ವಿಜಯಪುರದ ಬಸವನ ಬಾಗೇವಾಡಿಯಲ್ಲಿ ನಡೆದ ಎತ್ತಿನ ಬಂಡಿ ಸಮಾವೇಶದಲ್ಲಿ, ಕನ್ನೇರಿ ಶ್ರೀಗಳು ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕೃಷಿಯ ಆಧಾರಸ್ತಂಭಗಳಾದ ಎತ್ತು ಮತ್ತು ಆಕಳುಗಳ ಸಂರಕ್ಷಣೆಗೆ ವಿಶೇಷ ಅನುದಾನ ನೀಡುವಂತೆ ಮತ್ತು 'ನಂದಿ ಅಭಿಯಾನ'ವನ್ನು ಚುರುಕುಗೊಳಿಸುವಂತೆ ಆಗ್ರಹಿಸಿದರು.
ವಿಜಯಪುರ (ಜ.29): ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದ ಎತ್ತಿನ ಬಂಡಿಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕನ್ನೇರಿ ಶ್ರೀಗಳು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಕೃಷಿಯ ಬೆನ್ನೆಲುಬಾದ ಎತ್ತು ಮತ್ತು ಆಕಳುಗಳ ಸಂರಕ್ಷಣೆಗಾಗಿ ಸರ್ಕಾರ ತಕ್ಷಣವೇ ವಿಶೇಷ ಅನುದಾನ ಘೋಷಿಸಬೇಕು ಎಂದು ಆಗ್ರಹಿಸಿದ ಶ್ರೀಗಳು, ರೈತರ ಹಿತದೃಷ್ಟಿಯಿಂದ 'ನಂದಿ ಅಭಿಯಾನ'ಕ್ಕೆ ವೇಗ ನೀಡುವಂತೆ ಒತ್ತಾಯಿಸಿದರು.
ನೆರೆಯ ರಾಜ್ಯಗಳನ್ನ ನೋಡಿ ಕಲಿಯಿರಿ
ಗೋವುಗಳ ರಕ್ಷಣೆಯ ವಿಷಯದಲ್ಲಿ ಕರ್ನಾಟಕ ಸರ್ಕಾರ ನೆರೆಯ ರಾಜ್ಯಗಳನ್ನು ನೋಡಿ ಕಲಿಯಬೇಕಿದೆ ಎಂದು ಶ್ರೀಗಳು ಕಿವಿಮಾತು ಹೇಳಿದರು. ಗೋವಾದಲ್ಲಿ ಆಕಳು ಮತ್ತು ಎತ್ತಿಗೆ ದಿನಕ್ಕೆ 650 ರೂಪಾಯಿ ಅನುದಾನ ನೀಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ 50 ರೂಪಾಯಿ ಹಾಗೂ ಇತರ ರಾಜ್ಯಗಳಲ್ಲಿ 80 ರಿಂದ 90 ರೂಪಾಯಿ ನೀಡಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಒಂದು ರೂಪಾಯಿಯೂ ನೀಡುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
'ಕೇಳದವರಿಗೆ ಬಿಟ್ಟಿ ಭಾಗ್ಯ, ರೈತರಿಗೇಕೆ ಅಸಡ್ಡೆ?'
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪರೋಕ್ಷವಾಗಿ ಟೀಕಿಸಿದ ಶ್ರೀಗಳು, ಯಾರು ಕೇಳದಿದ್ದರೂ ಅವರಿಗೆ ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದ್ದೀರಿ. ಆದರೆ ಅನ್ನ ನೀಡುವ ರೈತನ ಎತ್ತುಗಳಿಗೆ ಮೇವಿಗಾಗಿ ಅನುದಾನ ನೀಡಲು ಸರ್ಕಾರಕ್ಕೆ ಮನಸ್ಸಿಲ್ಲವೇ? ಸರ್ಕಾರ ಯಾವುದೇ ಇರಲಿ, ಎತ್ತುಗಳಿಗೆ ಅನುದಾನ ನೀಡಿದರೆ ಮಾತ್ರ ಅವು ಬದುಕಲು ಸಾಧ್ಯ ಎಂದು ನೇರವಾಗಿ ಚಾಟಿ ಬೀಸಿದರು. ಇದು ಕೇವಲ ರೈತರ ಮನವಿಯಲ್ಲ, ಸ್ವಾಮೀಜಿಗಳ ಆಗ್ರಹವೂ ಹೌದು ಎಂದು ಎಚ್ಚರಿಸಿದರು.
ಅಜಿತ್ ಪವಾರ್ ನಿಧನಕ್ಕೆ ಕನ್ನೇರಿ ಶ್ರೀ ಸಂತಾಪ
ಇದೇ ವೇಳೆ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಅವರ ದುರಂತ ನಿಧನದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು ತೀವ್ರ ಸಂತಾಪ ಸೂಚಿಸಿದರು. "ಅಜಿತ್ ಪವಾರ್ ಒಬ್ಬ ಧೀಮಂತ ನಾಯಕ ಮತ್ತು ಹಠವಾದಿ ರಾಜಕಾರಣಿಯಾಗಿದ್ದರು. ಕೆಲಸ ಆಗುತ್ತದೆ ಎಂದರೆ ಆಗುತ್ತದೆ, ಇಲ್ಲವಾದರೆ ಇಲ್ಲ ಎಂದು ನೇರವಾಗಿ ಹೇಳುವ ಗುಣ ಅವರದ್ದಾಗಿತ್ತು. ಅವರ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ಹೇಳುತ್ತಾ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.


