ಖಸ್ಗಿ :  ಭೀಕರ ಬರಗಾಲ ಕಲಬುರಗಿ ಅನ್ನದಾತರನ್ನು ಕಂಗೆಡಿಸಿದೆ. ಮಳೆ ಕೊರತೆ ಜಿಲ್ಲೆಯಾದ್ಯಂತ ನೀರು- ಮೇವಿನ ತೀವ್ರ ಬರ ಹುಟ್ಟು ಹಾಕಿದ್ದರಿಂದ ರೈತರು ಎತ್ತು, ಆಕಳು, ಎಮ್ಮೆ- ಕರುಗಳನ್ನೆಲ್ಲ ಮಾರಾಟಕ್ಕಿಟ್ಟಿದ್ದಾರೆ.

ಆದರೆ, ದನಗಳ ಸಂತೆಗೆ ಮಹಾರಾಷ್ಟ್ರದಿಂದ ಕಸಾಯಿಖಾನೆ ಮಾಲೀಕರು ಹಾಗೂ ದನಗಳ ದಲ್ಲಾಳಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ರೈತರನ್ನು ಮತ್ತೊಂದು ರೀತಿಯ ಚಿಂತೆಗೆ ತಳ್ಳುತ್ತಿದೆ.

ಕರುಳು ಚುರುಕ್‌ ಎನ್ನುತ್ತದೆ:  ಕಲಬುರಗಿ ಜಿಲ್ಲೆಯ ಆಳಂದ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಉಮ್ಮರ್ಗಾ (ಉಸ್ಮಾನಾಬಾದ್‌ ಜಿಲ್ಲೆ) ತಾಲೂಕಿನ ಖಸ್ಗಿ ಹಾಗೂ ಚೌರಸ್ತಾ ಬೀರದೇವ್‌ ದನಗಳ ಸಂತೆಗೆ ಮಂಗಳವಾರ ‘ಕನ್ನಡಪ್ರಭ’ ಭೇಟಿ ನೀಡಿದಾಗ ಕರುಳು ಚುರುಕ್‌ ಎನಿಸುವಂತಹ ಸನ್ನಿವೇಶಗಳು ಕಂಡುಬಂದವು.

‘ಮಳೆ ಇಲ್ಲ, ಬೆಳೆ ಇಲ್ಲ, ಇನ್ನೂ ಮಳೆಗಾಲಕ್ಕೆ 5 ತಿಂಗಳು ಬಾಕಿಯಿದೆ, ಮುಂದೆ ನೋಡಿದ್ರಾಯ್ತು...’ ಎಂದು ಅಸಹಾಯಕತೆಯಲ್ಲಿ ಆಳಂದ, ಅಫಜಲ್ಪುರದ ನೂರಾರು ರೈತರು ತಮ್ಮ ಜೊತೆಗಿದ್ದಂತಹ ಎತ್ತು, ಆಕಳು, ಎಮ್ಮೆ, ದನಕರುಗಳನ್ನೆಲ್ಲ ಸಂತೆಗೆ ತಂದು ಸಿಕ್ಕಷ್ಟುಸಿಗಲಿ ಎಂದು ಮಾರಾಟಕ್ಕಿಟ್ಟಿದ್ದರು. ರೈತರ ಅಸಹಾಯಕತೆಯನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡ ಮಹಾರಾಷ್ಟ್ರದ ಪುಣೆ- ಮುಂಬೈನ ದೊಡ್ಡದೊಡ್ಡ ಕಸಾಯಿಖಾನೆ ವರ್ತಕರು, ದನಗಳ ದಲ್ಲಾಳಿಗಳು ಬೇಕಾಬಿಟ್ಟಿಬೆಲೆ ಹೇಳುತ್ತಾ ಜಾನುವಾರುಗಳ ಖರೀದಿಯಲ್ಲಿ ನಿರತರಾಗಿರುವುದು ಕಂಡುಬಂತು.

‘ಯಪ್ಪಾ, ದನಗಳನ್ನೇನೋ ತಂದೀವ್ರಿ, ಆದ್ರ ಈ ಸಂತ್ಯಾಗ ದನಗಳ ಖರೀದಿಗೆ ನಮ್ಹಂಗೇ ರೈತರು ಬರ್ತಾರೇನ್‌ ಅಂತ ನೋಡಿದ್ರ ರೈತರ್ಯಾರು ಬರ್ತಿಲ್ಲ. ಬದಲಾಗಿ ಕಟುಕರೇ ಬರಾಕತ್ತಾರ, ನಮಗ ಕರುಳ ಹಿಸುಕಿದ್ಹಂಗ ಆಗಕತ್ತದ’ ಎಂದು ರೈತರು ಹೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿರುವ ಖಸ್ಗಿ ಹಾಗೂ ಉಮ್ಮರ್ಗಾ ಚೌರಸ್ತಾ ಬೀರಲಿಂಗ್‌ ಜಾತ್ರಾ ಮೈದಾನದಲ್ಲಿನ ದನಗಳ ಸಂತೆಯಲ್ಲಿ ಸೇರಿದ್ದ ಸಾವಿರಾರು ದನಕರುಗಳಲ್ಲಿ ಶೇ.80ರಷ್ಟುಕಲಬುರಗಿ ಜಿಲ್ಲೆಯ ಆಳಂದ, ಅಫಜಲ್ಪುರ ಹಾಗೂ ವಿಜಯಪುರ, ಬೀದರ್‌ನ ಹಳ್ಳಿಗಳಿಂದ ಬಂದಿದ್ದವು.

ಕವಲಗಾ ರೈತ ಹಣಮಂತರಾವ ಗಡದೆ, ‘ಮೇವು- ನೀರ ಎಲ್ಲಿಂದ ಪುರಾಠ ಮಾಡೋಣ ಹೇಳ್ರಿ? ಎತ್ತುಗಳ ಮಾರಾಕ ನಮಗೇನ್‌ ಮನಸ್ಸ ಅದ ಅಂತ ತಿಳಿದಿರೇನ್‌? ಎತಗೋಳು, ದನಕರಾ... ನಮ್ಮ ಜೀಂವಾ ಇದ್ದಂಗ. ಈಗ ಕಷ್ಟಬಂದೈತಿ, ಮಾರಾಕ ಬಂದೀವಿ’ ಎಂದು ನೋವು ತೋಡಿಕೊಂಡರು.

ಆಳಂದದ ತಡೋಳಾ, ಖಜೂರಿ, ನರೋಣಾ, ಕಡಗಂಚಿಯ ರೈತರಾದ ಹಬೀಬ್‌ ಸಾಬ್‌, ಕರಬಸಪ್ಪ, ಆಣೂರಿನ ರವಿ ಅಪ್ಪಾರಾವ ಗೋಣೆ ಎಲ್ಲರೂ ತಾವು ತಂದ ದನಕರುಗಳಿಗೆ ಉತ್ತಮ ಬೆಲೆಗಾಗಿ ಕಾಯುತ್ತ ಚೌರಸ್ತಾ ಬೀರದೇವ್‌ ಜಾತ್ರೆಯಲ್ಲಿ ವಾರದಿಂದ ಠಿಕಾಣಿ ಹೂಡಿದ್ದಾರೆ!

ನ್ನೂ ಆರಂಭವಾಗದ ಗೋಶಾಲೆ

ಸುಮಾರು 18 ಲಕ್ಷದಷ್ಟುಜಾನುವಾರುಗಳಿರುವ ಕಲಬುರಗಿ, ವಿಜಯಪುರ ಹಾಗೂ ಬೀದರ್‌ ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಮೇವುಬ್ಯಾಂಕ್‌, ಗೋಶಾಲೆಯನ್ನು ಆರಂಭಿಸಿಲ್ಲ. ಈಗಷ್ಟೇ ಕಲಬುರಗಿ ಜಿಲ್ಲಾಡಳಿತ ತಾಲೂಕಿಗೆ 2ರಂತೆ ಮೇವು ಬ್ಯಾಂಕ್‌ ಖರೀದಿಗೆ ಗುತ್ತಿಗೆದಾರರ ನಿಗದಿ ಮಾಡಿದೆ. ಇದನ್ನು ಬಿಟ್ಟರೆ ಉಳಿದ ಯಾವ ಜಿಲ್ಲೆಗಳಲ್ಲಿಯೂ ಈ ಕೆಲಸವಾಗಿಲ್ಲ. ಹೀಗಾಗಿ ರೈತರಿಗೆ ಜೊತೆಗಿರುವ ದನಕರುಗಳೇ ಭಾರವಾಗುತ್ತಿವೆ. ಅಂತರ್ಜಲ ಕುಸಿತದಿಂದ ಬಾವಿ, ಕೊಳವೆಬಾವಿ ಬತ್ತಿವೆ, ಹಸಿ ಮೇವಿಲ್ಲ. ಸಂಸಾರ ಸಾಗಿಸುವುದೇ ಕಷ್ಟವಾಗಿರುವಾಗ ದನಕರಗಳನ್ನು ಹೇಗೆ ಸಲುಹೋದು ಎಂದು ರೈತರು ದನಗಳ ಸಂತೆಗೆ ಅಲೆಯುತ್ತಿದ್ದಾರೆ.

ಕಲಬುರಗಿ, ಬೀದರ್‌, ವಿಜಯಪುರ ಸೇರಿದಂತೆ 3 ಜಿಲ್ಲೆಗಳಲ್ಲಿ 18 ಲಕ್ಷದಷ್ಟುಜಾನುವಾರುಗಳಿವೆ. ಮೇವಿಲ್ಲ, ನೀರಿಲ್ಲವೆಂದು ರೈತರೆಲ್ಲರೂ ಸಂತೆಗೆ ಬಂದು ಮಾರಾಟ ಮಾಡಿದರೆ ಮುಂದೆ ಕೃಷಿ ರಂಗದ ಭವಿಷ್ಯ ಏನಾಗಬಹುದು? ಇನ್ನಾದರೂ ಸರ್ಕಾರ ಕಣ್ಣುಬಿಟ್ಟು ಬರದ ಭೀಕರತೆ ನೋಡಲಿ. ಹೋಬಳಿಗೊಂದರಂತೆ ತಕ್ಷಣ ಗೋಶಾಲೆ, ಮೇವು ಬ್ಯಾಂಕ್‌ ಆರಂಭಿಸಿ ಕಂಗೆಟ್ಟರೈತರ ನೆರವಿಗೆ ಬರಲಿ.

- ಚಂದ್ರಶೇಖರ ಹಿರೇಮಠ, ಅಧ್ಯಕ್ಷರು, ಶ್ರಮಜೀವಿಗಳ ವೇದಿಕೆ (ಕಲಬುರಗಿ)

ರೈತರ ಗೋಳು ಕೇಳೋರಿಲ್ಲ..!

‘ಎರಡು ವರ್ಷಗಳ ಹಿಂದೆ ಬರ ಬಿದ್ದಾಗ ಗೋಶಾಲೆ ತೆಗೆದಿದ್ದರು. ಈ ಬ್ಯಾರಿ ಯಾವುದೂ ಇಲ್ಲ, ನಮ್ಮಂಥಹ ಬಡ ರೈರರು ಎನು ಮಾಡಬೇಕು?. ಒಂದು ದನ ಏನಿಲ್ಲಂದ್ರ ಒಂದು ದಿನಕ್ಕೆ 150 ರುಪಾಯಿ ಮೇವು ತಿಂತದ. ಮನ್ಯಾಗ 10 ದನ ಇಟ್ಕೊಂಡು ತಿಂಗಳಿಗೆ ಸಾವಿರಾರು ರು. ಖರ್ಚ ಮಾಡ್ಲಿಕ್ಕಿ ಸಾಧ್ಯ ಇಲ್ರಿ. ಬೋರು, ಬಾವ್ಯಾಗ ನೀರಿಲ್ಲ. ಹಳ್ಳದಾಗಂತೂ ಮೊದ್ಲೇ ಇಲ್ಲ. ನೀರೆಲ್ಲಿಂದ ತರೋದು? ದನಗೋಳ ಗೋಳು ನೋಡದಂತೆ ಅವುಗಳನ್ನ ಮಾರೋದೇ ಒಳಿತಂತ ಇಲ್ಲಿಗೆ ಬಂದೀವಿ’ ಎಂದು ರೈತರು ತಾವು ಎದುರಿಸುತ್ತಿರೋ ಗೋಳು ’ಕನ್ನಡಪ್ರಭ’ ಮುಂದೆ ಹೇಳಿಕೊಂಡರು.

ವರದಿ :  ಶೇಷಮೂರ್ತಿ ಅವಧಾನಿ