ಸಿಎಂ ಆಯ್ಕೆಗೆ ಸಿಗದ ಒಮ್ಮತ: ನಾಳೆ ಮತ್ತೊಮ್ಮೆ ಶಾಸಕರ ಅಭಿಪ್ರಾಯ ಸಂಗ್ರಹ
ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆಗೆ ಒಮ್ಮತ ಸಿಗದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನಾಳೆ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಬೆಂಗಳೂರು (ಮೇ 14): ಕರ್ನಾಟಕ ವಿಧಾನಸಭೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಆಯ್ಕೆ ಮಾಡುವುದೇ ಜಂಗೀ ಕುಸ್ತಿ ಆಡಿದಂತಾಗುತ್ತಿದೆ. ಭಾನುವಾರ ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದರೂ ಒಮ್ಮತ ಸಿಗದ ಹಿನ್ನೆಲೆಯಲ್ಲಿ ಒಂದು ಲೈನ್ ನಿರ್ಣಯ ಕೈಗೊಂಡು ಹೈಕಮಾಂಡ್‌ಗೆ ಕಳುಹಿಸಲಾಗಿದೆ. ಆದರೆ ಈಗ ಮತ್ತೊಮ್ಮೆ ನಾಳೆ ಬೆಳಗ್ಗೆ ಶಾಸಕಾಂಗದ ಸಭೆಯನ್ನು ನಡೆಸಿ ಎಲ್ಲ ಶಾಸಕರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.
ಕಾಂಗ್ರೆಸ್ ಶಾಸಕಾಂಗ ಸಭೆ ಅಂತ್ಯ ಹಿನ್ನೆಲೆಯಲ್ಲಿ ಶಾಸಕರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಭೋಜನದ ಬಳಿಕ ವೈಯಕ್ತಿಕ ಅಭಿಪ್ರಾಯ ಸಂಗ್ರಹ ಮಾಡಲು ಕೇಂದ್ರ ನಾಯಕರು ಮುಂದಾಗಿದ್ದಾರೆ. ಮೂರು ಜನ ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ರಾತ್ರಿ ಎಷ್ಟೊತ್ತು ಆಗುತ್ತೋ ಅಷ್ಟೊತ್ತು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಇನ್ನು ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹ ಆಗದಿದ್ದರೆ, ಉಳಿದವರನ್ನು ನಾಳೆ ಬೆಳಗೆಗೆಯೂ ಕರೆಸಿ ಅಭಿಪ್ರಾಯ ಕೇಳಲಾಗುತ್ತದೆ. ಇಂದು ರಾತ್ರಿಯೇ ಶಾಸಕರ ಅಭಿಪ್ರಾಯ ಪಡೆಯಲು ಪೂರ್ಣ ಪ್ರಯತ್ನ ಮಾಡಲಾಗುತ್ತದೆ. ಸಾಧ್ಯವಾಗದೇ ಇದ್ದರೆ ಬೆಳಗ್ಗೆ 10 ಗಂಟೆಗೆ ಮತ್ತೊಮ್ಮೆ ಬಾಕಿ ಇರುವ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ಕಾಂಗ್ರೆಸ್ 'ಸಿಎಂ' ಕುರ್ಚಿಗೆ ಕುಸ್ತಿ! ಶಾಸಕಾಂಗ ಸಭೆಯಲ್ಲಿ ಒನ್‌ಲೈನ್ ನಿರ್ಣಯ ಪಾಸ್
ಕೇವಲ ಮೌಖಿಕ ಅಭಿಪ್ರಾಯ ಸಂಗ್ರಹ: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವೀಕ್ಷಕರು ಶಾಂಗ್ರಿಲಾ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆಯ ನಂತರ, ಎಲ್ಲ ಕಾಂಗ್ರೆಸ್ ಶಾಸಕರಿಂದ ಮೌಖಿಕ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಪ್ರತಿಯೊಬ್ಬ ಶಾಸಕರ ಮೌಖಿಕ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದ್ದು, ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಆದರೆ, ಇಲ್ಲಿ ಯಾವುದೇ ಶಾಸಕರ ತಮ್ಮ ಲಿಖಿತ ಅಭಿಪ್ರಾಯಕ್ಕೆ ಅವಕಾಶ ಇಲ್ಲ. ಯಾವುದೇ ಚೀಟಿ ಬರೆದು ಕೊಡುವ ಸಂಸ್ಕೃತಿಯೂ ಇಲ್ಲ. ಕೇವಲ ಮೌಖಿಕ ಅಭಿಪ್ರಾಯ ದಾಖಲಿಸಿಕೊಳ್ಳುತ್ತಿದ್ದಾರೆ.
ಎಐಸಿಸಿ ವೀಕ್ಷಕರ ವಿರುದ್ಧ ತಿರುಗಿಬಿದ್ದ ಶಾಸಕರು: ಮೌಖಿಕ ಅಭಿಪ್ರಾಯ ಸಂಗ್ರಹಕ್ಕೆ ಕೆಲ ಶಾಸಕರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೌಖಿಕ ಅಭಿಪ್ರಾಯ ದಾಖಲಿಸುವುದು ಹೇಗೆ ಎನ್ನುವ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿರಿಯ ಶಾಸಕರ ಆಕ್ಷೇಪ ವ್ಯಕ್ತವಾಗಿದೆ. ಚೀಟಿಯಲ್ಲಿ ಅಭಿಪ್ರಾಯ ಬರೆದು ತಿಳಿಸುವಂತೆ ಸೂಚನೆ ನೀಡಲಾಗುತ್ತಿದೆ. ಚೀಟಿಯಲ್ಲಿ ಅಭಿಪ್ರಾಯ ಬರೆದು ಬಾಕ್ಸ್ ಗೆ ಹಾಕುತ್ತಿರುವ ಶಾಸಕರು. ಮೌಖಿಕವಾಗಿ ಅಭಿಪ್ರಾಯ ದಾಖಲಿಸಲೂ ಅವಕಾಶ. ಮೌಖಿಕವಾಗಿ ಅಭಿಪ್ರಾಯ ದಾಖಲಿಸಲು ಒಪ್ಪದವರಿಂದ ಚೀಟಿಯಲ್ಲಿ ಹೆಸರು ಬರೆದು ಕೊಡುವ ಅವಕಾಶ ಕಲ್ಪಿಸಿರುವ ಎಐಸಿಸಿ ವೀಕ್ಷಕರು.
ಡಿಕೆಶಿ ಪರ ಘೋಷಣೆ ಕೂಗುತ್ತಿರುವ ಕಾರ್ಯಕರ್ತರು: ಇನ್ನು ರಾತ್ರಿಯೂ ಕೂಡ ಶಾಂಗ್ರಿಲಾ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕರಿಂದ ಮುಖ್ಯಮಂತ್ರಿ ಯಾರಾಗಬೇಕು ಎಂದು ಅಭಿಪ್ರಾಯ ಪಡೆಯಲಾಗುತ್ತಿದೆ. ಅಭಿಪ್ರಾಯ ಸಂಗ್ರಹದ ವೇಳೆ ಯಾರ ಪರವಾಗಿಯೂ ಘೋಷಣೆ ಹಾಕಬೇಡಿ ಎಂದು ಕಾರ್ಯಕರ್ತರಿಗೆ ಹಾಗೂ ಶಾಸಕರಿಗೂ ಸಂದೇಶವನ್ನು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಂದೇಶ ರವಾನಿಸಿದ್ದಾರೆ. ಹೊಟೇಲ್ ಹೊರಗೆ ಬಂದು ಕಾರ್ಯಕರ್ತರಿಗೆ ಘೋಷಣೆ ಕೂಗಬೇಡಿ ಎಂದು ಶಾಸಕ ಬೈರತಿ ಸುರೇಶ್ ಮನವಿ ಮಾಡಿದರು. ಆದರೆ ಶಾಸಕ ಸುರೇಶ್ ಮುಂದೆಯೇ ಡಿಕೆಶಿವಕುಮಾರ್ ಪರ ಘೋಷಣೆ ಕೂಗಿದರು.
ಕೇಂದ್ರದ ವೀಕ್ಷಕರ ವರದಿ ಆಧರಿಸಿ ಸಿಎಂ ಆಯ್ಕೆ: ಸರ್ಕಾರ ರಚನೆಗೆ ಕಸರತ್ತು ನಡೆಸಿರುವ ರಾಜ್ಯ ನಾಯಕರು ಮುಖ್ಯಮಂತ್ರಿ ಹುದ್ದೆಗಾಗಿ ಭಾರಿ ಪೈಪೋಟಿಯನ್ನು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು (ಭಾನುವಾರ) ಸಂಜೆ ಶಾಸಕಾಂಗದ ಸಭೆ ನಡೆಸಲಾಗಿದ್ದು, ಈಗ ಮತ್ತೊಮ್ಮೆ ವೈಯಕ್ತಿಕವಾಗಿ ಶಾಸಕರನ್ನು ಮಾತನಾಡಿಸಿ ಅವರ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಇನ್ನು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ವರದಿಯನ್ನು ಹೈಕಮಾಂಡ್‌ಗೆ ನೀಡಲಿದ್ದಾರೆ. ಇದನ್ನು ಆಧರಿಸಿ ನೂತನ ಮುಖ್ಯಮಂತ್ರಿ ಆಯ್ಕೆ ಮಾಡಲಾಗುತ್ತದೆ.
ವೀಕ್ಷಕರ ವರದಿ ಆಧರಿಸಿ ಹೈಕಮಾಂಡ್‌ನಿಂದ ಸಿಎಂ ಆಯ್ಕೆ! ನಾಳೆಯೇ ತೀರ್ಮಾನ
ಶಾಸಕರ ಅಭಿಪ್ರಾಯ ಸಂಗ್ರಹದ ವೀಕ್ಷಕರ ವರದಿಯನ್ನು ಆಧರಿಸಿ ಕೇಂದ್ರದಲ್ಲಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ತೀರ್ಮಾನಿಸಿ ಕರುನಾಡಿಗೆ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಹುದ್ದೆಯ ಪ್ರಮಾಣ ವಚನ ಸ್ವೀಕಾರದ ದಿನಾಂಕವೂ ನಿಗದಿ ಆಗಲಿದೆ.