Asianet Suvarna News Asianet Suvarna News

ಮನೆ ಬಾಗಿಲಿಗೆ ಪಡಿತರ : ಸರ್ಕಾರಕ್ಕೆ ಶಿಫಾರಸು

  • ಒಪ್ಪಿದ ಶುಲ್ಕವನ್ನು ಪಾವತಿಸಿ ಮನೆಬಾಗಿಲಿಗೆ ಪಡಿತರ 
  • ಕಂದಾಯ, ಆಹಾರ ಹಾಗೂ ಸಾರಿಗೆ ಇಲಾಖೆಗಳ ಸುಧಾರಣೆ ವಿಚಾರ
  • ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ವರದಿ
Karnataka Administrative Reform Commission suggest to govt on Ration to doorstep snr
Author
Bengaluru, First Published Jul 4, 2021, 8:08 AM IST

ಬೆಂಗಳೂರು (ಜು.04):  ಪಡಿತರ ಕಾರ್ಡ್‌ದಾರರು ಮತ್ತು ನ್ಯಾಯಬೆಲೆ ಅಂಗಡಿಯವರು ಪರಸ್ಪರ ಒಪ್ಪಿದ ಶುಲ್ಕವನ್ನು ಪಾವತಿಸಿ ಮನೆಬಾಗಿಲಿಗೆ ಪಡಿತರ ತರಿಸಿಕೊಳ್ಳಲು ಅನುಮತಿ ನೀಡುವುದು ಸೇರಿದಂತೆ ಕಂದಾಯ, ಆಹಾರ ಹಾಗೂ ಸಾರಿಗೆ ಇಲಾಖೆಗಳ ಸುಧಾರಣೆಗೆ ಸಂಬಂಧಿಸಿದ ವಿಸ್ತೃತ ವರದಿಯನ್ನು ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಶನಿವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ನೇತೃತ್ವದ ಆಯೋಗವು ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕಂದಾಯ, ಆಹಾರ ಮತ್ತು ಸಾರಿಗೆ ಇಲಾಖೆಗೆ ಸಂಬಂಧಪಟ್ಟಂತಹ ಸುಧಾರಣೆ ಕುರಿತ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿದೆ. ಹೋಬಳಿ, ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕೆಲಸ ಮಾಡುವ ಮತ್ತು ನಾಗರಿಕರ ಮಧ್ಯೆ ಕಾರ್ಯನಿರ್ವಹಿಸುವ ಸಿಬ್ಬಂದಿ ಜತೆ ಆಯೋಗವು ಚರ್ಚಿಸಿದೆ. 57 ಐಎಎಸ್‌, ಕೆಎಎಸ್‌ ಅಧಿಕಾರಿಗಳು ಮತ್ತು ಪ್ರೊಬೇಷನರಿ ಅಧಿಕಾರಿಗಳ ತಂಡ ಕ್ಷೇತ್ರ ಸಮೀಕ್ಷೆ ನಡೆಸಿ ಆಯೋಗವು ವರದಿಯನ್ನು ಸಿದ್ಧಪಡಿಸಿದೆ.

'ಮನೆ ಬಾಗಿಲಿಗೆ ಪಡಿತರ' ಕಿತ್ತಾಡ್ತಿವೆ ದೆಹಲಿ ಮತ್ತು ಕೇಂದ್ರ ಸರ್ಕಾರ ..

ಪಡಿತರದಾರರಿಗೆ ಮನೆಬಾಗಿಲಿಗೆ ಪಡಿತರ ದೊರೆಯುವಂತೆ ಮಾಡಲು ಅವಕಾಶವಿದೆ. ಪಡಿತರ ಚೀಟಿದಾರರು ಹಾಗೂ ನ್ಯಾಯಬೆಲೆ ಅಂಗಡಿಯವರು ಪರಸ್ಪರ ಒಪ್ಪಿತ ಶುಲ್ಕ ನಿಗದಿ ಮಾಡಿ ಮನೆ ಬಾಗಿಲಿಗೆ ಪಡಿತರ ತರಿಸಿಕೊಳ್ಳಲು ಅವಕಾಶ ನೀಡಬಹುದು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಅದೇ ರೀತಿ ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಪಡಿತರ ಚೀಟಿ ಡೇಟಾಬೇಸ್‌ನೊಂದಿಗೆ ಸಂಯೋಜಿಸಬೇಕು ಅಥವಾ ಮರಣ ನೋಂದಣಿಯ ನಂತರ ಪಡಿತರ ಚೀಟಿ ಕುಟುಂಬ ಸದಸ್ಯರ ಪಟ್ಟಿಸ್ವಯಂಚಾಲಿತವಾಗಿ ನವೀಕರಣವಂತಾಗಬೇಕು. ರಾಜ್ಯದಿಂದ ಸರ್ಕಾರ ಅನುಮೋದಿತ ಪರೀಕ್ಷಾ ಕೇಂದ್ರಗಳನ್ನು ಗುರುತಿಸಬೇಕು. ಕಾನೂನು ಮಾಪನಶಾಸ್ತ್ರ ಇಲಾಖೆ ನೀಡುವ ಪರವಾನಿಗೆಗಳನ್ನು 3-5 ವರ್ಷಗಳವರೆಗೆ ಸ್ವಯಂಚಾಲಿತ ಆನ್‌ಲೈನ್‌ ಮೂಲಕ ನವೀಕರಣ, ತಿದ್ದುಪಡಿ ವ್ಯವಸ್ಥೆಯನ್ನು ಜಾರಿಮಾಡಬೇಕು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಎಲ್ಲಾ ಇಲಾಖೆಗಳು ನಾಗರಿಕರಿಗೆ ಒದಗಿಸುವ ಸುಮಾರು 800 ಆನ್‌ಲೈನ್‌ ಸೇವೆಗಳಿಗೆ ಅಟಲ್‌ಜೀ ಜನಸ್ನೇಹಿ ಕೇಂದ್ರಗಳು ಏಕಗವಾಕ್ಷಿ ಏಜೆನ್ಸಿಯಾಗಬೇಕು. ಈ 800 ಸೇವೆಗಳು ಬೆಂಗಳೂರು ಒನ್‌, ಕರ್ನಾಟಕ ಒನ್‌, ಗ್ರಾಮ ಪಂಚಾಯಿತಿ ಬಾಪೂಜಿ ಸೇವಾ ಕೇಂದ್ರಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಲಭ್ಯವಾಗಬೇಕು. ರಾಜ್ಯ ಸರ್ಕಾರದ ಎಲ್ಲಾ ಇ-ಪೇಟೆಗಳನ್ನು ಮೊಬೈಲ್‌ ಮೂಲಕ ಒದಗಿಸಲು ಕರ್ನಾಟಕ ಮೊಬೈಲ್‌ ಒನ್‌ ಆ್ಯಪ್‌ ಅನ್ನು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಮಾಡಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.

ಒನ್ ನೇಷನ್- ಒನ್ ರೇಷನ್ ಜಾರಿಗೊಳಿಸಲು ಗಡುವು ಕೊಟ್ಟ ಸುಪ್ರೀಂ! .

ಕಂದಾಯ ಇಲಾಖೆಯಿಂದ ನೀಡಲಾಗುವ ಕೆಲವು ಪ್ರಮಾಣ ಪತ್ರಗಳು ಅನುಪಯುಕ್ತವಾಗಿದೆ. ಜನಸಂಖ್ಯಾ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಬೆಳೆ ಪ್ರಮಾಣ ಪತ್ರ, ಕೃಷಿಕ ಪ್ರಮಾಣ ಪತ್ರಗಳನ್ನು ತೆಗೆದುಹಾಕಿ ಮತ್ತು ಪರ್ಯಾಯಗಳನ್ನು ಸೂಚಿಸಿ ಆದೇಶ ಹೊರಡಿಸಬೇಕು. ಭೂಸ್ವಾಧೀನ ನಿರ್ವಹಣಾ ಸಾಫ್ಟ್‌ವೇರ್‌ ವ್ಯವಸ್ಥೆಯನ್ನು ಕಂದಾಯ ಇಲಾಖೆ ತ್ವರಿತವಾಗಿ ಅಭಿವೃದ್ಧಿಪಡಿಸಬೇಕು. ಸೂಕ್ತವಾದ ಮಾರ್ಪಡುಗಳನ್ನು ಮಾಡುವ ಮೂಲಕ ಕೆಐಎಡಿಬಿ, ಬಿಡಿಎ, ಎನ್‌ಎಚ್‌ಐ ಸೇರಿದಂತೆ ವಿವಿಧ ಭೂ ಸ್ವಾಧೀನ ಪಡಿಸಿಕೊಳ್ಳುವ ಸಂಸ್ಥೆಗಳಿಂದ ಬಳಸುವುದನ್ನು ಕಡ್ಡಾಯಗೊಳಿಸಲು ಆದೇಶ ಹೊರಡಿಸಬೇಕು ಎಂದು ತಿಳಿಸಿದೆ.

ಅಡಮಾನ ನೋಂದಣಿ, ಭೂಮಿ ಅಥವಾ ನಿವೇಶನಗಳ ಅಡಮಾನ ಬಿಡುಗಡೆಗೊಳಿಸಲು ಮತ್ತು ಎನ್‌ಕಂಬರೆನ್ಸ್‌ ನೀಡುವ ವಿಧಾನ ಸರಳೀಕರಿಸಬೇಕು ಮತ್ತು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಮಾಡಬೇಕು. ಕಾವೇರಿ-2 ಮತ್ತು ಆನ್‌ಲೈನ್‌ ಸೇವೆಯನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಬೇಕು. ಇದು ಸಬ್‌ರಿಜಿಸ್ಟ್ರಾರ್‌ ಕಚೇರಿಗೆ ಬರುವ ಮೊದಲು ಯಾವುದೇ ಸಮಸ್ಯೆಯೇ ಇಲ್ಲದೇ ನೋಂದಣಿ ಪೂರ್ವ ದತ್ತಾಂಶ ನಮೂದು ಮಾಡಲು ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದೆ.

ಗ್ರಾಮಲೆಕ್ಕಾಧಿಕಾರಿಗಳನ್ನು ಗ್ರಾಮ ಅಧಿಕಾರಿಗಳಾಗಿ ಮರು ಪದನಾಮಕರಣ ಮಾಡಬಹುದು. ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯವ್ಯಾಪ್ತಿ ಗ್ರಾಮೀಣ ಪ್ರದೇಶದಲ್ಲಿನ ಗ್ರಾಮಪಂಚಾಯಿತಿ ಕಾರ್ಯವ್ಯಾಪ್ತಿಯೊಂದಿಗೆ ಸಮನ್ವಯಗೊಳ್ಳಬೇಕು. ಎಲ್ಲಾ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಪಡಿಸಬಹುದು ಮತ್ತು ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಬಹುದು ಎಂದು ಆಯೋಗವು ಸಲಹೆ ಮಾಡಿದೆ.

Follow Us:
Download App:
  • android
  • ios