ಲಿಂಗಾಯತ ಸ್ವಾಮೀಜಿಗಳ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೋರಿದಲ್ಲಿ ನಾನೇ ಖುದ್ದಾಗಿ ಹೋಗಿ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು ವಿಜಯಪುರಕ್ಕೆ ಕರೆತರುತ್ತೇನೆ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ಬೆಂಗಳೂರು (ಅ.19): ‘ಲಿಂಗಾಯತ ಸ್ವಾಮೀಜಿಗಳ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೋರಿದಲ್ಲಿ ನಾನೇ ಖುದ್ದಾಗಿ ಹೋಗಿ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು ವಿಜಯಪುರಕ್ಕೆ ಕರೆತರುತ್ತೇನೆ’ ಎಂದು ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ‘ಏಷ್ಯಾನೆಟ್‌ ಸುವರ್ಣನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ಕನ್ಹೇರಿ ಶ್ರೀಗಳ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಕುರಿತು ಅವರು ಸ್ಪಷ್ಟನೆ ನೀಡಿದರು.

‘ಕನ್ಹೇರಿ ಮಠದ ಸ್ವಾಮೀಜಿಗಳ ವಿಜಯಪುರ ಮತ್ತು ಬಾಗಲಕೋಟೆ ಪ್ರವೇಶಕ್ಕೆ ಸಂಬಂಧಿಸಿದಂತೆ ಅಲ್ಲಿನ ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ. ಅವರು ವಿಜಯಪುರ ಜಿಲ್ಲೆ ಪ್ರವೇಶ ಮಾಡಬೇಕೋ, ಬಿಡಬೇಕೊ ಎನ್ನುವ ವಿಚಾರ ನನಗೆ ಸಂಬಂಧಿಸಿದ್ದಲ್ಲ. ಅದನ್ನು ಪ್ರಶ್ನಿಸಿ ಸ್ವಾಮೀಜಿಯವರು ಕಲಬುರಗಿ ಹೈಕೋರ್ಟ್‌ ಪೀಠದ ಹೋಗಿದ್ದರು. ಅಲ್ಲಿ ಅವರ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಅಷ್ಟೇ ಅಲ್ಲ ಸ್ವಾಮೀಜಿಯಾಗಿ ಈ ರೀತಿಯಾಗಿ ಮಾತನಾಡುವುದು ದುರಾದೃಷ್ಟಕರ. ಒಬ್ಬ ಸಾಮಾನ್ಯ ಮನುಷ್ಯ ಕೂಡ ಇಂತಹ ಮಾತನ್ನು ಆಡುವುದಿಲ್ಲವೆಂದು ಹೈಕೋರ್ಟ್‌ ಹೇಳಿದೆ’ ಎಂದರು.

‘ಕನ್ಹೇರಿಯ ಸ್ವಾಮೀಜಿಗಳು ಲಿಂಗಾಯತ ಮಾತ್ರವಲ್ಲ ಯಾವುದೇ ಸಮುದಾಯದ ಸ್ವಾಮೀಜಿಗಳಿಗೆ ಆ ರೀತಿಯ ಪದಬಳಕೆ ಮಾಡಿದ್ದು ಸರಿಯಲ್ಲ. ಅವರು ಯಾರನ್ನೋ ಒಲಿಸಿಕೊಳ್ಳಲು ಇಂತಹ ಮಾತನ್ನು ಆಡಿರುವುದು ಸರಿಯಲ್ಲ. ಇನ್ನು, ಇದು ಆಡು ಭಾಷೆ ಎನ್ನುವುದಾದರೇ ಆರ್‌ಎಸ್‌ಎಸ್‌ನ ಮೋಹನ್‌ ಭಾಗವತ್‌, ಬಿ.ಎಲ್‌.ಸಂತೋಷ್‌, ವಿಜಯೇಂದ್ರ, ಯಡಿಯೂರಪ್ಪ, ಯತ್ನಾಳ್‌ ಅವರಿಗೆ ಇದೇ ಭಾಷೆಯನ್ನು ಬಳಕೆ ಮಾಡಲಿ ನೋಡೋಣ. ಇಂತಹ ಶಬ್ದ ಬಳಸಿದರೆ ಅವರು ಸುಮ್ಮನೆ ಕುಳಿತುಕೊಳ್ಳುತ್ತಾರಾ? ಬೆಂಕಿ ಹೊತ್ತಿ ಉರಿಯುತ್ತಿತ್ತು’ ಎಂದು ತಿಳಿಸಿದರು.

ತಪ್ಪು ಸರಿಪಡಿಸಿಕೊಳ್ಳಲಿ

‘ಕನ್ಹೇರಿ ಶ್ರೀಗಳು ಪೌರುಷ್ಯ ಹೇಳಿಕೊಳ್ಳಲು ಮಾತನಾಡಿದ್ದರೆ ದಯವಿಟ್ಟು ಕ್ಷಮೆ ಕೇಳಿ ಮುಕ್ತಾಯಗೊಳಿಸಬೇಕು. ಅವರು ಭಾರತೀಯ ಸಂಸ್ಕೃತಿಯ ಅಭಿಯಾನ ಮಾಡಲಿ, ನಾವು ಬಂದು ಬೆಂಬಲ ಕೊಡುತ್ತೇವೆ. ಯಾರೇ ಸ್ವಾಮಿಗಳು ಬೇರೆ ಸ್ವಾಮೀಜಿಗಳಿಗೆ ಅಸಂವಿಧಾನಿಕ ಪದಬಳಸಿ ಮಾತನಾಡುವುದು ತಪ್ಪು. ಕ್ಷಮೆ ಕೇಳಿದರೆ ವಿಜಯಪುರ ಪ್ರವೇಶಕ್ಕೆ ಸ್ವಾಭಾವಿಕಗಾಗಿ ಅನುಮತಿ ಸಿಗುತ್ತದೆ. ನಾನೇ ಹೋಗಿ ಕನ್ಹೇರಿಯ ಸ್ವಾಮೀಜಿಗಳನ್ನು ಕರೆದುಕೊಂಡು ಬರುತ್ತೇನೆ. ಕನ್ಹೇರಿ ಸ್ವಾಮಿಗಳು ಸಿದ್ದೇಶ್ವರ ಸ್ವಾಮೀಜಿಗಳಿಗೆ ಆತ್ಮೀಯರಾಗಿದ್ದವರು. ಸಿದ್ದೇಶ್ವರ ಸ್ವಾಮೀಜಿಗಳು ಎಂದಿಗೂ ಏಕವಚನದಲ್ಲಿ ಯಾರನ್ನೂ ಮಾತನಾಡಿಸಿಲ್ಲ. ತಪ್ಪು ಸರಿಪಡಿಸಿಕೊಳ್ಳಲಿ’ ಎಂದರು.