ಕಲಬುರಗಿ ಜಿಲ್ಲೆಯಲ್ಲಿ ಶಾಸಕ ಎಂ.ವೈ. ಪಾಟೀಲ್ ಅವರ ಆಪ್ತ, ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್, ಸಿನಿಮಾ ಶೈಲಿಯಲ್ಲಿ ಗನ್ ಪ್ರದರ್ಶಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಗನ್‌ನ ನೈಜತೆ ಮತ್ತು ಕಾನೂನುಬದ್ಧತೆಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.

ಕಲಬುರಗಿ (ಫೆ.10): ಕಲಬುರ್ಗಿ ಜೆಲ್ಲಯಲ್ಲಿ ಕಾಂಗ್ರೆಸ್ ಮುಖಂಡನೊಬ್ಬನ 'ಗನ್ ಸಂಸ್ಕೃತಿ'ಯ ಪ್ರದರ್ಶನ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಅಫಜಲಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಂವೈ. ಪಾಟೀಲ್ ಅವರ ಆಪ್ತ ಎನ್ನಲಾದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಎಂಬಾತ ಸಿನಿಮಾ ಶೈಲಿಯಲ್ಲಿ ಕಾರಿನಿಂದ ಎಂಟ್ರಿ ಕೊಟ್ಟು ಹಿಂಬಾಲಕರ ಕೈಯಲ್ಲಿ ಗನ್ ಹಿಡಿದು ಪೋಸ್ ನೀಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತವಾಗಿ ಇರಬೇಕಾದ ವ್ಯಕ್ತಿಯ ಈ ರೀತಿ ವರ್ತಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

Add Asianetnews Kannada as a Preferred SourcegooglePreferred

'ಧುರಂಧರ್' ಹಾಡಿಗೆ ಗನ್ ಹಿಡಿದು ಡ್ಯಾನ್ಸ್!

ಇತ್ತೀಚೆಗೆ ತೆರೆಕಂಡ ಧುರಂಧರ್(Dhurandhar) ಸಿನಿಮಾದ ಜನಪ್ರಿಯ ಹಾಡಿನ ಹಿನ್ನೆಲೆ ಸಂಗೀತಕ್ಕೆ ತಕ್ಕಂತೆ ಮತೀನ್ ಪಟೇಲ್ ಕಾರಿನಲ್ಲಿ ಕುಳಿತು ಹಿಂಬಾಲಕರು ಗನ್ ಹಿಡಿದು ಡ್ಯಾನ್ಸ್ ಮಾಡಿದ್ದಾರೆ. ಕೇವಲ ಡ್ಯಾನ್ಸ್ ಮಾಡುವುದು ಮಾತ್ರವಲ್ಲದೆ, ಕಾರಿನಿಂದ ಕೆಳಗಿಳಿಯುವಾಗಲೂ ಗನ್ ಹಿಡಿದು ಪೋಸ್ ನೀಡುವ ಮೂಲಕ ತನ್ನ ಪ್ರಭಾವ ಪ್ರದರ್ಶಿಸಲು ಯತ್ನಿಸಿದ್ದಾರೆ. ಈ ದೃಶ್ಯಗಳು ಈಗ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಕಾನೂನಿನ ಭಯವೇ ಇಲ್ಲದಂತೆ ವರ್ತಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.

ಗನ್ ಅಸಲಿಯೋ ಅಥವಾ ನಕಲಿಯೋ?

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಮತೀನ್ ಪಟೇಲ್ ಹಿಡಿದಿರುವ ಗನ್ ಅಸಲಿಯೇ ಅಥವಾ ಅದು ಕೇವಲ 'ಫ್ಯಾನ್ಸಿ' ಗನ್ ಆಗಿದೆಯೇ? ಒಂದು ವೇಳೆ ಅದು ಅಸಲಿ ಬಂದೂಕಾಗಿದ್ದರೆ, ಅದಕ್ಕೆ ಪರವಾನಗಿ ಇದೆಯೇ? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಜನನಿಬಿಡ ಪ್ರದೇಶಗಳಲ್ಲಿ ಇಂತಹ ಆಯುಧಗಳನ್ನು ಪ್ರದರ್ಶಿಸುವುದು ಕಾನೂನುಬಾಹಿರವಾಗಿದ್ದರೂ, ಕೈ ಮುಖಂಡ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅಟ್ಟಹಾಸ ಮೆರೆದಿದ್ದಾರೆ.

ಕೈ ಮುಖಂಡನ ದುರ್ವರ್ತನೆಗೆ ವ್ಯಾಪಕ ಆಕ್ರೋಶ

ಶಾಸಕರ ಆಪ್ತನೆಂದು ಗುರುತಿಸಿಕೊಂಡಿರುವ ವ್ಯಕ್ತಿಯೇ ಈ ರೀತಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರ ಬೆಂಬಲದ ಬಲದಿಂದಲೇ ಇಂತಹ ಕೃತ್ಯಗಳು ನಡೆಯುತ್ತಿವೆಯೇ ಎಂಬ ಚರ್ಚೆಗಳು ಶುರುವಾಗಿವೆ. ಈ ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ತನಿಖೆ ನಡೆಸಬೇಕು ಮತ್ತು ಅಕ್ರಮವಾಗಿ ಗನ್ ಹೊಂದಿದ್ದರೆ ಕಠಿಣ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.