Asianet Suvarna News Asianet Suvarna News

RIP Chennaveera Kanavi: ವಿಶ್ವ ಭಾರತಿಗೆ ಕನ್ನಡದಾರತಿ ಬೆಳಗಿದ ಕವಿ ಅಸ್ತಂಗತ

* ಚಂಬೆಳಕಿನ ಕವಿ ಚನ್ನವೀರ ಕಣವಿ ಇನ್ನಿಲ್ಲ

* ಉಸಿರಾಟದ ಸಮಸ್ಯೆಯಿಂದ ಕಳೆದ ಜ.14ರಂದು ಎಸ್ ಡಿ ಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಣವಿ

* ಒಂದು ತಿಂಗಳು ಹೆಚ್ಚು ಚಿಕಿತ್ಸೆ ಪಡೆದ ಕಣವಿ ಬುಧವಾರ ಕೊನೆಯುಸಿರು

Kannada renowned poet Chennaveera Kanavi dies at 94 pod
Author
Bangalore, First Published Feb 16, 2022, 10:10 AM IST

ಬೆಂಗಳೂರು(ಫೆ.16): ಹಿರಿಯ ಕವಿ ನಾಡೋಜ ಡಾ. ಚೆನ್ನವೀರ ಕಣವಿ (Chennaveera Kanavi) ನಿಧನರಾಗಿದ್ದಾರೆ. ಕಳೆದ ಜನವರಿ 15 ರಿಂದ  ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ (SDM Hospital) ದಾಖಲಾಗಿ ಡಾ.ಕಣವಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆರಂಭದಲ್ಲಿ ಕೋವಿಡ್ (Covid19) ಸೋಂಕು ತಗುಲಿದ್ದರಿಂದ ಚಿಕಿತ್ಸೆ ನೀಡಿ, ಗುಣಮುಖಗೊಳಿಸಲಾಗಿತ್ತು. ನಂತರ ಅವರು ವಯೊಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಜಿಲ್ಲಾಡಳಿತದಿಂದ ಅಗತ್ಯ ಚಿಕಿತ್ಸೆಗೆ  ಕ್ರಮವಹಿಸಲಾಗಿತ್ತು. ಮಾನ್ಯ ಮುಖ್ಯಂತ್ರಿಗಳು ಸ್ವತಃ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು.  ಚಿಕಿತ್ಸೆ ಫಲಿಸದೆ ಡಾ.ಕಣವಿ ಅವರು ಇಂದು (ಫೆ.16, 2022) ಬೆಳಗ್ಗೆ ನಿಧನರಾದರು.

ಚನ್ನವೀರ ಕಣವಿ ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್‌ಎಂದು ಪ್ರಸಿದ್ಧಿರಾದ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದರು. ಚನ್ನವೀರ ಕಣವಿಯವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928 ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ತಂದೆ ಸಕ್ಕರೆಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಧಾರವಾಡದಲ್ಲಿಯೆ ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣ ಪೂರೈಸಿ ಕಣವಿಯವರು 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ (Karnataka University) ಎಂ.ಎ. ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿದ್ದರು.

ಕಣವಿ ಅವರ ಪಾರ್ಥಿವ ಶರೀರ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಿಡಲಾಗುತ್ತಿದ್ದು, ಬಳಿಕ ಅಂತ್ಯ ಸಂಸ್ಕಾರ ಇಂದು ಸಂಜೆ 5 ಗಂಟೆಗೆ ಧಾರವಾಡದ ಸೃಷ್ಟಿ ಫಾರ್ಮ ಹೌಸನಲ್ಲಿ ಮಾಡಲು ಚಿಂತಿಸಲಾಗಿದೆ.

ಹದಗೆಟ್ಟಿತ್ತು ಕಣವಿ ಆರೋಗ್ಯ

ನಾಡೋಜ ಚನ್ನವೀರ ಕಣವಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ
ಬೆಂಗಳೂರು:  
ನಾಡೋಜ ಚನ್ನವೀರ ಕಣವಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ನಾಡು ಕಂಡ ಅತ್ಯಂತ ಸೃಜನಶೀಲ ಸಾಹಿತಿ, ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಸ್ಥಾನವನ್ನು ಪಡೆದಿದ್ದರು.  ಕಳೆದ ನಾಲ್ಕು ದಶಕಗಳಿಂದ ಅವರು ಮತ್ತು ಅವರ ಕುಟುಂಬ ನಮಗೆ ಬಹಳಷ್ಟು ಆತ್ಮೀಯರಾಗಿದ್ದರು. ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಅವರು ತಮ್ಮ ಮೃದು ಹಾಗೂ  ಮಾನವೀಯತೆಯತೆಯ ಮಾತುಗಳಿಂದ ಮನಸ್ಸು ಗೆಲ್ಲುವ ಅಪರೂಪದ ವ್ಯಕ್ತಿತ್ವ ಹೊಂದಿದ್ದರು.  ಅವರು ಕೋಪ ಮಾಡಿಕೊಂಡಿದ್ದನ್ನು ನೋಡಿಯೇ ಇಲ್ಲ ಎಂದ ಮುಖ್ಯ ಮಂತ್ರಿಗಳು, ಎಲ್ಲಾ ಸಮಸ್ಯೆಗಳಿಗೆ ಸಕಾರಾತ್ಮಕ ಪರಿಹಾರ ಸೂಚಿಸುವ ಸಾಹಿತ್ಯ ರಚನೆ ಮಾಡಿದ್ದಾರೆ. ಸಾಹಿತ್ಯದ ಮುಖಾಂತರ ತಮ್ಮ ಕಲ್ಪನೆ ಮತ್ತು ವಾಸ್ತವಾಂಶವನ್ನು ಕೂಡ ಪರಿಣಾಮಕಾರಿಯಾಗಿ ಬಿಂಬಿಸಿದವರು. ನಾಡೋಜ  ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ  ಭಾಜನರಾಗಿದ್ದರು.  ಪ್ರಶಸ್ತಿಗೆ ಗೌರವ ತಂದುಕೊಡುವ ರೀತಿಯಲ್ಲಿ ಅವರ ವ್ಯಕ್ತಿತ್ವವಿತ್ತು. ಸದಾ ಕಾಲ ತಮ್ಮ ಸಂಯಮ ಹಾಗೂ  ಗಾಂಭೀರ್ಯತೆಯನ್ನು ಮೆರೆದವರು.

ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಬಹಳ ದೊಡ್ಡ ಹಾನಿಯಾಗಿದೆ. ಒಬ್ಬ ಧೀಮಂತ, ಮಾರ್ಗದರ್ಶಕರು ಇಲ್ಲದಂತಾಗಿದೆ. ಸಾತ್ವಿಕ ಚಿಂತಕರು ಇಲ್ಲದ ಈ ಕಾಲದಲ್ಲಿ ಚನ್ನವೀರ ಕಣವಿ ಅವರ ಇರುವಿಕೆ ಪ್ರಸ್ತುತವಾಗಿತ್ತು. ಈ ಸಂದರ್ಭದಲ್ಲಿ ಅವರನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ.ಚಂಪಾ, ಪ್ರೊ.ಸಿದ್ದಲಿಂಗಯ್ಯ ಅವರನ್ನು ಕಳೆದುಕೊಂಡ ಬೆನ್ನಲ್ಲೇ  ಒಬ್ಬೊಬ್ಬರಾಗಿ ಸಾಹಿತ್ಯ ಲೋಕದ ದಿಗ್ಗಜರನ್ನು ಕಳೆದುಕೊಳ್ಳುತ್ತಿದ್ದೇವೆ.  ಕಳೆದುಕೊಂಡ ಮಹನೀಯರ ಸ್ಮರಣೆಯಿಂದ ಪ್ರೇರಣೆ ಪಡೆಯುತ್ತಾ  ಹೊಸ ಸಾಹಿತಿಗಳು, ಚಿಂತಕರು ಬರಬೇಕು. ಅವರೂ ಸಹ ಈ ದಿಗ್ಗಜರು ಏರಿದ್ದ ಮೇರು ಸ್ಥಾನಕ್ಕೆ ತಲುಪಬೇಕು. ಆಗ ಮಾತ್ರ ಕನ್ನಡದ ಶ್ರೀಮಂತ ಸಾಹಿತ್ಯ ನಿರಂತರವಾಗಿ ಮುಂದುವರೆಯುತ್ತದೆ. 8 ಜ್ಞಾನ ಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ನಮ್ಮ ಕರ್ನಾಟಕದ್ದು. ಇನ್ನಷ್ಟು ಜ್ಞಾನಪೀಠಗಳು ಬರುವ ರೀತಿಯಲ್ಲಿ ಸಾಹಿತ್ಯ ಲೋಕ  ತನ್ನ ಕೊಡುಗೆಯನ್ನು ಸಾಹಿತ್ಯ ಲೋಕಕ್ಕೆ ನೀಡಬೇಕೆಂದರು. 

ಭೈರಪ್ಪ ಸೇರಿ ಐವರು ಗಣ್ಯರಿಗೆ ಡಾಕ್ಟರೇಟ್ ಪದವಿ

ಸರ್ಕಾರ ಸಾಹಿತ್ಯ ಕ್ಷೇತ್ರಕ್ಕೆ ಅಗತ್ಯವಿರುವ ಬೆಂಬಲ ನೀಡಲು ಸಿದ್ಧವಿದೆ. ಈ ಮುಖಾಂತರವೇ ಕಣವಿಯವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

Follow Us:
Download App:
  • android
  • ios