ಬೆಂಗಳೂರು[ಡಿ.28]: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನಿರ್ಣಯಗಳ ಬಗ್ಗೆ ಆಗೊಮ್ಮೆ ಈಗೊಮ್ಮೆ ಬಹಿರಂಗ ಅಪಸ್ವರ ಎತ್ತುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಮುಂದಿನ ವರ್ಷದಿಂದ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಮುಂದಾಗಿರುವ ಎಚ್‌ಡಿಕೆ ನಿರ್ಧಾರಕ್ಕೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ, ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸ್ವಕ್ಷೇತ್ರ ಬಾದಾಮಿಯಲ್ಲಿ ಗುರುವಾರ ಬಹಿರಂಗ ಹೇಳಿಕೆ ನೀಡಿರುವುದು ಮಾತ್ರವಲ್ಲದೆ ಸರಣಿ ಟ್ವೀಟ್ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿರ್ಧಾರವನ್ನು ಕಟುವಾಗಿ ವಿಮರ್ಶಿಸಿದ್ದು, ಈ ನಿರ್ಧಾರವನ್ನು ಕೈ ಬಿಡುವಂತೆ ಕುಮಾರಸ್ವಾಮಿ ಜತೆಗೆ ಮಾತನಾಡುವುದಾಗಿ ಹೇಳಿದ್ದಾರೆ. 

ತಮ್ಮ ಟ್ವೀಟ್‌ನಲ್ಲಿ ಅವರು, ‘ಕನ್ನಡ ಭಾಷೆ ಕಲಿಕೆ ಮತ್ತು ಕನ್ನಡ ಮಾಧ್ಯಮದ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ಇಂಗ್ಲಿಷ್‌ನಲ್ಲಿ ಕಲಿತವರೆಲ್ಲಾ ಬುದ್ಧಿವಂತರಾ? ನಾನು ಹೈಸ್ಕೂಲ್‌ವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತವನು. ನಾನೇನು ಪೆದ್ದನಾ? 1000 ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ಪ್ರಸ್ತಾವದ ಬಗ್ಗೆ ಕುಮಾರಸ್ವಾಮಿ ಜತೆ ಮಾತನಾಡುವೆ’ ಎಂದು ಹೇಳಿದ್ದಾರೆ.

ಮಾತೃ ಭಾಷೆ ಪ್ರೀತಿಸದವನು ಮನುಷ್ಯನೇ ಅಲ್ಲ: ಇನ್ನು ಬಾದಾಮಿಯಲ್ಲಿ ಗುರುವಾರ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಕುಮಾರಸ್ವಾಮಿ ಅವರ ನಿರ್ಧಾರವನ್ನು ಕಟು ವಿಮರ್ಶೆಗೆ ಒಳಪಡಿಸಿದ ಸಿದ್ದರಾಮಯ್ಯ ಅವರು, ‘ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಾತ್ರ ಡಾಕ್ಟರ್ ಅಥವಾ ಎಂಜಿನಿಯರ್ ಆಗ್ತೀವಿ ಅನ್ನೋದು ಭ್ರಮೆ. ಇಂಗ್ಲಿಷ್ ಒಂದು ಭಾಷೆಯಾಗಿ ಅಧ್ಯಯನ ಮಾಡಿದರೆ ತೊಂದರೆ ಇಲ್ಲ. ಆದರೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು. ನಮ್ಮ ಭಾಷೆ, ನೆಲ, ಜಲ ಪ್ರೀತಿಸುವ ಗುಣ ನಮ್ಮಲ್ಲಿರಬೇಕು. ಇವನ್ನು ಪ್ರೀತಿಸದವನು ಮನುಷ್ಯನೇ ಅಲ್ಲ’ ಎಂದು ಹೇಳಿದರು. 

‘ಅಧ್ಯಯನ ಬಹಳ ಮುಖ್ಯ. ನಾನು ಲಾಯರ್ ಆಗಿದ್ದಾಗ ತುಂಬಾ ಓದುತ್ತಿದ್ದೆ. ರಾಜಕಾರಣಿ ಆದ ಮೇಲೆ ಓದುವುದನ್ನು ಬಿಟ್ಟೆ. ಈಗ ಹಿಂದೆ ಓದಿದ್ದನ್ನೇ ತಿರಗಾ ಮುರಗಾ ಮಾತನಾಡುತ್ತಿದ್ದೇನೆ. ನಾನು ಹೈಸ್ಕೂಲ್‌ನಲ್ಲಿ ಓದುವಾಗ ಟೈರ್‌ನ ಚಪ್ಪಲಿ ಹೊಲಿಸಿಕೊಂಡು ಹಾಕಿಕೊಂಡಿದ್ದೆ. ಅದನ್ನು ನೆನಪಿಸಿಕೊಂಡು ಶಾಲಾ ಮಕ್ಕಳಿಗೆ ಶೂ ಕೊಡಲು ನಿರ್ಧರಿಸಿದೆ. ಕೆಲವರ ಮನೆಯಲ್ಲಿ ಮಾತ್ರ ಭತ್ತ ಬೆಳೆದು ಅನ್ನ ಮಾಡುತ್ತಿದ್ದರು. ಅದಕ್ಕಾಗಿ ಅನ್ನ ಭಾಗ್ಯ ಜಾರಿಗೊಳಿಸಿದೆ. ಪಿಯುಸಿಯಲ್ಲಿ  ರೂಮ್ ಮಾಡಿ ಓದಿದೆ. ಅದಕ್ಕಾಗಿ ವಿದ್ಯಾಸಿರಿ ಕಾರ್ಯಕ್ರಮ ಜಾರಿಗೆ ತಂದೆ. ನನ್ನ ಬದುಕಿನ ಅನುಭವಗಳನ್ನೇ ಕಾರ್ಯಕ್ರಮಗಳನ್ನಾಗಿ ರೂಪಿಸಿದೆ. ಹೀಗಾಗಿ ಅನುಭವವೂ ದೊಡ್ಡ ಪಾಠವಾಗಬೇಕು’ ಎಂದು ಸಲಹೆ ನೀಡಿದರು.

ಸಾಹಿತಿಗಳಿಂದ ವಿರೋಧವಾಗಿತ್ತು: ಬಜೆಟ್‌ನಲ್ಲಿ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಘೋಷಿಸಿದ್ದ ಕುಮಾರಸ್ವಾಮಿ ನಿರ್ಧಾರದ ವಿರುದ್ಧ ಕನ್ನಡ ಸಾರಸ್ವತ ಲೋಕದ ಹಿರಿಯರು ಹಾಗೂ ಕನ್ನಡ ಪರ ಹೋರಾಟಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಗೋಕಾಕ್ ಮಾದರಿ ಚಳುವಳಿ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ಸಭೆ ನಡೆಸಿದ ನಾಡಿನ ಅಗ್ರಗಣ್ಯ ಸಾಹಿತಿಗಳಾದ ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಎಸ್.ಎಲ್. ಭೈರಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ, ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ, ಡಾ. ಸಿದ್ದಲಿಂಗಯ್ಯ ಅವರು ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದರು. ಇಂಗ್ಲಿಷ್ ಮಾಧ್ಯಮವಾಗಿ ಬೇಡ. ಭಾಷೆಯಾಗಿ ಕಲಿಸಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮುಖ್ಯ ಮಂತ್ರಿಗಳಿಗೂ ಮನವಿ ಸಲ್ಲಿಸಿದ್ದರು. ಕನ್ನಡ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಸಮರ್ಥವಾಗಿ ಕಲಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲಿ ಎಂದು ಸಲಹೆ ನೀಡಿದ್ದರು. 

ಹೀಗಿದ್ದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಬೆಳಗಾವಿ ಅಧಿವೇಶನದಲ್ಲೂ ಎಚ್.ಡಿ. ಕುಮಾರಸ್ವಾಮಿ ಪುನರುಚ್ಚರಿಸಿ ದ್ದರು. ಇದೀಗ ಸಮ್ಮಿಶ್ರ ಸರ್ಕಾರದ ಭಾಗಿದಾರ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ವಿರೋಧ ವ್ಯಕ್ತಪಡಿಸುವ ಮೂಲಕ ಸಿಎಂ ಅವರ ಇಂಗ್ಲೀಷ್ ಮಾಧ್ಯಮ ನಿಲುವಿಗೆ ಭಾರಿ ಪ್ರತಿರೋಧ ಹುಟ್ಟಿಕೊಂಡಂತಾಗಿದೆ.