Asianet Suvarna News Asianet Suvarna News

ಕಾಯಂಗೊಳ್ಳುವ ಪೌರಕಾರ್ಮಿಕರಿಗೆ ‘ಕನ್ನಡ ಕಡ್ಡಾಯ’

11133 ಪೌರ ಕಾರ್ಮಿಕರ ಸೇವೆ ಕಡ್ಡಾಯಕ್ಕೆ ಸರ್ಕಾರ ಸಿದ್ಧತೆ, 3 ಹಂತದಲ್ಲಿ ಕಾಯಂ, ಅರ್ಜಿ ಸಲ್ಲಿಸಲು ವಯಸ್ಸಿನ ದೃಢೀಕರಣ ಅಗತ್ಯ

Kannada Mandatory for Those Who Permanent Civil Labors in Karnataka  grg
Author
First Published Oct 15, 2022, 10:30 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಅ.15):  ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವ ವೇಳೆ ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು ಲಭ್ಯರಿಲ್ಲದ ಪಕ್ಷದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ಅಭ್ಯರ್ಥಿಗಳ ನೇಮಕಕ್ಕೆ ರಾಜ್ಯ ಸರ್ಕಾರವು ಮೀಸಲಾತಿ ನಿಯಮವನ್ನು ಸಡಿಲಗೊಳಿಸಿದೆ.

ಬಿಬಿಎಂಪಿ ಸೇರಿದಂತೆ ರಾಜ್ಯದ 302 ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ನೇರ ವೇತನ ಪಾವತಿಯಡಿ ಕಾರ್ಯನಿರ್ವಹಿಸುತ್ತಿದ್ದ 40 ಸಾವಿರಕ್ಕೂ ಪೌರಕಾರ್ಮಿಕರನ್ನು ಒಟ್ಟು ಮೂರು ಹಂತದಲ್ಲಿ ಕಾಯಂಗೊಳಿಸುವುದಕ್ಕೆ ಸರ್ಕಾರ ನಿರ್ಧರಿಸಿದೆ. ಅದರಂತೆ ಮೊದಲ ಹಂತದಲ್ಲಿ 11,133 ಪೌರಕಾರ್ಮಿಕರನ್ನು ಕಾಯಂಗೊಳಿಸುವುದಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ, ಅಡ್ಡಿಯಾಗಿದ್ದ ನಿಯಮ ಸಡಿಲಗೊಳಿಸಲು ಸರ್ಕಾರವು ಕಾಯೋನ್ಮುಖವಾಗಿದೆ.
ಕಾಯಂಗೊಳಿಸುವ ವೇಳೆ ಸರ್ಕಾರದ ಮೀಸಲಾತಿ ನಿಯಮಕ್ಕೆ ಅನುಗುಣವಾಗಿ ಸಾಮಾನ್ಯವರ್ಗ ಹಾಗೂ ಹಿಂದುಳಿದ ವರ್ಗದ ಪೌರಕಾರ್ಮಿಕರು ಲಭ್ಯವಿಲ್ಲದ ಪಕ್ಷದಲ್ಲಿ ಒಂದು ಬಾರಿ ವಿನಾಯಿತಿಯಡಿ ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಬದಲಾಗಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡದ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯ ಸರ್ಕಾರದಿಂದ ಪೌರಕಾರ್ಮಿಕರ ಹಿತರಕ್ಷಣೆ; ಸಚಿವ ಬಿ.ಸಿ.ನಾಗೇಶ್

ಈ ಹಿಂದೆ ಪೌರ ಕಾರ್ಮಿಕರ ನೇಮಕಾತಿ ಸಂದರ್ಭದಲ್ಲಿ ಸಾಮಾನ್ಯ ಹಾಗೂ ಹಿಂದುಳಿದ ವರ್ಗಕ್ಕಾಗಿ ಮೀಸಲು ಹುದ್ದೆಗಳಿಗೆ ಸಂಬಂಧಪಟ್ಟದ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಸಕ್ತಿ ತೋರದಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಸಡಿಲಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಹತ್ತಾರು ವರ್ಷದಿಂದ ಗುತ್ತಿಗೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿದವರ ಅನುಕೂಲಕ್ಕಾಗಿ ನೇಮಕಾತಿ ವಯೋಮಿತಿಯನ್ನು ಗರಿಷ್ಠ 55 ವರ್ಷಕ್ಕೆ ನಿಗದಿಪಡಿಸಲಾಗಿದೆ. ವಯಸ್ಸು ದೃಢಿಕರಣಕ್ಕೆ ಅರ್ಜಿ ಸಲ್ಲಿಸುವ ವೇಳೆ ಶೈಕ್ಷಣಿಕ ದಾಖಲೆಗಳು, ಆಧಾರ್‌ ಕಾರ್ಡ್‌, ಮತದಾರ ಗುರುತಿನ ಚೀಟಿ ಹಾಗೂ ಪಡಿತರ ಚೀಟಿಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕಿದೆ.

ಕನ್ನಡ ಭಾಷೆ ಮಾತನಾಡಬೇಕು:

ಪೌರಕಾರ್ಮಿಕರ ಕಾಯಂಗೆ ಯಾವುದೇ ಶೈಕ್ಷಣಿಕ ಅರ್ಹತೆ ನಿಗದಿಪಡಿಸಿಲ್ಲ. ಆದರೆ, ಕನ್ನಡ ಭಾಷೆ ಮಾತನಾಡುವುದಕ್ಕೆ ತಿಳಿದಿರಬೇಕು. ಜತೆಗೆ ದೈಹಿಕ ದೃಢತೆಯು ಇರಬೇಕು. ಈ ಬಗ್ಗೆ ಸರ್ಕಾರಿ ಆಸ್ಪತ್ರೆಯಿಂದ ವೈದ್ಯಕೀಯ ಪ್ರಮಾಣ ಸಲ್ಲಿಕೆ ಮಾಡಬೇಕೆಂಬ ನಿಯಮ ವಿಧಿಸಲಾಗಿದೆ.

ನೇಮಕಾತಿಗೆ ಸಮಿತಿ ರಚನೆ:

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ಕಾಯಂಗೊಳಿಸುವುದಕ್ಕೆ ಬಿಬಿಎಂಪಿ ಮುಖ್ಯಆಯುಕ್ತರ ಅಧ್ಯಕ್ಷತೆಯಲ್ಲಿ 10 ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಉಳಿದಂತೆ ರಾಜ್ಯ ಇತರೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯ ಪೌರಕಾರ್ಮಿಕರ ನೇಮಕಕ್ಕೆ ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಇನ್ನು ಬಿಬಿಎಂಪಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಯ ಪೌರಕಾರ್ಮಿಕರಿಗೂ ಸಮಾನ ವೇತನವಾಗಿ 17 ಸಾವಿರ ರು.ನಿಂದ 28,950 ರು. ನಿಗದಿಪಡಿಸಲಾಗಿದೆ.

ಆಕ್ಷೇಪಣೆ ಆಹ್ವಾನ:

ಈ ನಿಯಮಗಳ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರ ಈಗಾಗಲೇ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸುವುದಕ್ಕೆ ಏಳು ದಿನ ಕಾಲಾವಕಾಶ ನೀಡಿತ್ತು. ಆಕ್ಷೇಪಣೆ ಸಲ್ಲಿಕೆ ಅವಧಿ ಸಹ ಪೂರ್ಣಗೊಂಡಿದೆ. ಸಲ್ಲಿಕೆಯಾಗಿರುವ ಲಿಖಿತ ರೂಪದ ಆಕ್ಷೇಪಣೆಗಳ ಪರಿಶೀಲನೆ ಕಾರ್ಯ ಆರಂಭಿಸಲಾಗಿದ್ದು, ಶೀಘ್ರದಲ್ಲಿ ಈ ಬಗ್ಗೆ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಲಿದೆ.

2 ವರ್ಷ ಕನಿಷ್ಠ ಸೇವೆ ನಿಗದಿ

ಕನಿಷ್ಠ ಎರಡು ವರ್ಷ ಗುತ್ತಿಗೆ ಆಧಾರದಡಿ ಕಾರ್ಯ ನಿರ್ವಹಿಸಿದ ಪೌರಕಾರ್ಮಿಕರು ಕಾಯಂ ನೇಮಕಾತಿ ವೇಳೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸುವ ವೇಳೆ ಕಡ್ಡಾಯವಾಗಿ ನೇರ ವೇತನ ಪಾವತಿ ಅಡಿ ಸಂಬಳ ಪಡೆದ ದಾಖಲಾತಿ, ಪಿಎಫ್‌, ಇಎಸ್‌ಐ ದಾಖಲಾತಿ, ಏಜೆನ್ಸಿ ಮೂಲಕ ವೇತನ ಪಡೆದ ದಾಖಲಾತಿಯನ್ನು ಸಲ್ಲಿಸಬೇಕೆಂಬ ನಿಯಮ ರೂಪಿಸಲಾಗಿದೆ.

40 ಸಾವಿರ ಪೌರ ಕಾರ್ಮಿಕರನ್ನು ಕಾಯಂ ಮಾಡಲು ಚಿಂತನೆ: ಶಿವಣ್ಣ

ನೇಮಕಾತಿ ವೇಳೆ ಹೆಚ್ಚಿನ ಅವಧಿ ಸೇವೆ ಸಲ್ಲಿಸಿದ ಪೌರಕಾರ್ಮಿಕರನ್ನು ಪರಿಗಣಿಸಬೇಕು. ಸೇವಾವಧಿ ಒಂದೇ ಇದ್ದರೆ ಹೆಚ್ಚಿನ ವಯಸ್ಸು ಪರಿಗಣಿಸಬೇಕು. ಒಂದು ವೇಳೆ ಹುಟ್ಟಿದ ದಿನಾಂಕ ಮತ್ತು ಸೇವಾವಧಿ ಒಂದೇ ಆಗಿದ್ದರೆ ಲಾಟರಿ ಮೂಲಕ ಆಯ್ಕೆ ಮಾಡಲು ಸರ್ಕಾರ ನಿರ್ಧರಿಸಿದೆ.

ಪೌರ ಕಾರ್ಮಿಕರ ನೇಮಕಾತಿ ಸಂಖ್ಯೆ: ಸ್ಥಳೀಯ ಸಂಸ್ಥೆ ಪೌರಕಾರ್ಮಿಕರ ಸಂಖ್ಯೆ

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ​ 5,533
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ 3,673
ರಾಜ್ಯದ ಇತರೆ 10 ಮಹಾನಗರ ಪಾಲಿಕೆ 1,927
ಒಟ್ಟು 11,133

ಗುತ್ತಿಗೆ ಪೌರಕಾರ್ಮಿಕರ ಕಾಯಂಗೊಳಿಸುವುದಕ್ಕೆ ಸಂಬಂಧಿಸಿದಂತೆ ಕೆಲವು ನಿಯಮ ಸಡಿಲಿಕೆ ಮಾಡಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಮೀಸಲಾತಿ ಮತ್ತು ವಯೋಮಿತಿ ನಿಯಮ ಸಡಿಲಗೊಳಿಸಲಾಗಿದೆ. ಶೀಘ್ರದಲ್ಲಿ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಅಂತ ಬಿಬಿಎಂಪಿ ಘನತ್ಯಾಜ್ಯ ವಿಭಾಗ ವಿಶೇಷ ಆಯುಕ್ತ ಡಾ. ಕೆ.ಹರೀಶ್‌ ಕುಮಾರ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios