ಬೆಂಗಳೂರು [ಅ.23] :  ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಎರಡನೇ ಸಮವಸ್ತ್ರ ನೀಡಲು ಹಾಗೂ ನಗರದ ಪ್ರದೇಶದಲ್ಲಿರುವ ಒಂದು ಸಾವಿರ ಅಂಗನವಾಡಿ ಕಟ್ಟಡಗಳ ದುರಸ್ತಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮಂಗಳವಾರ ಸಚಿವ ಸಂಪುಟ ಸಭೆಯ ನಂತರ ಅದರ ತೀರ್ಮಾನಗಳನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಸುದ್ದಿಗಾರರಿಗೆ ನೀಡಿದರು.

ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಂತರ ಹಾಸ್ಟೆಲ್‌ ಹಾಗೂ ಆಶ್ರಮದ ಶಾಲೆ ವಿದ್ಯಾರ್ಥಿಗಳಿಗೆ ‘ನಿರ್ಮಲ್‌ ಹಾಗೂ ಸಿರಿಗಂಧ ಕಿಟ್‌’ ವಿತರಿಸಲು ಹೆಚ್ಚುವರಿಯಾಗಿ 18.6 ಕೋಟಿ ರು. ನೀಡಲು ಅನುಮೋದನೆ ನೀಡಲಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ ಯೋಜನೆಯಡಿ ತಾಯಂದಿರಿಗೆ ಕಬ್ಬಿಣ ಅಂಶ, ಕ್ಯಾಲ್ಸಿಯಂ ಹಾಗೂ ಫೋಲಿಕ್‌ ಆಸಿಡ್‌ ಮಾತ್ರೆಗಳ ಖರೀದಿಗೆ 14.38 ಕೋಟಿ ರು. ನೀಡಲು ಸಂಪುಟ ಒಪ್ಪಿಗೆ ನೀಡಿತು.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ರಟ್ಟಿಹಳ್ಳಿ ಕೆರೆ ತುಂಬುವ 177 ಕೋಟಿ ರು., ವೆಚ್ಚದ ಯೋಜನೆ, ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಐದು ಜನವಸತಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ 74.7 ಕೋಟಿ ರು. ಯೋಜನೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆ ಸೇರಿದಂತೆ 29 ಜನವಸತಿ ಪ್ರದೇಶಗಳಲ್ಲಿ 18.08 ಕೋಟಿ ರು. ವೆಚ್ಚದ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ಬಾಕಿ ಉಳಿದಿರುವ ಮೂರು ಕಾಮಗಾರಿಗಳನ್ನು ಪೂರ್ಣಗೊಳಿಸಲು 110 ಕೋಟಿ ರು. ಚಿತ್ರದುರ್ಗ ಜಿಲ್ಲೆಯ ವಿವಿಧ ಕಟ್ಟಡಕ್ಕೆ 28 ಕೋಟಿ ರು. ಯೋಜನೆಗೆ ಸಂಪುಟ ಒಪ್ಪಿಗೆ ನೀಡಿತು.

ಸಾಲಕ್ಕೆ ಸರ್ಕಾರದ ಗ್ಯಾರಂಟಿ:  ಕೃಷ್ಣಾ ಭಾಗ್ಯ ಜಲ ನಿಗಮ ವಿವಿಧ ಯೋಜನೆಗಳಿಗಾಗಿ ಈಇಬಿಆರ್‌ನಿಂದ ಒಂದು ಸಾವಿರ ಕೋಟಿ ರು. ಸಾಲ ಪಡೆಯಲು, ಕರ್ನಾಟಕ ಸಹಕಾರ ಮಾರುಕಟ್ಟೆಮಂಡಳಿ ಗೊಬ್ಬರ ಖರೀದಿ, ದಾಸ್ತಾನು ಮಾಡಲು 400 ಕೋಟಿ ರು.ಗಳನ್ನು ಬ್ಯಾಂಕುಗಳಿಂದ ಸಾಲ ಪಡೆಯಲು ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ರಾಷ್ಟ್ರೀಯ ಹಿಂದುಳಿದ ವರ್ಗ ಮತ್ತು ಹಣಕಾಸು ಅಭಿವೃದ್ಧಿ ನಿಗಮದಿಂದ 15 ಕೋಟಿ ರು.ಗಳ ಸಾಲ ಪಡೆಯಲು ಸರ್ಕಾರದ ಗ್ಯಾರಂಟಿ ನೀಡಲು ಸಂಪುಟ ಸಮ್ಮತಿ ನೀಡಿತು.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಲಿ ಸಂಗ್ರಹಿಸುವ ಶೇರು ಬಂಡವಾಳದ ಮೊತ್ತವನ್ನು 500 ಕೋಟಿ ರು.ನಿಂದ 550 ಕೋಟಿ ರು.ಗಳಿಗೆ ಹೆಚ್ಚಿಸಲು ಅನುಮೋದನೆ ನೀಡಲಾಯಿತು.

ಪೊಲೀಸ್‌ ಭವನ ಪರಿಷ್ಕೃತ ಅಂದಾಜು: ಬೆಂಗಳೂರಿನ ಕೆಎಸ್‌ಆರ್‌ಪಿ ಒಂದನೇ ಬೆಟಾಲಿಯನ್‌ನಲ್ಲಿ ಇರುವ ಖಾಲಿ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪೊಲೀಸ್‌ ಭವನ (ಇಂಟಿಗ್ರೇಟೆಡ್‌ ಸೆಂಟ್ರಲ್‌ ಕಮಾಂಡ್‌ ಸೆಂಟರ್‌) ಯೋಜನೆಯನ್ನು ಪರಿಷ್ಕರಿಸಿ 80 ಕೋಟಿ ರು.ಗಳ ವೆಚ್ಚದಲ್ಲಿ ಕಟ್ಟಲು ಹಾಗೂ ಬೆಳಗಾವಿ ಕಮಿಷನರ್‌ ಕಚೇರಿಯನ್ನು 17 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಒಪ್ಪಿಗೆ ನೀಡಿತು.

ಹೊನ್ನಾಳಿಯಲ್ಲಿ ಉಪವಿಭಾಗ ಕಚೇರಿ:  ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಹೊಸದಾಗಿ ಉಪವಿಭಾಗ ಕಚೇರಿ ಆರಂಭಿಸಲು ಹಾಗೂ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಗ್ರಾಮ ಪಂಚಾಯಿತಿ ಮತ್ತು ದಕ್ಷಿಣ ಕನ್ನಡದ ಕಡಬ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆ ಏರಿಸಲು ಮತ್ತು ರಾಣೆಬೆನ್ನೂರು ನಗರಸಭೆಗೆ ಹೊಂದಿಕೊಂಡಿರುವ ಕೆಲವು ಪ್ರದೇಶಗಳ ಸೇರ್ಪಡೆಗೆ ಸಂಪುಟ ಅನುಮೋದನೆ ನೀಡಿತು.