ಬೆಂಗಳೂರು (ಆ.26):  ಮೈಸೂರು ವಿಶ್ವವಿದ್ಯಾಲಯ, ತುಮಕೂರು ಹಾಗೂ ಬೆಂ.ಉತ್ತರ ವಿಶ್ವವಿದ್ಯಾಲಯ ಸೇರಿ ಸೇರಿ ಹನ್ನೆರಡು ವಿವಿಗಳು ತಲಾ ಹತ್ತು ಸರ್ಕಾರಿ ಶಾಲೆಗಳನ್ನು ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹಿತವಾಗಿ ರಾಜ್ಯದ 190 ಶಾಸಕರು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಒಪ್ಪಿದ್ದಾರೆ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್‌.ದೊರೆಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ವಿಧಾನಸಭಾ ಕ್ಷೇತ್ರದ 10 ಸರ್ಕಾರಿ ಶಾಲೆ, ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ 8 ಶಾಲೆ, ಗೋವಿಂದ ಕಾರಜೋಳ ಹಾಗೂ ಲಕ್ಷಣ ಸವದಿ ಅವರು ತಲಾ 5 ಶಾಲೆ, ಚಿತ್ರನಟ ಸುದೀಪ್‌ 8 ಶಾಲೆಯನ್ನು ದತ್ತು ಪಡೆದಿದ್ದಾರೆ. ಒಟ್ಟಾರೆ 190 ಶಾಸಕರು ಈವರೆಗೆ 603 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಒಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

ತುಮಕೂರು ವಿವಿ, ಬೆಂಗಳೂರು ಉತ್ತರ ವಿವಿ, ಮೈಸೂರು ವಿವಿ, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಪಿಇಎಸ್‌, ರೇವಾ, ಪ್ರೆಸಿಡೆನ್ಸಿ, ಇಂಡಿಯನ್‌ ಅಕಾಡೆಮಿ ಕಾಲೇಜು, ಸಿಎಂಆರ್‌, ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯ, ಕೆಎಲ್‌ಇ ಖಾಸಗಿ ವಿಶ್ವವಿದ್ಯಾಲಯಗಳು ತಲಾ 10 ಹಾಗೂ ನಿಟ್ಟೆವಿಶ್ವವಿದ್ಯಾಲಯ 8, ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ 4 ಹಾಗೂ ಇಂಡಿಯನ್‌ ಅಕಾಡೆಮಿಕ್‌ ಕಾಲೇಜು 11 ಶಾಲೆಯನ್ನು ದತ್ತು ಪಡೆಯಲು ಒಪ್ಪಿವೆ ಎಂದು ಎಂದು ಹೇಳಿದರು.

ಮುಂದಿನ ಎರಡು ವರ್ಷದಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯವನ್ನು ದಾನಿಗಳ ಮೂಲಕ ಒದಗಿಸುವ ಕಾರ್ಯ ಮಾಡಲಿದ್ದೇವೆ. ಶಾಸಕರು ಅಥವಾ ದಾನಿಗಳು ದತ್ತುಪಡೆದ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಹುಡುಗ, ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯ, ಹೆಚ್ಚುವರಿ ಬೋಧನಾ ಕೊಠಡಿ, ಕನಿಷ್ಠ 10 ಕಂಪ್ಯೂಟರ್‌ ಸಹಿತವಾದ ಕಂಪ್ಯೂಟರ್‌ ಲ್ಯಾಬ್‌, ಕ್ರೀಡಾಸೌಲಭ್ಯ, ಗ್ರಂಥಾಲಯ ಇತ್ಯಾದಿಗಳನ್ನು ಒದಗಿಸಬೇಕು ಎಂದು ತಿಳಿಸಿದರು.

ಅನ್‌ಲಾಕ್‌ -4: ಸೆ. 01 ರಿಂದ ಶಾಲಾ- ಕಾಲೇಜು ಆರಂಭಕ್ಕೆ ಅನುಮತಿ?...

ಮುಂದಿನ ದಿನಗಳಲ್ಲಿ ಐಟಿ ಸಂಸ್ಥೆಗಳು ತಮ್ಮ ಸಿಎಸ್‌ಆರ್‌ ನಿಧಿಯಲ್ಲಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದೇವೆ. ಹಾಗೆಯೇ ಧರ್ಮಸ್ಥಳದ ಧರ್ಮಾಧಿಕಾರಿಗಳ ಮೂಲಕ, ಇಸ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಸೇರಿದಂತೆ ಸಮಾಜದ ಪ್ರಮುಖರ ಮೂಲಕ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದೇವೆ ಎಂದರು.

ಕನ್ನಡ ಪ್ರಭ, ಸುವರ್ಣ ನ್ಯೂಸ್‌ನಿಂದ ಸರ್ಕಾರಿ ಶಾಲೆ ದತ್ತು; ಕಿಚ್ಚ ಸುದೀಪ್ ಸಾಥ್!..

ದೆಹಲಿ ಶಾಲೆಗಳ ಅಧ್ಯಯನ: ದೆಹಲಿಯ ಶಿಕ್ಷಣ ವ್ಯವಸ್ಥೆಯನ್ನು ಅಧ್ಯಯನ ಮಾಡುವುದಕ್ಕಾಗಿ ಸದ್ಯದಲ್ಲಿಯೇ ಪ್ರವಾಸ ಕೈಗೊಳ್ಳಲಾಗುತ್ತದೆ. ಅಲ್ಲಿನ ಒಳ್ಳೆಯ ಅಂಶಗಳನ್ನು ಯಾವ ರೀತಿ ರಾಜ್ಯದಲ್ಲಿ ಅನುಷ್ಠಾನ ಮಾಡಬಹುದು ಎಂಬುದನ್ನು ಪರಿಶೀಲಿಸಲಿದ್ದೇವೆ. ಹಾಗೆಯೇ ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡಿರುವ ಒಳ್ಳೆಯ ಕ್ರಮಗಳ ಬಗ್ಗೆಯೂ ಅಧ್ಯಯನ ನಡೆಸಲಿದ್ದೇವೆ ಎಂದು ದೊರೆಸ್ವಾಮಿ ಹೇಳಿದರು.

ಕನ್ನಡಪ್ರಭ, ಸುವರ್ಣನ್ಯೂಸ್‌ನಿಂದ 10 ಶಾಲೆ ದತ್ತು

ಕನ್ನಡಪ್ರಭ ಮತ್ತು ಸುವರ್ಣನ್ಯೂಸ್‌ ಸುದ್ದಿವಾಹಿನಿ 10 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಒಪ್ಪಿಗೆ ನೀಡಿವೆ ಎಂದು ದೊರೆಸ್ವಾಮಿ ತಿಳಿಸಿದ್ದಾರೆ. ಈ ಸಂಬಂಧ ಯಾವ ಜಿಲ್ಲೆಯ ಶಾಲೆಗಳನ್ನು ದತ್ತು ಪಡೆಯಬೇಕೆಂಬುದನ್ನು ಇಲ್ಲಿಯವರೆಗೂ ನಿರ್ಧರಿಸಿಲ್ಲ. ಈಗಾಗಲೇ ದತ್ತು ನೀಡುವುದು ಅವಶ್ಯಕವಾಗಿರುವ ಸರ್ಕಾರಿ ಶಾಲೆಗಳ ಪಟ್ಟಿಯನ್ನು ಸಿದ್ಧಗೊಳಿಸುವಂತೆ ಜಿಲ್ಲಾ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಿಕ್ಷಣ ಇಲಾಖೆಯು ಸೂಚಿಸಿದೆ. ಶಿಕ್ಷಣ ಇಲಾಖೆಯ ಪಟ್ಟಿಸಿದ್ಧಗೊಂಡ ಬಳಿಕ ದತ್ತು ಅವಶ್ಯವಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂದು ಹೇಳಿದರು.