ಲಿಂಗಾಯತ ಮಠಾಧೀಶರ ಬಗ್ಗೆ ಅವಾಚ್ಯ ಶಬ್ದ ಬಳಸಿದ ಆರೋಪದ ಮೇಲೆ, ಮಹಾರಾಷ್ಟ್ರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಜಿಲ್ಲಾಧಿಕಾರಿಗಳು ನವೆಂಬರ್ 5 ರಿಂದ ಜನವರಿ 3 ರವರೆಗೆ ಈ ಆದೇಶ ಹೊರಡಿಸಿದ್ದಾರೆ.

ಧಾರವಾಡ (ನ.6): ಲಿಂಗಾಯತ ಮಠಾಧೀಶರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆಂದು ಬಸವ ತತ್ವ ಅನುಯಾಯಿಗಳ ಒತ್ತಡದ ಹಿನ್ನೆಲೆಯಲ್ಲಿ ಇದೀಗ ಮಹಾರಾಷ್ಟ್ರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ಧಾರವಾಡ ಜಿಲ್ಲೆಗೂ ನಿರ್ಬಂಧ ಹೇರಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ಹೇರಿ ಶ್ರೀಗಳ ವಿರುದ್ಧ ಲಿಂಗಾಯತ ಮಹಾಸಭಾ ಪ್ರತಿಭಟನೆ

ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ‌ ಗ್ರಾಮದಲ್ಲಿ ನ. 7ರಂದು ನಡೆಯಲಿರುವ ಸಹಜಾನಂದ ಸಪ್ತಾಹಕ್ಕೆ ಕನ್ಹೇರಿ ಮಠದ ಸ್ವಾಮೀಜಿ ಆಗಮಿಸಬೇಕಿತ್ತು. ಆದರೆ, ಲಿಂಗಾಯತ ಮಠಾಧೀಶರು, ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕನ್ಹೇರಿ ಮಠದ ಸ್ವಾಮೀಜಿ ಧಾರವಾಡಕ್ಕೆ ಬರಲು ಬಿಡುವುದಿಲ್ಲ. ಒಂದು ವೇಳೆ ಬಂದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಜಾಗತಿಕ‌ ಲಿಂಗಾಯತ ಮಹಾಸಭಾ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು.

ನ.5 ರಿಂದ ಜ.3ರವರೆಗೆ ಧಾರವಾಡ ಪ್ರವೇಶಿಸದಂತೆ ನಿರ್ಬಂಧ:

ಈ ಮಧ್ಯೆ ಧಾರವಾಡ ಹಾಗೂ ಕುಂದಗೋಳದಲ್ಲಿ ಕನ್ಹೇರಿ ಮಠದ ಸ್ವಾಮೀಜಿ ಭಕ್ತರು ಶ್ರೀಗಳಿಗೆ ಯಾವುದೇ ಕಾರಣಕ್ಕೂ ನಿರ್ಬಂಧ ಹೇರಬಾರದು ಎಂದು ಪ್ರತಿಭಟನೆಗಳನ್ನು ಸಹ ಮಾಡಿದ್ದರು. ಆದರೆ, ಸಾರ್ವಜನಿಕ ಶಾಂತತೆಗೆ ಧಕ್ಕೆ ಉಂಟಾಗದಂತೆ ಮುಂಜಾಗೃತಾ ಕ್ರಮವಾಗಿ ನ. 5ರಿಂದ ಜನವರಿ 3ರ ವರೆಗೆ ಜಿಲ್ಲೆಗೆ ಪ್ರವೇಶಿಸದಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಬುಧವಾರ ಆದೇಶಿಸಿದ್ದಾರೆ.

ಕನ್ಹೇರಿ ಮಠದ ಸ್ವಾಮೀಜಿಗೆ ಈಗಾಗಲೇ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಯ ಪ್ರವೇಶಕ್ಕೂ ನಿರ್ಬಂಧ ಹೇರಿದ್ದನ್ನು ಸ್ಮರಿಸಬಹುದು.