ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಲು ನಿರಾಕರಿಸಿದ್ದಕ್ಕೆ ಸಚಿವ ಶಿವರಾಜ್ ತಂಗಡಗಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಕ್ಷಮೆ ಕೇಳದಿದ್ದರೆ ಸಿನಿಮಾಗಳನ್ನು ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಮೇ.31): ಕನ್ನಡ ತಮ್ಮ ವಿವಾದಾತ್ಮಕ ಹೇಳಿಕೆಗೆ ಕನ್ನಡಿಗರ ಕ್ಷಮೆ ಕೇಳಲು ಕಮಲ್ ಹಾಸನ್ ನಿರಾಕರಿಸಿದ ಹಿನ್ನೆಲೆ ಈ ಬಗ್ಗೆ ಸಚಿವ ಶಿವರಾಜ್ ತಂಗಡಗಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.'ಕ್ಷಮೆ ಕೇಳಲ್ಲ ಎಂದರೆ ಬಿಡೋರು ಯಾರು?' ಎಂದು ತಿರುಗೇಟು ನೀಡಿದರು.

ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಮಲ್ ಹಾಸನ್ ಒಬ್ಬ ಹಿರಿಯ ನಟ ಆಗಿದ್ದರೂ, ಅವರಿಂದ ಚಿತ್ರ ಮಾಡಿದವರಿಗೆ ಅನ್ಯಾಯವಾಗಬಾರದು ಎಂದರು. ಕನ್ನಡಕ್ಕೆ ಅವಮಾನ ಆದರೆ ಇದನ್ನ ನಾವು ಸುಮ್ಮನೆ ಬಿಡ್ತೇವಾ? ಬಿಡಲ್ಲ! ಫಿಲಂ ಚೇಂಬರ್ ಜೊತೆ ಮಾತನಾಡಿದ್ದೇನೆ. ಪರಭಾಷೆ ನಟರು ಯಾರೇ ಮಾತನಾಡಿದರೂ ಬಿಡಲ್ಲ. ನಮ್ಮ ಭಾಷೆ ವಿಚಾರದಲ್ಲಿ ಯಾರಾದರೂ ಮಾತನಾಡಿದರೆ ಸುಮ್ಮನೆ ಇರಲ್ಲ. ಸಿನಿಮಾಗಳನ್ನ ಬ್ಯಾನ್ ಮಾಡ್ತೇವೆ ಎಂದು ಎಚ್ಚರಿಸಿದರು. ಇದರ ಬಗ್ಗೆ ವಿಶೇಷ ಕಾನೂನು ತರುವ ವಿಚಾರವನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಸಭೆಗಳು ಮುಗಿದ ನಂತರ ಕಾನೂನು ತರಲಾಗುವುದು ಎಂದರು.

ಅವರು ಶಿವರಾಜ್ ಕುಮಾರ್ ಜೊತೆಯೂ ಮಾತನಾಡಿದ್ದು, ವೇದಿಕೆ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಚರ್ಚಿಸಿದ್ದಾರೆ. ಶಿವರಾಜ್ ಕುಮಾರ್ ಕನ್ನಡದ ಹಿರಿಯ ನಟರಾಗಿ ನಮ್ಮ ತನವನ್ನ ಉಳಿಸಿಕೊಳ್ಳಬೇಕು ಎಂದರು. ಇದೇ ವೇಳೆ ಫಿಲಂ ಚೇಂಬರ್ ವಿರುದ್ಧ ಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು ಇವತ್ತೇ ಕೊನೆ ದಿನ ನೋಡೋಣ ಎಂದರು.

ತುಂಗಭದ್ರ ಡ್ಯಾಂ ಕ್ರೆಸ್ಟ್ ಗೇಟ್ ಬದಲಾವಣೆ ಇಲ್ಲ:

ತುಂಗಾಭದ್ರ ಡ್ಯಾಂ ಕ್ರೆಸ್ಟ್ ಗೇಟ್ ಬದಲಾವಣೆ ಬಗ್ಗೆ ಯಾವುದೇ ತಕ್ಷಣದ ಬದಲಾವಣೆ ಇಲ್ಲ. 19 ಗೇಟ್‌ಗಳನ್ನು ಮಾತ್ರ ಬದಲಾಯಿಸಲಾಗುವುದು. ಟೆಂಡರ್ ಪ್ರಕ್ರಿಯೆ ಆಗುತ್ತಿದ್ದು, ಗುಜರಾತ್ ಕಂಪನಿಗೆ ಟೆಂಡರ್ ದೊರೆತಿದೆ. ಒಂದು ಗೇಟ್ ತಯಾರಿಕೆಗೆ ಒಪ್ಪಿಕೊಂಡಿದ್ದಾರೆ. ನೀರು ಬಿಡುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಯಾರೂ ಟೆಂಡರ್‌ಗೆ ಬರದಿದ್ದರೂ, ಕೇಂದ್ರದ ಬೋರ್ಡ್ ಆಸಕ್ತಿ ತೋರಬೇಕು. ಏನು ಷೇರಿದೆ ಕೊಡ್ತೇವೆ ಅಂತ ಸಿಎಂ ಹೇಳಿದ್ದಾರೆ. ನಮ್ಮ ಸಚಿವರು ಹೇಳಿದ್ದಾರೆ, ನಾನು ಹೇಳಿದ್ದೇನೆ. ನಾನು ತುಂಗಭದ್ರ ಬೋರ್ಡ್ ಅಧ್ಯಕ್ಷನಿದ್ದೇನೆ. ನಮ್ಮದು ಏನು ಷೇರು ಇದೆ ಕೊಡ್ತೇವೆ. ಬದಲಾವಣೆ ಮಾಡಿ ಎಂದಿದ್ದೇವೆ ಎಂದರು.