Kantara movie Daiva controversy: 'ಕಾಂತಾರ: ಚಾಪ್ಟರ್ ೧' ಚಿತ್ರದ ಯಶಸ್ಸಿನ ನಡುವೆ, ದೈವಾರಾಧನೆ ಅನುಕರಣೆ, ದೈವ ನುಡಿಗಳ ಅಪಹಾಸ್ಯದಿಂದ ತುಳುನಾಡಲ್ಲಿ ಸಂಘರ್ಷ ಹೆಚ್ಚಾಗಿದೆ. ದೈವಾರಾಧಕರು ದೈವಕ್ಕೆ ದೂರು ನೀಡಿದ್ದು, ಚಿತ್ರಕ್ಕೆ ದೈವವು ಅನುಮತಿ ನೀಡಿತ್ತೇ ಅಥವಾ ಎಚ್ಚರಿಕೆ ನೀಡಿತ್ತೇ ಹೊಸ ಚರ್ಚೆ.
ಮಂಗಳೂರು (ಅ.12): ತುಳುನಾಡಿನ ದೈವದ ಕಥೆಯುಳ್ಳ ‘ಕಾಂತಾರ: ಚಾಪ್ಟರ್ ೧’ ಯಶಸ್ವಿಯಾಗಿ ಮುನ್ನಡೆಯುತ್ತಿರುವಾಗಲೇ ಚಿತ್ರದ ಕುರಿತಂತೆ ತುಳುನಾಡಿನಲ್ಲಿ ಪರ-ವಿರೋಧ ಸಂಘರ್ಷ ತಾರಕಕ್ಕೇರಿದೆ. ಕಾಂತಾರದಲ್ಲಿ ದೈವಾರಾಧನೆ ದೃಶ್ಯಗಳ ಅನುಕರಣೆ ಮಾಡಿ ತುಳುನಾಡು ದೈವಗಳ ನುಡಿಗಳ ಬಗ್ಗೆಯೇ ಅಪಹಾಸ್ಯ ಮಾಡಲಾಗುತ್ತಿದ್ದು, ಇದು ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಕಾಂತಾರ ಸಿನಿಮಾಗೆ ದೈವ ಅನುಮತಿ ನೀಡಿತ್ತಾ ಎನ್ನುವ ಹೊಸ ಚರ್ಚೆಗಳು ಸಂಚಲನ ಮೂಡಿಸುತ್ತಿವೆ.
ದೈವ ಹೇಳಿದ್ದಾ, ದೈವ ನರ್ತಕ ಹೇಳಿದ್ದಾ?:
ಕಾಂತಾರ ಸಿನಿಮಾ ಹಾಗೂ ದೈವಗಳ ಅನುಕರಣೆ ವಿರುದ್ಧ ದೈವಾರಾಧಕರು ಗುರುವಾರ ದೈವಕ್ಕೆ ದೂರು ನೀಡಿದ್ದರು. ಈ ವೇಳೆ ದೈವಾರಾಧಕರ ಹೋರಾಟಕ್ಕೆ ಪಿಲಿ ಚಾಮುಂಡಿ ದೈವ ಅಭಯ ನೀಡಿತ್ತು. ಆದರೆ ಇದೀಗ ಪಿಲಿಚಾಮುಂಡಿ ದೈವದ ನುಡಿಯ ಬಗ್ಗೆಯೇ ಅಪಹಾಸ್ಯ ಮಾಡಲಾಗುತ್ತಿದೆ. ಕಾಂತಾರ ಸಿನಿಮಾದ ಡೈಲಾಗ್ ಬಳಸಿ ದೈವ ನುಡಿ ವಿರುದ್ಧ ವ್ಯಂಗ್ಯ ಮಾಡಲಾಗುತ್ತಿದ್ದು, ದೈವ ಹೇಳಿದ್ದಾ, ದೈವ ನರ್ತಕ ಹೇಳಿದ್ದಾ? ಎಂದು ಸಾಮಾಜಿಕ ತಾಣಗಳಲ್ಲಿ ಅಪಹಾಸ್ಯ ಎಸಗಲಾಗಿದೆ.
ಎಚ್ಚರಿಕೆಯಾ, ಅನುಮತಿಯಾ?:
ಕಾಂತಾರ ಹಾಗೂ ರಿಷಬ್ ಶೆಟ್ಟಿ ಪರ ಪೋಸ್ಟ್ ಮಾಡುತ್ತಿರುವ ಹಲವರು, ರಿಷಬ್ ಕೂಡ ದೈವದ ಬಳಿಯೇ ಕೇಳಿ ಸಿನಿಮಾ ಮಾಡಿದ್ದು ಎಂದು ವಾದಿಸಿದ್ದಾರೆ. ಆದರೆ ಕಾಂತಾರ ಭಾಗ ಎರಡಕ್ಕೆ ದೈವ ಕೊಟ್ಟಿದ್ದು ಎಚ್ಚರಿಕೆಯಾ? ಅನುಮತಿಯಾ? ಎಂಬ ಹೊಸ ಚರ್ಚೆ ಸಂಚಲನ ಮೂಡಿಸಿದೆ.
