ಕಲಬುರಗಿ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಅವರು ಗನ್ ಹಿಡಿದು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ನಂತರ, ಅದು ಅಸಲಿ ಗನ್ ಅಲ್ಲ, ಮಕ್ಕಳ ಆಟಿಕೆ ಎಂದು ಸ್ಪಷ್ಟನೆ. ತಮ್ಮ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರಲು ವಿರೋಧಿಗಳು ಈ ವಿಡಿಯೋವನ್ನು ದುರುದ್ದೇಶಪೂರ್ವಕವಾಗಿ ವೈರಲ್ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಕಲಬುರಗಿ (ಫೆ.10):ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮತೀನ್ ಪಟೇಲ್ ಅವರು ಧುರಂಧರ್ ಸಿನಿಮಾ ಹಾಡಿಗೆ ಗನ್ ಹಿಡಿದು ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಕೈಯಲ್ಲಿ ಗನ್ ಹಿಡಿದು ಸ್ಟೆಪ್ ಹಾಕಿದ್ದ ನಾಯಕನ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದು ಅಸಲಿ ಗನ್ ಅಲ್ಲ, ಕೇವಲ ಆಟಿಕೆ: ಮತೀನ್ ಸ್ಪಷ್ಟನೆ

ವಿಡಿಯೋ ವೈರಲ್ ಆಗಿ ವಿವಾದಕ್ಕೀಡಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮತೀನ್ ಪಟೇಲ್, ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಅದು ಅಸಲಿ ಗನ್ ಅಲ್ಲ, ಬದಲಾಗಿ ಮಕ್ಕಳ ಆಟಿಕೆಯ ಗನ್ (ಲೈಟರ್ ಗನ್)' ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಕೌಟುಂಬಿಕ ಕಾರ್ಯಕ್ರಮದಲ್ಲಿ ನಡೆದಿದ್ದೇನು?

ಕಳೆದ ತಿಂಗಳು 18 ರಂದು ನನ್ನ ಸಹೋದರಿಯ ಮಗಳ ಮದುವೆಯ ಮುನ್ನಾ ದಿನ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಸಂಭ್ರಮದ ವೇಳೆ ಕುಟುಂಬದ ಸದಸ್ಯರೆಲ್ಲರೂ ವಿವಿಧ ಪಾತ್ರಗಳನ್ನು ಮಾಡುತ್ತಾ ಡ್ಯಾನ್ಸ್ ಮಾಡಿದ್ದೆವು. ಮಕ್ಕಳ ಒತ್ತಾಯಕ್ಕೆ ಮಣಿದು ನಾನು ಕೇವಲ ಒಂದು ಪಾತ್ರಕ್ಕಾಗಿ ಆ ಲೈಟರ್ ಗನ್ ಹಿಡಿದುಕೊಂಡಿದ್ದೆ ಅಷ್ಟೇ' ಎಂದು ಕಾರ್ಯಕ್ರಮದ ಹಿನ್ನೆಲೆಯನ್ನು ವಿವರಿಸಿದ್ದಾರೆ.

ರಾಜಕೀಯ ವರ್ಚಸ್ಸಿಗೆ ಧಕ್ಕೆ ತರಲು ವಿರೋಧಿಗಳು ಕುತಂತ್ರ

ತಮ್ಮ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರಲು ಕೆಲವರು ಈ ವಿಡಿಯೋವನ್ನು ದುರುದ್ದೇಶಪೂರ್ವಕವಾಗಿ ವೈರಲ್ ಮಾಡುತ್ತಿದ್ದಾರೆ ಎಂದು ಮತೀನ್ ಆರೋಪಿಸಿದ್ದಾರೆ. ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದವನು, ಈ ರೀತಿ ಗನ್ ಪ್ರದರ್ಶನ ಮಾಡುವವನಲ್ಲ. ಈಗಾಗಲೇ ಆ ಲೈಟರ್ ಗನ್ ಅನ್ನು ಪೊಲೀಸರಿಗೆ ಒಪ್ಪಿಸಿ, ಸಂಪೂರ್ಣ ಮಾಹಿತಿ ನೀಡಿದ್ದೇನೆ ಎಂದಿದ್ದಾರೆ.