ಕಮಲ್ ಹಾಸನ್ ಅವರ ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ಕುರಿತು ಶಿವಣ್ಣ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಚಪ್ಪಾಳೆ ತಟ್ಟಿದ್ದು ನಿಜ, ಆದರೆ ಆ ಕ್ಷಣದಲ್ಲಿ ಏನು ಮಾತಾಡಿದ್ದಾರೆಂದು ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಮೇ.31): 'ನಾನೇನು ಅವರ ಮಾತನ್ನು ಸಮರ್ಥನೆ ಮಾಡಿಕೊಳ್ಳಲ್ಲ. ಕಮಲ್ ಹಾಸನ್ ಭಾಷೆಯ ಬಗ್ಗೆ ಮಾತಾಡ್ತಿದ್ದಾಗ ಚಪ್ಪಾಳೆ ತಟ್ಟಿದ್ದು ನಿಜ, ಆದರೆ ಆ ಕ್ಷಣದಲ್ಲಿ ಅವರು ಏನು ಮಾತಾಡಿದ್ದಾರೆಂದು ನನಗೆ ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ. ಎರಡನೇ ಬಾರಿ ಕ್ಲಿಪ್ ಕೇಳಿದಾಗಲೇ ವಿಷಯ ತಿಳಿಯಿತು ಎಂದು ಶಿವಣ್ಣ ವಿವಾದ ಕುರಿತು ಸ್ಪಷ್ಟಪಡಿಸಿದರು.
ಖಾಸಗಿ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಕನ್ನಡದ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಶಿವಣ್ಣ, ನಾನೊಬ್ಬ ಕಲಾವಿದನಾಗಿ ಭಾಷೆಯ ಬಗ್ಗೆ ಮಾತಾಡಿದಾಗ ಚಪ್ಪಾಳೆ ತಟ್ಟಿದ್ದೆ. ಆದರೆ ಆ ಕ್ಷಣ ಕನ್ನಡದ ಬಗ್ಗೆ ಏನು ಮಾತಾಡಿದರೆಂದು ಗೊತ್ತಾಗಲಿಲ್ಲ ಎಂದರು.
ಅಣ್ಣಾವ್ರ ಮಕ್ಕಳು ನಾವು, ಕನ್ನಡಾಭಿಮಾನ ನಮಗೂ ಗೊತ್ತಿದೆ:
ಕನ್ನಡಾಭಿಮಾನ ಎಂದರೇನು ಎಂಬುದು ನಮಗೆ ಗೊತ್ತಿದೆ. ನಾನೂ ಕನ್ನಡಾಭಿಮಾನಿಯೇ. ರಾಜಕುಮಾರ್ (ಅಣ್ಣಾವ್ರ) ಮತ್ತು ಅವರ ಕುಟುಂಬದ ಕನ್ನಡಾಭಿಮಾನ ನಿಮಗೆ ಎಲ್ಲರಿಗೂ ತಿಳಿದಿದೆ. ಆ ವಿಚಾರದಲ್ಲಿ ಯಾವುದೇ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ. ಕಮಲಾಹಾಸನ್ ಹೇಳಿಕೆಯ ಬಗ್ಗೆ ಅವರನ್ನೇ ಪ್ರಶ್ನಿಸಿ ಎಂದರು.
ಸ್ಪಷ್ಟವಾಗಿ ಕೇಳಿಸದೇ ಚಪ್ಪಾಳೆ ತಟ್ಟಿದೆ:
ಸ್ಟೇಜ್ ನಲ್ಲಿ ನೀವು ಯಾಕೆ ಪ್ರಶ್ನೆ ಮಾಡ್ಲಿಲ ಎಂಬ ಪ್ರಶ್ನಿಸಿದ್ದಾರೆ. ಆದರೆ ನನಗೆ ಸ್ಪಷ್ಟವಾಗಿ ಕೇಳಲಿಲ್ಲ ಅವ್ರು ಮಾತಾಡಿದ್ದು . ಹೀಗಾಗಿ ಚಪ್ಪಾಳ ತಟ್ಟಿದೆ. ನೀವು ಆ ಬಗ್ಗೆ ಅವರನ್ನೇ ಪ್ರಶ್ನೆ ಮಾಡಬೇಕು ಎಂದು ಕೊನೆಗೂ ಕನ್ನಡ ಅವಮಾನದ ಬಗ್ಗೆ ಶಿವಣ್ಣ ಮೌನ ಮುರಿದರು. ಅವರ ಹೇಳಿಕೆಯನ್ನ ಸಮರ್ಥನೆ ಮಾಡಿಕೊಳ್ಳಲ್ಲ ಎಂದರು.
