ಸೋಂಕಿನಿಂದಾಗಿ ಊತ ಉಂಟಾಗಿದೆ. ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷಿಸಿ ಚಿಕಿತ್ಸೆ ನೀಡಲಾಗಿದೆ. ಒತ್ತಡದಿಂದ ಸೋಂಕು ಉಂಟಾಗಿರಬಹುದು. ಇದಕ್ಕೆ 15 ದಿನಗಳ ವಿಶ್ರಾಂತಿ ಬೇಕಾಗುತ್ತದೆ. ಹೀಗಾಗಿ ವಿಶ್ರಾಂತಿಗೆ ಸೂಚಿಸಿದ್ದು, ಇದನ್ನು ಹೊರತುಪಡಿಸಿ ಸಿದ್ದರಾಮಯ್ಯ ಅವರ ಆರೋಗ್ಯ ಉತ್ತಮವಾಗಿದೆ ಎಂದರು.

ಡಿಕೆಶಿ ಆರೋಗ್ಯದಲ್ಲಿ ಚೇತರಿಕೆ:

ಇನ್ನು ಗುರುವಾರ ಜ್ವರದಿಂದ ಬಳಲುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(KPCC President DK Shivakumar) ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಶುಕ್ರವಾರ ಸರಣಿ ಸಭೆಗಳಲ್ಲಿ ಭಾಗವಹಿಸಿದ ಅವರು ಬಳಿಕ ಕುಟುಂಬ ಸದಸ್ಯರೊಂದಿಗೆ ತಮಿಳುನಾಡಿನ ದೇವಸ್ಥಾನಕ್ಕೆ ಹೆಲಿಕಾಪ್ಟರ್‌ ಮೂಲಕ ತೆರಳಿ, ಅನಂತರ ಹಿಂದಿರುಗಿದರು.

ಸರ್ಪಸುತ್ತು ಬರಲು ಕಾರಣ ನಾಗದೋಷವಲ್ಲ ಈ ವೈರಸ್!

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನನಗೂ ಆರೋಗ್ಯ ಸ್ವಲ್ಪ ವ್ಯತ್ಯಾಸ ಆಗಿದೆ. ನಾನು ವಿಶ್ರಾಂತಿ ಪಡೆಯಲು ಹೊರಗೆ ಹೋಗಬೇಕು ಅಂದುಕೊಂಡಿದ್ದೆ, ನಮ್ಮ ಪಕ್ಷದಲ್ಲಿ ಬೇಡ ಎನ್ನುತ್ತಿರುವ ಕಾರಣ ಹೋಗಿಲ್ಲ ಎಂದು ಹೇಳಿದರು.