ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯೂ ಅಪ್ಪ-ಮಕ್ಕಳ ಗೆಲುವಿನ ಕಮಾಲ್‌ ಮುಂದುವರೆದಿದ್ದು, ಆರು ಜೋಡಿ ಅಪ್ಪ ಮಕ್ಕಳು ಈ ಬಾರಿ ಗೆಲುವು ಸಾಧಿಸಿದ್ದಾರೆ.

ಬೆಂಗಳೂರು (ಮೇ.14) : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯೂ ಅಪ್ಪ-ಮಕ್ಕಳ ಗೆಲುವಿನ ಕಮಾಲ್‌ ಮುಂದುವರೆದಿದ್ದು, ಆರು ಜೋಡಿ ಅಪ್ಪ ಮಕ್ಕಳು ಈ ಬಾರಿ ಗೆಲುವು ಸಾಧಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 91 ವರ್ಷದ ಕಾಂಗ್ರೆಸ್‌ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ(Shamanur shivashankrappa) ಅವರು 8ನೇ ಬಾರಿಗೆ ಜಯಗಳಿಸಿದರೆ, ಅವರ ಪುತ್ರ ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ್‌(SS mallikarjun) 3ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ವಿಜಯನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಕೃಷ್ಣಪ್ಪ ಮತ್ತು ಅವರ ಪುತ್ರ ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಕೃಷ್ಣ ಮತ್ತೆ ಗೆಲುವು ಸಾಧಿಸಿದ್ದಾರೆ.

ಜನ ರೊಚ್ಚಿಗೆದ್ದು ಕಾಂಗ್ರೆಸ್‌ಗೆ ವೋಟು ಹಾಕಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಬಿಟಿಎಂ ಲೇಔಟ್‌ನ ಕಾಂಗ್ರೆಸ್‌ ಅಭ್ಯರ್ಥಿ ರಾಮಲಿಂಗಾರೆಡ್ಡಿ 7ನೇ ಬಾರಿಗೆ ಮತ್ತು ಅವರ ಪುತ್ರಿ ಜಯನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ 2ನೇ ಬಾರಿಗೆ ಜಯಗಳಿಸಿದ್ದಾರೆ.

ದೇವನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಗೆಲುವು ಸಾಧಿಸಿದ್ದು ಅವರ ಪುತ್ರಿ ಕೆಜಿಎಫ್‌ ಕಾಂಗ್ರೆಸ್‌ ಅಭ್ಯರ್ಥಿ ರೂಪಕಲಾ ಶಶಿಧರ್‌ ಎರಡನೇ ಬಾರಿಗೆ ಜಯ ಗಳಿಸಿದ್ದಾರೆ.

ಅರಕಲಗೂಡು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿ ಎ.ಮಂಜು ನಾಲ್ಕನೇ ಬಾರಿಗೆ ಮತ್ತು ಅವರ ಪುತ್ರ ಕಾಂಗ್ರೆಸ್‌ ಅಭ್ಯರ್ಥಿ ಮಂಥರ್‌ ಗೌಡ ಮಡಿಕೇರಿಯಿಂದ ಮೊದಲ ಬಾರಿಗೆ ಗೆಲುವು ಸಾಧಿಸಿದ್ದಾರೆ.

ಮಾಜಿ ಸಚಿವ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 6ನೇ ಬಾರಿಗೆ ಗೆಲುವು ಸಾಧಿಸಿದರೆ ಅವರ ಪುತ್ರ ಜಿ.ಡಿ.ಹರೀಶ್‌ ಗೌಡ ಹುಣಸೂರು ಕ್ಷೇತ್ರ ಜೆಡಿಎಸ್‌ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಜಯಶೀಲರಾಗಿದ್ದಾರೆ.

ಯಾರಾರ ಸಂಬಂಧಿಕರು ಎಲ್ಲಿ ಗೆಲುವು?

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ(HD Devegowda) ಬೀಗರಾದ ಜೆಡಿಎಸ್‌ ಅಭ್ಯರ್ಥಿ ಡಿ.ಸಿ.ತಮ್ಮಣ್ಣ(DC Tammanna) ಮದ್ದೂರು ಕ್ಷೇತ್ರದಿಂದ ಜಯಗಳಿಸಿದ್ದಾರೆ. ದೇವೇಗೌಡರ ಮತ್ತೊಬ್ಬ ಸಂಬಂಧಿ ಶ್ರವಣಬೆಳಗೊಳ ಜೆಡಿಎಸ್‌ ಅಭ್ಯರ್ಥಿ ಸಿ.ಎನ್‌.ಬಾಲಕೃಷ್ಣ ಗೆಲುವು ಸಾಧಿಸಿದ್ದಾರೆ.

ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ(BS Yadiyurappa) ಪುತ್ರ ಬಿ.ವೈ.ವಿಜಯೇಂದ್ರ(BY Vijayendra) ಗೆಲುವು ಸಾಧಿಸಿದ್ದಾರೆ. 9 ಬಾರಿ ಶಾಸಕರಾಗಿದ್ದ ಮಾಜಿ ಸಚಿವ ದಿ.ಉಮೇಶ್‌ ಕತ್ತಿ ಅವರ ಪುತ್ರ ಹುಕ್ಕೇರಿ ಬಿಜೆಪಿ ಅಭ್ಯರ್ಥಿ ನಿಖಿಲ್‌ ಉಮೇಶ್‌ ಕತ್ತಿ ಗೆಲುವು ಸಾಧಿಸಿದ್ದಾರೆ.

ಹರಪನಹಳ್ಳಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‌ ಅವರ ಪುತ್ರಿ ಪಕ್ಷೇತ್ರರ ಅಭ್ಯರ್ಥಿ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಗೆಲುವು ಸಾಧಿಸಿದ್ದಾರೆ.

ದಿವಂಗತ ಆರ್‌.ಧ್ರುವನಾರಾಯಣ್‌ ಪುತ್ರ ನಂಜನಗೂಡು ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ್‌ ಗೆಲುವು ಸಾಧಿಸಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ಗುರು ಮಾಜಿ ರಾಜ್ಯಪಾಲ ರಾಚಯ್ಯ ಅವರ ಪುತ್ರ ಕೊಳ್ಳೇಗಾಲ ಕಾಂಗ್ರೆಸ್‌ ಅಭ್ಯರ್ಥಿ ಎ.ಆರ್‌.ಕೃಷ್ಣಮೂರ್ತಿ ಗೆಲುವು ಸಾಧಿಸಿದ್ದಾರೆ.

ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯ ಅವರ ಪುತ್ರ ಮೇಲುಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಗೆಲುವು ಸಾಧಿಸಿದ್ದಾರೆ. ಖ್ಯಾನ ಚಿತ್ರನಟ ದೊಡ್ಡಣ್ಣ ಅವರ ಅಳಿಯ ಚಿತ್ರದುರ್ಗ ಕಾಂಗ್ರೆಸ್‌ ಅಭ್ಯರ್ಥಿ ವೀರೇಂದ್ರ (ಪಪ್ಪಿ) ಜಯಗಳಿಸಿದ್ದಾರೆ. ಕುಣಿಗಲ್‌ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಷಡ್ಕ ರಂಗನಾಥ್‌ ಮತ್ತೆ ವಿಜಯ ಸಾಧಿಸಿದ್ದಾರೆ.

ಜಾರಕಿಹೊಳಿ ಮತ್ತು ರೆಡ್ಡಿ ಸಹೋದರರ ಗೆಲುವು ಮುಂದುವರೆದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಯಮಕನಮರಡಿಯಿಂದ ಗೆಲುವು ಸಾಧಿಸಿದರೆ ಅವರ ಸಹೋದರ ಬಿಜೆಪಿ ಅಭ್ಯರ್ಥಿ ರಮೇಶ್‌ ಜಾಕಿಹೊಳಿ, ಅರಬಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಜಯಗಳಿಸಿದ್ದಾರೆ.

ಜೆಡಿಎಸ್‌ಗೆ 2 ದಶಕದಲ್ಲೇ ಅತಿ ಕಡಿಮೆ ಸ್ಥಾನ; ಶೇ.10ಕ್ಕಿಂತ ಕಮ್ಮಿಯಿದ್ರೆ ಸೌಧದಲ್ಲಿ ಜೆಡಿಎಸ್‌ಗೆ ಕಚೇರಿ ಇಲ್ಲ?

ಅಪ್ಪ ಎಚ್ಡಿಕೆಗೆ ಜಯ, ಪುತ್ರ ನಿಖಿಲ್‌ಗೆ ಸೋಲು:

ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದರೆ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ರಾಮನಗರದಲ್ಲಿ ಸೋಲನುಭವಿಸಿದ್ದಾರೆ.