Asianet Suvarna News Asianet Suvarna News

ಜೆಡಿಎಸ್‌ಗೆ 2 ದಶಕದಲ್ಲೇ ಅತಿ ಕಡಿಮೆ ಸ್ಥಾನ; ಶೇ.10ಕ್ಕಿಂತ ಕಮ್ಮಿಯಿದ್ರೆ ಸೌಧದಲ್ಲಿ ಜೆಡಿಎಸ್‌ಗೆ ಕಚೇರಿ ಇಲ್ಲ?

ಹಲವು ನಿರೀಕ್ಷೆಗಳೊಂದಿಗೆ ಪ್ರಚಾರ ಅಖಾಡಕ್ಕೆ ಧುಮುಕಿದ್ದ ಜೆಡಿಎಸ್‌ ಕಳೆದ ಎರಡು ದಶಕದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದು, ಕೇವಲ 19 ಸ್ಥಾನಗಳಲ್ಲಿ ಮಾತ್ರ ಪಕ್ಷವು ಜಯಗಳಿಸಿದೆ.

Karnataka election results JDS won lowest number of seats in two decades rav
Author
First Published May 14, 2023, 6:45 AM IST | Last Updated May 14, 2023, 6:45 AM IST

ಬೆಂಗಳೂರು (ಮೇ.14) : ಹಲವು ನಿರೀಕ್ಷೆಗಳೊಂದಿಗೆ ಪ್ರಚಾರ ಅಖಾಡಕ್ಕೆ ಧುಮುಕಿದ್ದ ಜೆಡಿಎಸ್‌ ಕಳೆದ ಎರಡು ದಶಕದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದು, ಕೇವಲ 19 ಸ್ಥಾನಗಳಲ್ಲಿ ಮಾತ್ರ ಪಕ್ಷವು ಜಯಗಳಿಸಿದೆ.

ಚುನಾವಣೆ ಪ್ರಚಾರ ನಡೆಸಿದ ಪರಿ ಗಮನಿಸಿದರೆ ಕಳೆದ ವಿಧಾನಸಭೆ ಚುನಾವಣೆಗಿಂತ ಹೆಚ್ಚಿನ ಸ್ಥಾನದಲ್ಲಿ ಜೆಡಿಎಸ್‌(JDS party) ಗೆಲುವು ಸಾಧಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇದು ಹುಸಿಯಾಗಿದ್ದು, ಈ ಹಿಂದೆಂದಿಗಿಂತಲೂ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದೆ. ಚುನಾವಣಾ ಫಲಿತಾಂಶವು ಜೆಡಿಎಸ್‌ಗೆ ಎಚ್ಚರಿಕೆ ಪಾಠವೂ ಆಗಿದೆ. ಪಕ್ಷವನ್ನು ಮತ್ತಷ್ಟುಸದೃಢಗೊಳಿಸುವ ಕಾರ್ಯತಂತ್ರ ರೂಪಿಸಬೇಕಾದ ಅಗತ್ಯತೆಯ ಜತೆಗೆ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಸಂದೇಶವನ್ನು ಸಾರಿದೆ.

Karnataka election results 2023: ಭದ್ರಕೋಟೆಯಲ್ಲೇ ಬಿದ್ದಿದ್ದು ಜೆಡಿಎಸ್‌ ಹಿನ್ನಡೆಗೆ ಕಾರಣ

ಹಳೆ ಮೈಸೂರು ಭಾಗ ಹಾಗೂ ಉತ್ತರ ಕರ್ನಾಟಕ(north karnataka)ದಲ್ಲಿ ಜೆಡಿಎಸ್‌ಗೆ ಒಳ್ಳೆಯ ಸ್ಥಾನಗಳು ಲಭಿಸಲಿವೆ ಎಂದು ಭಾವಿಸಲಾಗಿತ್ತು. ಆದರೆ, ಕೇವಲ 19 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. 15ನೇ ವಿಧಾನಸಭೆಗೆ ಪ್ರವೇಶಿಸಿದ ಸಾ.ರಾ.ಮಹೇಶ್‌, ಅನ್ನದಾನಿ ಸೇರಿದಂತೆ ಬಹುತೇಕ ಮಂದಿ ಸೋಲನುಭವಿಸಿರುವುದು ಅಚ್ಚರಿಯಾಗಿದೆ. ಕಳೆದ ಬಾರಿ 37 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಜೆಡಿಎಸ್‌ ನಂತರ ಕೆಲವರು ಬಿಜೆಪಿಗೆ ಹೋಗಿದ್ದರಿಂದ 29 ಸ್ಥಾನಕ್ಕೆ ಕುಸಿದಿತ್ತು. ಈ ಬಾರಿ ಇದಕ್ಕಿಂತ ಹೆಚ್ಚಿನ ಸ್ಥಾನ ಗಳಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದು ಹುಸಿಯಾಗಿದೆ. ಜೆಡಿಎಸ್‌ 209 ಕ್ಷೇತ್ರದಲ್ಲಿ ಸ್ಪರ್ಧಿಸಿತ್ತು. ಆದರೆ ಗೆಲುವು ಸಾಧಿಸಿದ್ದು ಮಾತ್ರ ಕೇವಲ 19 ಕ್ಷೇತ್ರದಲ್ಲಿ. ಆರು ಕ್ಷೇತ್ರದಲ್ಲಿ ಸಿಪಿಐ ಮತ್ತು ಆರ್‌ಪಿಐಗೆ ಬೆಂಬಲ ವ್ಯಕ್ತಪಡಿಸಿತ್ತು.

ಇತ್ತೀಚಿನ ವರ್ಷಗಳಲ್ಲಿ ಈಗಿನ ಫಲಿತಾಂಶವನ್ನು ಗಮನಿಸಿದರೆ ಜೆಡಿಎಸ್‌ ಅನುಭವಿಸಿದ ದೊಡ್ಡ ಹಿನ್ನಡೆ ಇದಾಗಿದೆ. 2004ರಲ್ಲಿ 54 ಕ್ಷೇತ್ರದಲ್ಲಿ ಗೆಲುವು ಕಂಡಿದ್ದ ಜೆಡಿಎಸ್‌ 2008ರಲ್ಲಿ 28 ಸ್ಥಾನ, 2013ರಲ್ಲಿ 40 ಸ್ಥಾನ ಮತ್ತು 2018ರಲ್ಲಿ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

ಶೇ.10ಕ್ಕಿಂತ ಕಮ್ಮಿ ಸ್ಥಾನ: ಸೌಧದಲ್ಲಿ ಜೆಡಿಎಸ್‌ಗೆ ಕಚೇರಿ ಇಲ್ಲ?

ವಿಧಾನಸಭೆ ಚುನಾವಣೆ(Karnataka assembly election)ಯಲ್ಲಿ ಶೇ.10ಕ್ಕಿಂತ ಕಡಮೆ ಸ್ಥಾನಗಳನ್ನು ಗಳಿಸುವ ಮೂಲಕ ಕಳಪೆ ಪ್ರದರ್ಶನ ತೋರಿದ ಜೆಡಿಎಸ್‌ಗೆ ವಿಧಾನಸೌಧ(Vidhanasoudha)ದಲ್ಲಿ ಕಚೇರಿ ಲಭ್ಯವಾಗುವುದು ಕಷ್ಟಕರ ಎನ್ನಲಾಗುತ್ತಿದ್ದು, ಹೊಸ ಸರ್ಕಾರ ರಚನೆಯಾದ ಬಳಿಕ ವಿಧಾನಸಭೆಯ ಸಭಾಧ್ಯಕ್ಷರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಲಾಗಿದೆ.

Karnataka election results 2023: ಬೊಮ್ಮಾಯಿ ಸಂಪುಟದ 12 ಸಚಿವರ ಸೋಲು !

ಶೇ.10ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಪಕ್ಷಕ್ಕೆ ವಿಧಾನಸೌಧದಲ್ಲಿ ಕಚೇರಿ ನೀಡುವುದಿಲ್ಲ ಎಂಬ ನಿಯಮ ಇತ್ತು. ಈ ನಿಯಮಕ್ಕೆ ತಿದ್ದುಪಡಿ ಮಾಡಿ ಸಭಾಧ್ಯಕ್ಷರ ವಿವೇಚನಕ್ಕೆ ಬಿಡಲಾಗಿದೆ ಎಂದು ಹೇಳಲಾಗಿದೆ. ಜೆಡಿಎಸ್‌ ರಾಜ್ಯದ ಪ್ರಾದೇಶಿಕ ಪಕ್ಷವಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ವಿಧಾನಸೌಧದಲ್ಲಿ ಕಚೇರಿ ನೀಡಲಾಗುತ್ತದೆ. ಈ ಹಿಂದೆ ಜೆಡಿಎಸ್‌ ಇಷ್ಟೊಂದು ಕಡಿಮೆ ಸ್ಥಾನ ಪಡೆದುಕೊಂಡಿರಲಿಲ್ಲ. ಹೀಗಾಗಿ ಇಂತಹ ಘಟನೆಗಳು ನಡೆದಿರಲಿಲ್ಲ. ಈಗ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios