ರಾಜ್ಯಪಾಲರಿಗೆ ಕನ್ನಡ, ಕರ್ನಾಟಕ ಇಷ್ಟ ಆಗದಿದ್ರೆ ರಾಜ್ಯದಿಂದ ಹೊರಹೋಗಲು ಸ್ವತಂತ್ರರು: ಕರವೇ ನಾರಾಯಣಗೌಡ
ನಾಮಫಲಕದಲ್ಲಿ ಶೇಕಡ 60ರಷ್ಟು ಕನ್ನಡ ಕಡ್ಡಾಯ ಸುಗ್ರೀವಾಜ್ಞೆಗೆ ಸಹಿ ಹಾಕದ ರಾಜ್ಯಪಾಲರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ರಾಜ್ಯಪಾಲರಿಗೆ ಕನ್ನಡ, ಕರ್ನಾಟಕ ಇಷ್ಟ ಆಗದಿದ್ದರೆ ರಾಜ್ಯದಿಂದ ಹೊರ ಹೋಗಲು ಅವರು ಸ್ವತಂತ್ರರು ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು )ಕಫೆ.1): ನಾಮಫಲಕದಲ್ಲಿ ಕನ್ನಡ ಅಳವಡಿಸುವ ಬಗ್ಗೆ ಕರವೇ ಹೋರಾಟಕ್ಕೆ ನೂರಕ್ಕೆ ನೂರರಷ್ಟು ಬೆಂಬಲವಿದೆ. ಪೊಲೀಸರು ನಮ್ಮ ಹೋರಾಟ ಹತ್ತಿಕ್ಕಲು ಆಗಲ್ಲ, ನಾಡು ನುಡಿಯ ವಿಚಾರದಲ್ಲಿ ಆಟವಾಡಬಾರದು. ಫೆ.28ರೊಳಗೆ ಅಂಗಡಿಗಳು ಕನ್ನಡ ನಾಮಫಲಕ ಅಳವಡಿಸದಿದ್ದರೆ ಮತ್ತೆ ಕರವೇ ಮತ್ತೆ ಹೋರಾಟಕ್ಕೆ ಇಳಿಯುತ್ತದೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ನಾಮಫಲಕದಲ್ಲಿ ಶೇಕಡ 60ರಷ್ಟು ಕನ್ನಡ ಕಡ್ಡಾಯ ಸುಗ್ರೀವಾಜ್ಞೆಗೆ ಸಹಿ ಹಾಕದ ರಾಜ್ಯಪಾಲರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ರಾಜ್ಯಪಾಲರಿಗೆ ಕನ್ನಡ, ಕರ್ನಾಟಕ ಇಷ್ಟ ಆಗದಿದ್ದರೆ ರಾಜ್ಯದಿಂದ ಹೊರ ಹೋಗಲು ಅವರು ಸ್ವತಂತ್ರರು. ಕಾನೂನು ಬೆದರಿಕೆ ಮೂಲಕ ನಮ್ಮ ಹೋರಾಟ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ನಾಮಫಲಕದಲ್ಲಿ ಕನ್ನಡ ಅಳವಡಿಸುವ ಕುರಿತು ಕರವೇ ಹೋರಾಟಕ್ಕೆ ನೂರಕ್ಕೆ ನೂರರಷ್ಟು ಬೆಂಬಲ ಸಿಕ್ಕಿದೆ. ಸರ್ಕಾರ, ಪೊಲೀಸರು ನಮ್ಮ ಹೋರಾಟದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಗಡುವು ನೀಡಿದಂತೆ ಫೆ.28ರೊಳಗೆ ರಾಜಧಾನಿ ಬೆಂಗಳೂರಲ್ಲಿ ನಾಮಫಲಕಗಳು ಕನ್ನಡಮಯ ಆಗದಿದ್ದರೆ ಪುನಃ ಬೀದಿಗಿಳಿದು ಹೋರಾಟ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.
ಇನ್ನು, ನಾಮಫಲಕದಲ್ಲಿ ಶೇ.60 ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕದಿರುವುದರ ಹಿಂದೆ ಯಾವ ಶಕ್ತಿಗಳು ಕೆಲಸ ಮಾಡುತ್ತಿವೆಯೋ ಗೊತ್ತಿಲ್ಲ. ಅವರಿಗೆ ಯಾವುದಾದರೂ ಒತ್ತಡ ಇದೆಯೆ? ಮಾರ್ವಾಡಿ, ಸಿಂಧಿ, ಹಿಂದಿಗಳು ಇದರ ಹಿಂದಿದ್ದಾರಾ ಎಂಬ ಅನುಮಾನವಿದೆ. ರಾಜ್ಯಪಾಲರಿಗೆ ಕನ್ನಡ, ಕರ್ನಾಟಕ ಇಷ್ಟವಿಲ್ಲ ಅಂದ್ರೆ ವಾಪಸ್ ಕೇಂದ್ರಕ್ಕೆ ಹೋಗಬಹುದು. ನಾಡು ನುಡಿಯ ವಿಚಾರದಲ್ಲಿ ಯಾರೂ ಆಟವಾಡಬಾರದು. ಕನ್ನಡ ನೆಲದಲ್ಲಿ ಇರಬೇಕು ಎಂದರೆ ಸುಗ್ರೀವಾಜ್ಞೆ ಪ್ರತಿಗೆ ಸಹಿ ಮಾಡಬೇಕಿತ್ತು ಎಂದು ಹೇಳಿದರು.
ರಾಜ್ಯಪಾಲರು ಸಹಿ ಹಾಕದೆ ಇರಬಹುದು. ಆದರೆ, ಅಧಿವೇಶನದಲ್ಲಿ ಶಾಸಕರು ಪಕ್ಷಬೇಧವನ್ನು ಮರೆತು ಒಪ್ಪಿಗೆ ನೀಡಬೇಕು. ರಾಜ್ಯಪಾಲರು ಸಹಿ ಮಾಡದಿರುವುದು ಕರ್ನಾಟಕಕ್ಕೆ, ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಪರಿಗಣಿಸುತ್ತೇವೆ. ಅವರು ಕನ್ನಡದ, ಕನ್ನಡಿಗರ ಭಾವನೆಯ ಪರವಾಗಿರಬೇಕು. ಇಲ್ಲದಿದ್ದರೆ ಅವರು ನಮ್ಮ ಭಾವನೆಗೆ ಸ್ಪಂದಿಸಲಿಲ್ಲ ಎಂಬ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದರು.
ಫೆ.28 ನಾಮಫಲಕ ಅಳವಡಿಕೆಗೆ ಕೊನೆಯ ದಿನ. ಕಾನೂನು ಬೆದರಿಕೆಯ ಮೂಲಕ ನಮ್ಮ ಹೋರಾಟದ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಹಿಂದಿನ ಹೋರಾಟದಲ್ಲಿ ನಾನು ಜೈಲಿಗೆ ಹೋಗಲು ಹಿಂದಿ ರಾಜ್ಯದಿಂದ ಬಂದವರ, ಅಧಿಕಾರಿಗಳ ಕೈವಾಡವಿತ್ತು ಎಂಬುದು ನಮ್ಮ ಗಮನಕ್ಕೆ ಬಂದಿದೆ. ನಮಗೆ ಜೈಲು ಹೊಸದಲ್ಲ. ಹೋರಾಟಗಾರರನ್ನು ಜೈಲಿಗೆ ಕಳಿಸುವ ಇಂತಹ ಧೋರಣೆಯನ್ನು ನಾವು ಸವಾಲಾಗಿ ಸ್ವೀಕರಿಸಿದ್ದೇವೆ. ಗಡುವಿನ ಬಳಿಕ ಕರವೇ ಪುನಃ ಹೋರಾಟವನ್ನು ಮುಂದುವರಿಸಲಿದೆ ಎಂದರು.