*  ಮೂರು ದಿನಗಳಿಂದ ಕುಡಿಯಲು ನೀರು, ತಿನ್ನಲು ಆಹಾರವಿಲ್ಲ*  ಉಕ್ರೇನ್‌ ರೈಲು ನಿಲ್ದಾಣದಲ್ಲಿರುವ ಮೃತ ನವೀನ್‌ ಸ್ನೇಹಿತ*  ಯಾವಾಗ ಬೇಕಾದರೂ ನಮ್ಮ ಮೇಲೆ ಬಾಂಬ್‌ ದಾಳಿ ನಡೆಯಬಹುದು 

ಬೆಂಗಳೂರು(ಮಾ.03): 'ಯಾವ ಸಂದರ್ಭದಲ್ಲಾದರೂ ನಮ್ಮ ಮೇಲೆ ಬಾಂಬ್‌, ಶೆಲ್‌ ದಾಳಿ ನಡೆಯಬಹುದು. ಅಂತಿಮವಾಗಿ ನಡೆದುಕೊಂಡು ಬಂದೇ ರೈಲು ನಿಲ್ದಾಣ ಸೇರಿದ್ದೇವೆ. ಯಾವ ರೈಲು ಬರುತ್ತದೆ, ನಾವೆಲ್ಲಿಗೆ ಹೋಗುತ್ತೇವೆ’ ಎಂಬ ಕಲ್ಪನೆಯೂ ಇಲ್ಲದಂತಾಗಿದೆ. ನಾವು ಜೀವಂತವಾಗಿ ಹಿಂತಿರುಗುತ್ತೇವೆ ಎಂಬ ಆಸೆಯನ್ನೇ ಬಿಟ್ಟಿದ್ದೇವೆ.’ - ಇದು ಮಂಗಳವಾರವಷ್ಟೇ ಉಕ್ರೇನ್‌ನಲ್ಲಿ ಶೆಲ್‌ ದಾಳಿಗೆ ಬಲಿಯಾದ ಹಾವೇರಿಯ ನವೀನ್‌ ಸ್ನೇಹಿತ ಶ್ರೀಕಾಂತ್‌ ಅವರ ಅಳಲು.

ಬೆಂಗಳೂರಿನ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ ಹರೀಶ್‌ ಅವರ ಸಹೋದರರಾಗಿರುವ ಶ್ರೀಕಾಂತ್‌ ಉಕ್ರೇನ್‌ನಲ್ಲಿ ಎಂಬಿಬಿಎಸ್‌ ವ್ಯಾಸಂಗಕ್ಕಾಗಿ ತೆರಳಿದ್ದರು. ಗೆಳೆಯನ ಅಗಲಿಕೆಯಿಂದ ತೀವ್ರ ಆತಂಕಕ್ಕೆ ಒಳಗಾಗಿರುವ ಅವರು, ಕುಟುಂಬ ಸದಸ್ಯರೊಂದಿಗೆ ತಮ್ಮ ಆತಂಕ ತೋಡಿಕೊಂಡಿದ್ದಾರೆ.

Russia-Ukraine War: ಉಕ್ರೇನ್‌ ತೊರೆಯಲು ಸಿಕ್ಕ ಸಿಕ್ಕ ವಾಹನ ಹತ್ತುತ್ತಿದ್ದಾರೆ ಕನ್ನಡಿಗರು..!

ಈಗಷ್ಟೇ ಸಾವಿರಕ್ಕೂ ಹೆಚ್ಚು ಭಾರತೀಯರು ರೈಲು ನಿಲ್ದಾಣಕ್ಕೆ ನಡೆದುಕೊಂಡೇ ಬಂದಿದ್ದೇವೆ. 250ಕ್ಕೂ ಹೆಚ್ಚು ಜನ ಕನ್ನಡಿಗರೇ ಇದ್ದೇವೆ. ವಿಪರೀತ ಮಂಜು ಬೀಳುತ್ತಿದೆ. ಚಳಿ ತಡೆಯಲು ಆಗುತ್ತಿಲ್ಲ. ಯಾವ ರೈಲು, ಬರುತ್ತದೆ. ಎಲ್ಲಿಗೆ ಹೋಗುತ್ತೇವೆ ಎಂಬುದೂ ಗೊತ್ತಿಲ್ಲ ಎಂದು ಧ್ವನಿ ಸಂದೇಶದಲ್ಲಿ ಹೇಳಿದ್ದಾರೆ.

ಇದಕ್ಕೂ ಮೊದಲು ಉಕ್ರೇನ್‌ನ ಬಂಕರ್‌ನಲ್ಲಿ ಜೀವ ಕೈಯಲ್ಲಿಟ್ಟುಕೊಂಡು ಮಾತನಾಡಿದ ಶ್ರೀಕಾಂತ್‌, ‘ಒಂದು ವೇಳೆ ಗುಂಡೇಟಿಗೆ ಸಾಯದಿದ್ದರೂ ಹೊಟ್ಟೆಗೆ ಊಟವಿಲ್ಲದೆ ಸಾಯುವುದು ಖಚಿತ’ ಎಂದಿದ್ದರು. ನಮ್ಮನ್ನು ರಕ್ಷಿಸಲು ಯಾರೂ ಬರುತ್ತಿಲ್ಲ. ಹೊರಜಗತ್ತಿನ ಸಂಪರ್ಕವೇ ಇಲ್ಲ. ನಾವು ರಕ್ಷಣೆ ಪಡೆದಿರುವ ಬಂಕರ್‌ನಲ್ಲಿ ಆಹಾರ ದಾಸ್ತಾನು ಕಡಿಮೆಯಾಗಿದೆ. ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ಏನಾಗುತ್ತದೆಯೋ ಎಂದು ಊಹಿಸಿದರೇ ಭಯವಾಗುತ್ತಿದೆ’ ಎಂದಿದ್ದಾರೆ.
ಲೆಕ್ಕಕ್ಕೆ ಮಾತ್ರ ನವೀನ್‌ ಸಾವು ತೋರಿಸಲಾಗುತ್ತಿದೆ. ನನಗೆ ತಿಳಿದ ಮಟ್ಟಿಗೆ ಇನ್ನೂ ಹಲವರು ಅಮಾಯಕ ಭಾರತೀಯ ವಿದ್ಯಾರ್ಥಿಗಳು ಸಾವಿಗೀಡಾಗಿರುವ ಶಂಕೆಯಿದೆ. ಕೆಲವು ಸಾವು-ನೋವುಗಳನ್ನು ಮುಚ್ಚಿಡಲಾಗುತ್ತಿದೆ ಎಂಬ ಅನುಮಾನವೂ ಇದೆ ಎಂದು ಅವರ ಸಹೋದರನಿಗೆ ತಿಳಿಸಿದ್ದಾರೆ.

ಗಡಿವರೆಗೆ ತಲುಪಿಸಿ: ಬೆಂಗಳೂರು ವಿದ್ಯಾರ್ಥಿನಿ ಕೈಮುಗಿದು ಮನವಿ

ಬೆಂಗಳೂರು: ‘ನಾವು ಮಿಕೊಲೈವ್‌ ಎಂಬ ಸಿಟಿಯಲ್ಲಿ ಸಿಲುಕಿದ್ದೇವೆ. ಕಳೆದ ಮೂರು ದಿನದಿಂದ ಸರಿಯಾಗಿ ಕುಡಿಯಲು ನೀರು, ತಿನ್ನಲು ಆಹಾರವೂ ಇಲ್ಲ. ಇರುವ ಆಹಾರವನ್ನೇ ಹಂಚಿಕೊಂಡು ತಿನ್ನುತ್ತಿದ್ದೇವೆ. ದಯವಿಟ್ಟು ನಮ್ಮನ್ನು ಬಾರ್ಡರ್‌ ತಲುಪಿಸಿ. ನಿಮ್ಮನ್ನು ಮತ್ತೇನೂ ಕೇಳುವುದಿಲ್ಲ ಕೈ ಜೋಡಿಸಿ ಪ್ರಾರ್ಥಿಸುತ್ತೇವೆ ನಮ್ಮನ್ನು ಬಾರ್ಡರ್‌ಗೆ ತಲುಪಿಸಿ’. - ಇದು ಉಕ್ರೇನ್‌ನ ಮಿಕೊಲೈವ್‌ ಎಂಬ ನಗರದಲ್ಲಿನ ಬಂಕರ್‌ನಲ್ಲಿ ಅಡಗಿಕೊಂಡಿರುವ ಕರ್ನಾಟಕ ವಿದ್ಯಾರ್ಥಿನಿ ಸಾಕ್ಷಿ ಮಾಡಿಕೊಂಡ ಮನವಿ.

Russia Ukraine Crisis: ಗಡಿ​ಯಲ್ಲೀಗ ನೈಜೀ​ರಿಯಾ ವಿದ್ಯಾ​ರ್ಥಿ​ಗಳ ಕಾಟ​!

ನಮ್ಮ ದೇಶದ ವಿವಿಧ ರಾಜ್ಯಗಳಿಂದ ಬಂದಿರುವ ಹುಡುಗಿಯರೇ ಇಲ್ಲಿ ಸಿಲುಕಿದ್ದೇವೆ. ಮಿಕೊಲೈವ್‌ನಲ್ಲಿ ಭಾರತೀಯರು ಸಿಲುಕಿರುವ ಬಗ್ಗೆ ಎಲ್ಲೂ ಚರ್ಚೆಯಾಗುತ್ತಿಲ್ಲ. ನಾವು ಇಲ್ಲಿ ಮೂರು ದಿನದಿಂದ ಸರಿಯಾಗಿ ಊಟ, ನೀರು ಸಹ ಇಲ್ಲದೆ ಬದುಕುತ್ತಿದ್ದೇವೆ. ನಾವು ನಿಮ್ಮನ್ನು ಏನೂ ಕೇಳುವುದಿಲ್ಲ ಕೇವಲ ಸಾರಿಗೆ ವ್ಯವಸ್ಥೆ ಮಾಡಿ ಎಂದು ಕೈ ಮುಗಿದು ಕೇಳಿಕೊಂಡ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇಲ್ಲಿನ ರೈಲು ನಿಲ್ದಾಣವೂ ಸ್ಫೋಟಗೊಂಡಿದೆ. ರೈಲು ಬಂದರೂ ಎಲ್ಲಿಗೆ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬುದು ಗೊತ್ತಾಗಲ್ಲ. ಸ್ಫೋಟಗಳು ನಡೆಯುವ ಸ್ಥಳದಿಂದ ತೀರಾ ಹತ್ತಿರದಲ್ಲಿದ್ದೇವೆ. ಊಟ-ತಿಂಡಿ ವ್ಯವಸ್ಥೆ ಮಾಡಿಕೊಳ್ಳಲೂ ಹೊರಗೆ ಹೋಗಲಾಗದ ಸ್ಥಿತಿ ಇದೆ. ಇಲ್ಲಿಂದ ಗಡಿ ಪ್ರದೇಶ ಒಂದು ಸಾವಿರ ಕಿ.ಮೀ. ಇದೆ. ಅಲ್ಲಿಂದ ನಾವು ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ದಯವಿಟ್ಟು ಕೇಂದ್ರ ಸರ್ಕಾರ ನಮ್ಮನ್ನು ಗಡಿ ತಲುಪಲು ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಅಂಗಲಾಚಿದರು.