Asianet Suvarna News Asianet Suvarna News

Russia-Ukraine War: ಉಕ್ರೇನ್‌ ತೊರೆಯಲು ಸಿಕ್ಕ ಸಿಕ್ಕ ವಾಹನ ಹತ್ತುತ್ತಿದ್ದಾರೆ ಕನ್ನಡಿಗರು..!

*  ನವೀನ್‌ ದುರ್ಮರಣ ಬಳಿಕ ಜೀವಭಯದಲ್ಲಿ ವಿದ್ಯಾರ್ಥಿಗಳು
*  ಆಗಿದ್ದಾಗಲೆಂದು ಗಡಿಯತ್ತ ಪಯಣ ಜತೆಗೆ ಆಹಾರ ಸಮಸ್ಯೆ
*  200 ಡಾಲರ್‌ ಲಂಚ ಕೊಟ್ಟು ರೈಲು ಹತ್ತಿದ ವಿದ್ಯಾರ್ಥಿ
 

Kannadigas Faces Problems in Ukraine Due to War grg
Author
Bengaluru, First Published Mar 3, 2022, 6:35 AM IST

ಬೆಂಗ​ಳೂ​ರು(ಮಾ.03): ಯುದ್ಧ​ಪೀಡಿತ ಉಕ್ರೇ​ನ್‌​ನ(Ukraine) ಖಾರ್ಕೀವ್‌​ನಲ್ಲಿ ಕಿರಿ​ದಾದ ಬಂಕ​ರ್‌ಗಳಲ್ಲಿ ಅನ್ನ, ಆಹಾರ ಇಲ್ಲದೆ ರಕ್ಷ​ಣೆ​ಗಾಗಿ ಎದು​ರು ನೋಡು​ತ್ತಿ​ದ್ದ ಕರ್ನಾ​ಟ​ಕದ(Karnataka) ಅನೇಕ ವಿದ್ಯಾ​ರ್ಥಿ​ಗಳೀಗ(Students) ದಿಢೀರ್‌ ರೈಲು, ಬಸ್ಸು ಸೇರಿ ಕಂಡ ಕಂಡ ವಾಹ​ನ​ಗ​ಳ​ನ್ನೇರಿ ಗಡಿ​ಯತ್ತ ದೌಡಾ​ಯಿ​ಸು​ತ್ತಿ​ದ್ದಾ​ರೆ. ಹಾವೇರಿ ಮೂಲದ ನವೀನ್‌(Naveen) ಸಾವು ಮತ್ತಷ್ಟು ದಿಕ್ಕೆ​ಡಿ​ಸಿದ್ದು, ಭಯ​ಭೀ​ತ​ರಾ​ಗಿ​ರುವ 50ಕ್ಕೂ ಹೆಚ್ಚು ವಿದ್ಯಾ​ರ್ಥಿ​ಗಳು ಬಾಂಬ್‌, ಶೆಲ್‌ ದಾಳಿ ಆತಂಕದ ನಡು​ವೆಯೇ ತಾಯ್ನಾ​ಡಿಗೆ ದಾಪು​ಗಾಲು ಹಾಕು​ತ್ತಿ​ದ್ದಾ​ರೆ. ಇಲ್ಲೇ ಇದ್ದರೆ ನವೀ​ನ್‌​ಗಾದ ಗತಿಯೇ ತಮ​ಗಾ​ಗ​ಬ​ಹುದು ಎಂಬ ಆತಂಕ​ದಿಂದಲೇ ಹೊರಟು ನಿಂತಿ​ದ್ದಾ​ರೆ.

ಖಾರ್ಕಿವ್‌ ನ್ಯಾಷ​ನಲ್‌ ಮೆಡಿ​ಕಲ್‌ ಯುನಿ​ವ​ರ್ಸಿ​ಟಿ​ ವಿದ್ಯಾ​ರ್ಥಿ​ಯಾ​ಗಿ​ದ್ದ ನವೀನ್‌ ತನಗೆ ಹಾಗೂ ಸ್ನೇಹಿ​ತ​ರಿಗೆ ಆಹಾರ ತರ​ಲೆಂದು ದಿನಸಿ ಅಂಗಡಿ ಮುಂದೆ ಸಾಲಿ​ನಲ್ಲಿ ನಿಂತಿ​ದ್ದಾಗ ರಷ್ಯಾದ(Russia) ಶೆಲ್‌ ದಾಳಿಗೆ ಸಿಲುಕಿ ಮಂಗ​ಳ​ವಾರ ಬೆಳ​ಗ್ಗೆ ಮೃತ​ಪ​ಟ್ಟಿ​ದ್ದರು. ಇದು ಯುದ್ಧ​ಪೀ​ಡಿತ ಪ್ರದೇ​ಶ​ವಾದ ಕೀವ್‌, ಖಾರ್ಕೀವ್‌​ನ​ಲ್ಲಿದ್ದ ಉಳಿದ ವಿದ್ಯಾ​ರ್ಥಿ​ಗ​ಳಲ್ಲಿ ದಿಗ್ಭ್ರಮೆ ಮೂಡಿ​ಸಿದೆ. ಇಲ್ಲೇ ಇದ್ದರೆ ನಾವೂ ಆಹಾರ(Food), ನೀರಿ​ಲ್ಲದೆ(Water) ಪರ​ದಾಟ ಅನು​ಭ​ವಿಸಿ ಕೊನೆಗೆ ನವೀ​ನ್‌ ರೀತಿ ಸಾವು ಕಾಣ​ಬ​ಹುದು ಎಂಬ ಆತಂಕ​ ಅನೇ​ಕ​ರನ್ನು ಕಾಡಲು ಶುರು​ವಾ​ಗಿದೆ. ಹೀಗಾಗಿ ಕೀವ್‌ ಮತ್ತು ಖಾರ್ಕೀವ್‌​ನಿಂದ ಅನೇ​ಕರು ಬಸ್‌, ರೈಲು, ಖಾಸಗಿ ವಾಹ​ನ​ಗಳ ಮೂಲಕ ಗಡಿಯತ್ತ ಹೊರ​ಟಿ​ದ್ದಾ​ರೆ. ಕಲ​ಬು​ರ​ಗಿ​ಯಿಂದ ಏಳು, ದಕ್ಷಿಣ ಕನ್ನ​ಡ, ಚಿತ್ರ​ದು​ರ್ಗ​, ಬಳ್ಳಾ​ರಿಯಿಂದ ತಲಾ 4, ಮಂಡ್ಯ-2, ದಾವ​ಣ​ಗೆರೆ, ಚಾಮ​ರಾ​ಜ​ನ​ಗರರಿಂದ ತಲಾ ಒಬ್ಬರು ಸೇರಿ​ದಂತೆ ಸುಮಾರು 50ಕ್ಕೂ ಹೆಚ್ಚು ವಿದ್ಯಾ​ರ್ಥಿ​ಗಳು ಈಗಾ​ಗಲೇ ಹಾಲೆಂಡ್‌, ಹಂಗೇರಿ ಗಡಿ​ಯತ್ತ ಹೊರ​ಟಿ​ದ್ದಾ​ರೆ ಎನ್ನುವ ಮಾಹಿತಿ ಸದ್ಯಕ್ಕೆ ದೊರೆ​ತಿ​ದೆ.

Russia-Ukraine Crisis: ಕೇಂದ್ರದ ನಿರ್ಲಕ್ಷ್ಯದಿಂದಲೇ ನವೀನ್‌ ಸಾವು: ಸಿದ್ದರಾಮಯ್ಯ

ಸುಲ​ಭ​ವಿಲ್ಲ ದಾರಿ: 

ತುಮ​ಕೂ​ರಿನ ಪ್ರತಿಭಾ ಬುಧ​ವಾರ ರೈಲು ಮೂಲಕ ಖಾರ್ಕೀವ್‌​ನಿಂದ ಹಂಗೇರಿ ಗಡಿ ತಲು​ಪಲು ಮುಂದಾ​ಗಿ​ದ್ದಾರೆ. ಆದರೆ, ಸ್ಥಳೀ​ಯ ಪೊಲೀ​ಸರು(Police) ಮೊದಲು ಉಕ್ರೇನ್‌ ವಿದ್ಯಾ​ರ್ಥಿ​ಗ​ಳಿಗೆ ಆದ್ಯತೆ ನೀಡು​ತ್ತಿ​ದ್ದಾರೆ, ಉಳಿ​ದ​ವ​ರಿಗೆ ಅಡ್ಡಿ ಮಾಡು​ತ್ತಿ​ದ್ದಾರಂತೆ. ಆದರೂ ಆಕೆ ಸಾಹಸ ಮಾಡಿ ರೈಲು ಹತ್ತಿ​ದ್ದಾಳೆ. ಕೆಲ​ವ​ರಂತು ಖಾಸಗಿ ವಾಹನ ಮಾಡಿ​ಕೊಂಡೇ ಗಡಿ​ಯತ್ತ ಹೊರ​ಟಿದ್ದರೆ, ಇನ್ನು ಕೆಲ​ವರು ರೈಲು ನಿಲ್ದಾಣ ತಲು​ಪಲು 10ರಿಂದ 18 ಕಿ.ಮೀ. ನಡೆ​ದು​ಕೊಂಡೇ ಹೊರ​ಟಿ​ದ್ದಾ​ರೆ.

ಬೆಳ​ಗಾವಿ ಜಿಲ್ಲೆಯ ಅಥ​ಣಿಯಲ್ಲಿ ಮೂವರು ವಿದ್ಯಾ​ರ್ಥಿ​ಗಳು ಬುಧಾ​ವರ ಬೆಳಗ್ಗೆ ಹೇಗೋ ರೈಲು ಹತ್ತಿ​ದ್ದು, ರೈಲು ಹತ್ತಲು ಪೊಲೀ​ಸ​ರಿಗೆ ತಲಾ 200 ಡಾಲರ್‌ ಲಂಚ(Bribe) ನೀಡ​ಬೇ​ಕಾ​ಯಿತಂತೆ. ಖಾರ್ಕೀವ್‌​ನಲ್ಲೇ ಓದು​ತ್ತಿದ್ದ ಮಂಗ​ಳೂರು ಮೂಲದ ಅನೈನಾ ಮಂಗ​ಳ​ವಾರ ಮಧ್ಯಾ​ಹ್ನವೇ ರೈಲು ಹತ್ತಿದ್ದು, ಲ್ವಿವ್‌ ತಲು​ಪಿ​ದ್ದಾರೆ. ಅದೇ ರೀತಿ ಉಡು​ಪಿಯ ಗ್ಲೆನ್‌​ವಿಲ್‌ ಖಾರ್ಕೀವ್‌​ನ ಬಂಕ​ರ್‌​ನಿಂದ ಹೊರ ಬಂದು 8 ಕಿ.ಮೀ. ನಡೆ​ದು​ಕೊಂಡೇ ರೈಲು ನಿಲ್ದಾ​ಣಕ್ಕೆ ಹೊರ​ಟಿ​ದ್ದಾರೆ. ಆ ನಂತರ ಆತನ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಪೋಷ​ಕ​ರಲ್ಲಿ ಆತಂಕ ಮೂಡಿ​ಸಿ​ದೆ.

Russia Ukraine Crisis: ಗಡಿ​ಯಲ್ಲೀಗ ನೈಜೀ​ರಿಯಾ ವಿದ್ಯಾ​ರ್ಥಿ​ಗಳ ಕಾಟ​!

ಇನ್ನು ಹಾಸ​ನದ ಗಗನ್‌ಗೌಡ ಕೂಡ ಖಾರ್ಕೀವ್‌​ನಲ್ಲೇ ಇದ್ದು, ಹೊರ​ಡ​ಲು ಸಿದ್ಧ​ರಾ​ಗಿ​ದ್ದಾ​ರೆ. ರೈಲು ನಿಲ್ದಾಣ ತಲು​ಪ​ಬೇ​ಕಾ​ದರೆ 10 ಕಿ.ಮೀ. ನಡೆ​ದು​ಕೊಂಡೇ ಹೋಗ​ಬೇ​ಕಂತೆ. ಅಲ್ಲಿ​ರೋದು ಬೇಡ, ದೇವರ ಮೇಲೆ ಭಾರ ಹಾಕಿ​ ರೈಲು ಹತ್ತು ಮಗಾ ಎಂದು ತಾಯಿ ಆತ​ನಿಗೆ ಸಲಹೆ ನೀಡಿ​ದ್ದಾ​ರೆ. ಕೀವ್‌​ನ​ಗ​ರ​ದ​ಲ್ಲಿ​ದ್ದ ಚಾಮ​ರಾ​ಜ​ನ​ಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕಮರಹಳ್ಳಿಯ ಕಾವ್ಯಾ ಬುಧ​ವಾರ ಬೆಳಗ್ಗೆ ರೈಲು ಹತ್ತಿದ್ದು, ಗಡಿ​ಯತ್ತ ಹೊರ​ಟಿ​ದ್ದಾಳೆ ಎಂಬ ಮಾಹಿತಿ ಇದೆ.
ಖಾರ್ಕಿವ್‌ನಲ್ಲಿದ್ದ ನನ್ನ ಪುತ್ರ ಗ್ಲೆನ್‌ ವಿಲ್‌ ಬಂಕರ್‌ನಿಂದ ಹೊರ ಬಂದು 8 ಕಿ.ಮೀ. ದೂರ ರೈಲ್ವೆ ನಿಲ್ದಾಣಕ್ಕೆ ನಡೆದುಕೊಂಡು ಹೊರಟಿದ್ದಾನೆ. ಸದ್ಯ ಆತನ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ರೈಲು ಸಿಕ್ಕಿ​ದೆಯೋ ಇಲ್ಲವೋ? ಹಂಗೇ​ರಿಗೆ ಹೋಗು​ತ್ತಾನೋ, ಪೋಲೆಂಡ್‌ಗೆ ಹೋಗು​ತ್ತಾನೋ ಗೊತ್ತಿಲ್ಲ. ವಾರದ ಹಿಂದಷ್ಟೇ ಉಕ್ರೇ​ನ್‌ಗೆ ಹೋಗಿದ್ದ. ಇಡೀ ದಿನ ಏನೂ ತಿಂದಿಲ್ಲ ಆತ ಅಂತ ಉಡು​ಪಿಯ ಗ್ಲೆನ್‌​ಮಿಲ್‌ ತಂದೆ ಮೆಲ್ವಿ​ನ್‌ ತಿಳಿಸಿದ್ದಾರೆ. 

200 ಡಾಲರ್‌ ಲಂಚ ಕೊಟ್ಟು ರೈಲು ಹತ್ತಿದ್ವಿ

ಮಂಗಳವಾರ ಸಂಜೆಯಿಂದ ಖಾರ್ಕೀವ್‌​ನಲ್ಲಿ ಪರಿಸ್ಥಿತಿ ಬದಲಾಗಿದೆ. ಸದ್ಯ ಸ್ಥಳೀಯರಷ್ಟೇ ರೈಲಲ್ಲಿ ಪ್ರಯಾಣಿಸುತ್ತಿದ್ದಾರೆ. ವಿದೇಶಿಯರಿಗೆ ರೈಲು ಹತ್ತಲು ಅವಕಾಶ ನೀಡುತ್ತಿಲ್ಲ. ನಾವು ಮೂವರು ಸ್ಥಳೀಯ ಪೊಲೀಸರಿಗೆ ತಲಾ 200 ಡಾಲರ್‌ ಲಂಚ ನೀಡಿ, ಕೈ ಮುಗಿದು ರೈಲು ಹತ್ತಿದ್ದೇವೆ. ಬುಧವಾರ ಸಂಜೆ ಒಳಗೆ ದೇಶ ಬಿಟ್ಟು ಹೋಗಲು ಸೂಚನೆ ನೀಡಿದ್ದಾರೆ. ಮುಂದೆ ಏನಾದರೂ ನಾವು ಜವಾಬ್ದಾರಿ ಅಲ್ಲ ಎಂದಿದ್ದಾ​ರೆ. ನಾವು ಆತಂಕ​ದ​ಲ್ಲಿ​ದ್ದೇ​ವೆ ಅಂತ ಅಥ​ಣಿ ದುಂಡಪ್ಪ ಕೋಮಾರ ಹೇಳಿದ್ದಾರೆ. 
 

Follow Us:
Download App:
  • android
  • ios