ಕೋವಿಡ್-19 ಹಗರಣದ ಕರಾಳ ಸತ್ಯ ಬಿಚ್ಚಿಟ್ಟ ನ್ಯಾ.ಮೈಕಲ್ ಡಿ. ಕುನ್ಹಾ ಪ್ರಥಮ ವರದಿ
ಕೋವಿಡ್ ಸಮಯದಲ್ಲಿ ನಡೆದ ಕೋಟ್ಯಂತರ ರೂಪಾಯಿ ಹಗರಣದ ಬಗ್ಗೆ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ಸಮಿತಿಯ ಪ್ರಾಥಮಿಕ ವರದಿ ಬೆಳಕಿಗೆ ಬಂದಿದೆ. ವೆಂಟಿಲೇಟರ್ ಖರೀದಿಯಲ್ಲಿ ಈ ಪ್ರಮುಖ ಸಂಸ್ಥೆಗಳ ಮೇಲೆ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು (ನ.18): ರಾಜ್ಯದಲ್ಲಿ ಕೊರೋನಾ ಕಾಲದಲ್ಲಿ ನಡೆದ ಕೋಟ್ಯಂತರ ರೂ. ಹಗರಣದ ಬಗ್ಗೆ ತನಿಖೆ ಮಾಡಲು ರಾಜ್ಯ ಸರ್ಕಾರ ರಚಿಸಿದ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ಸಮಿತಿ ಪ್ರಾಥಮಿಕ ವರದಿ ಸಲ್ಲಿಕೆಯಾಗಿದ್ದು, ವರದಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದ ಹಗರಣದ ಇಂಚಿಂಚು ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಇಲ್ಲಿದೆ ನೋಡಿ ಬ್ರಹ್ಮಾಂಡ ಭ್ರಷ್ಟಾಚಾರ..
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್-19 ನಿರ್ವಹಣೆಯ ಹೆಸರಿನಲ್ಲಿ 1000 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಹಗರಣ ಮಾಡಲಾಗಿದೆ ಎಂದು ಆರೋಪ ಮಾಡಲಾಗಿತ್ತು. ಜೊತೆಗೆ, ಬಿಜೆಪಿ ಅವಧಿಯಲ್ಲಿಯೇ ತನಿಖೆ ಮಾಡುವಂತೆ ಕಾಂಗ್ರೆಸ್ ನಾಯಕರು ಆಗ್ರಹ ಮಾಡಿದರೂ, ಸರ್ಕಾರದಿಂದ ಯಾವುದೇ ತನಿಖೆಗೆ ವಹಿಸಿರಲಿಲ್ಲ. ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೋವಿಡ್ ಕಾಲದ ಹಗರಣ ತನಿಖೆಗೆ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ನೇತೃತ್ವದ ಸಮಿತಿ ರಚಿಸಿತ್ತು. ಇದೀಗ ಮೈಕೆಲ್ ಡಿ. ಕುನ್ಹಾ ಸಮಿತಿಯ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಇದರ ನಂತರ ಇನ್ನೂ 2ನೇ ವರದಿ ಸಲ್ಲಿಕೆ ಬಾಕಿಯಿದೆ. ಆದರೆ, ರಾಜ್ಯ ಸರ್ಕಾರದಿಂದ ಇದೀಗ ಕೋವಿಡ್ ಕಾಲದ ಹಗರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಮುಂದಾಗಿದೆ. ಒಂದು ವೇಳೆ ಹಗರಣದ 100 ಕೋಟಿ ರೂ.ಗಿಂತ ಮೀರಿದರೆ ಅದನ್ನು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು (ಸಿಬಿಐ, ಇಡಿ) ಕೂಡ ತನಿಖೆ ಮಾಡಬಹುದು.
ಇದನ್ನೂ ಓದಿ: ಜಸ್ಟೀಸ್ ಡಿಕುನ್ಹಾ ವರದಿಯಲ್ಲಿ ಕೋವಿಡ್ ಅಕ್ರಮ ಸ್ಪಷ್ಟ ಉಲ್ಲೇಖ: ಸಚಿವ ದಿನೇಶ್ ಗುಂಡೂರಾವ್
ನ್ಯಾ. ಮೈಕಲ್ ಡಿ ಕುನ್ಹಾ ಪ್ರಥಮ ವರದಿಯ ಕರಾಳ ಸತ್ಯ ಇಲ್ಲಿದೆ..
ಕೋವಿಡ್ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ವೆಂಟಿಲೇಟರ್ ಖರೀದಿಯಲ್ಲೂ ಅವ್ಯವಹಾರ ನಡೆದಿದೆ. ಕೋವಿಡ್ ಅವಧಿಯಲ್ಲಿ ಸಾವಿರಾರು ರೋಗಿಗಳು ವೆಂಟಿಲೇಟರ್ ಇಲ್ಲದೇ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ರೋಗಿಗಳು ಸಾಯುತ್ತಿದ್ದರೂ, ವೆಂಟಿಲೇಟರ್ ಖರೀದಿಯಲ್ಲಿ ಅಂದಿನ ಬಿಜೆಪಿ ಸರ್ಕಾರ ಲೂಟಿ ಹೊಡೆದು ರೋಗಿಗಳ ಸಾವಿಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರು ಸೇರಿ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಇನ್ನು ವೆಂಟಿಲೇಟರ್ ಪೂರೈಕೆದಾರರ ಮೇಲೆ ಅನುಮಾನ ವ್ಯಕ್ತಪಡಿಸಿರುವ ಕುನ್ಹಾ ವಿಚಾರಣಾ ಆಯೋಗವು ಸನ್ ಜೆ಼ನ್ ಎಂಟರ್‌ಪ್ರೈಸಸ್ ಹಾಗೂ ಎನ್‌ಕಾರ್ಟಾ ಫಾರ್ಮಾ ಇಬ್ಬರು ಪೂರೈಕೆದಾರರ ಮೇಲೂ ಹಗರಣ ಮಾಡಿರುವ ಆರೋಪ ಹೊರಿಸಿದೆ. ಸರ್ಕಾರ ಆರ್ಡರ್ ಮಾಡಿದ್ದೇ ಒಂದು ಸಂಖ್ಯೆ ವೆಂಟಿಲೇಟರ್ ಆಗಿದ್ದರೂ, ಈ ಎರಡೂ ಸಂಸ್ಥೆಗಳು ಸುಮಾರು 173.26 ಕೋಟಿ ರೂ. ಮೊತ್ತದಲ್ಲಿ ಬೇರೆಯದೇ ಸಂಖ್ಯೆಯ ವೆಂಟಿಲೆಟರ್ ಪೂರೈಕೆ ಮಾಡಿವೆ. ಇನ್ನು ವೆಂಟಿಲೇಟರ್ ಸಂಖ್ಯೆಯಲ್ಲಿ ಹಾಗೂ ಪೇಮೆಂಟ್ ನಲ್ಲೂ ವ್ಯತ್ಯಾಸ ಕಂಡಿಬಂದಿದೆ ಎಂದು ಕುನ್ಹಾ ಸಮಿತಿ ವರದಿಯಲ್ಲಿ ತಿಳಿಸಿದೆ.
ಸನ್ ಜೆ಼ನ್ ಎಂಟರ್‌ಪ್ರೈಸಸ್ ಸಂಸ್ಥೆಯ ವೆಂಟಿಲೇಟರ್ ಖರೀದಿ ಗೋಲ್ಮಾಲ್.?
- ಸನ್ ಜೆ಼ನ್ ಎಂಟರ್‌ಪ್ರೈಸಸ್‌ನಿಂದ ಒಟ್ಟು 71.77 ಕೋಟಿ ರೂ.ಗೆ 490 ವೆಂಟಿಲೇಟರ್ ಖರೀದಿ
- ಆದರೆ, ದಾಖಲೆಗಳ ಪ್ರಕಾರ 477 ವೆಂಟಿಲೇಟರ್ ಮಾತ್ರ ಪೂರೈಕೆ ಮಾಡಲಾಗಿದೆ
- 477 ವೆಂಟಿಲೇಟರ್‌ಗಳ ಪೈಕಿ 402 ವೆಂಟಿಲೇಟರ್ ಮಾತ್ರ ಆಸ್ಪತ್ರೆಗಳಲ್ಲಿ ಅಳವಡಿಕೆ ಮಾಡಲಾಗಿದೆ
- ವೆಂಟಿಲೇಟರ್ ಪೂರೈಕೆದಾರರಿಗೆ 71 ಕೋಟಿಯಲ್ಲಿ 68 ಕೋಟಿ ರೂ. ಮೊತ್ತ ಪಾವತಿಸಲಾಗಿದೆ
- ಕೇವಲ 402 ವೆಂಟಿಲೇಟರ್ ಮಾತ್ರ ಅಳವಡಿಕೆ ಮಾಡಲಾಗಿದೆ ಎಂಬ ಅಭಿಪ್ರಾಯಕ್ಕೆ ಬಂದಿರುವ ಕುನ್ಹಾ ವಿಚಾರಣಾ ಆಯೋಗ
- ಸುಮಾರು 13.39 ಕೋಟಿ ರೂ. ಮೌಲ್ಯದ ವೆಂಟಿಲೇಟರ್‌ಗಳು ಅಳವಡಿಕೆ ಆಗಿಲ್ಲ ಎಂದು ವರದಿಯಲ್ಲಿ ಉಲ್ಲೇಖ
ಇದನ್ನೂ ಓದಿ: ಸಂಸದ ಡಾ.ಮಂಜುನಾಥ್‌ಗೆ ಉರುಳಾಗುತ್ತಾ ಕೋವಿಡ್ ಹಗರಣದ ತನಿಖೆ; ಬಿಗ್ ಅಪ್ಡೇಟ್ ಕೊಟ್ಟ ಸಚಿವ ದಿನೇಶ್ ಗುಂಡೂರಾವ್!
ಎನ್‌ಕಾರ್ಟಾ ಫಾರ್ಮಾ ಸಂಸ್ಥೆ ವೆಂಟಿಲೇಟರ್ ಖರೀದಿಯಲ್ಲೂ ಗೋಲ್ಮಾಲ್..?
- ದಾಖಲೆಗಳ ಪ್ರಕಾರ ಎನ್‌ಕಾರ್ಟಾ ಫಾರ್ಮಾ 647 ವೆಂಟಿಲೇಟರ್ ಅಳವಡಿಸಿರುವುದಾಗಿ ಮಾಹಿತಿ ಇದೆ.
- ಒಟ್ಟು 105.87 ಕೋಟಿ ರೂ. ಮೊತ್ತದ ವೆಂಟಿಲೇಟರ್ ಎನ್‌ಕಾರ್ಟಾ ಫಾರ್ಮಾದಿಂದ ಖರೀದಿಸಲಾಗಿದೆ.
- 12-08-2020 ರಿಂದ 05-01-2022 ವರೆಗೆ ಒಟ್ಟು 5 ಬಾರಿ ವೆಂಟಿಲೇಟರ್ ಪೂರೈಕೆ ಮಾಡಲಾಗಿದೆ.
- ಎನ್‌ಕಾರ್ಟಾ ಫಾರ್ಮಾದವರು ಹಣ ಪಾವತಿಯಾಗಿರುವ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ.
- ವೈದ್ಯಕೀಯ ಶಿಕ್ಷಣ ಇಲಾಖೆ ಕೂಡ ಹಣ ಪಾವತಿಸಿರುವ ಬಗ್ಗೆ ಯಾವುದೇ ರಸೀದಿಗಳನ್ನ ಇಟ್ಟುಕೊಂಡಿಲ್ಲ.
- ವೆಂಟಿಲೇಟರ್ ಖರೀದಿ ಫೈಲ್‌ನಲ್ಲಿ ಕೇವಲ ಸರಕುಪಟ್ಟಿ(invoice) ಮಾತ್ರ ಇದೆ. ಪಾವತಿಸಿದ ಹಣ ಹಾಗೂ ಸ್ಟಾಕ್ ಬಗ್ಗೆ ದಾಖಲೆಗಳಿಲ್ಲ.
- 105 ಕೋಟಿ ರೂ. ಮೊತ್ತದ ವೆಂಟಿಲೇಟರ್ ಖರೀದಿ ಅನುಮಾನ ಮೂಡಿಸಿದೆ.
- ರಸೀದಿ ಇಲ್ಲದಿರುವುದು, ಸ್ಟಾಕ್ ಬಗ್ಗೆ ಮಾಹಿತಿ ಇಲ್ಲದಿರುವುದು ನೋಡಿದರೆ ಇಡೀ ಪ್ರಕ್ರಿಯೆ ಅನುಮಾನದಿಂದ ಕೂಡಿದೆ.
- ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರೂ ಸೇರಿ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲು ಕುನ್ಹಾ ಸಮಿತಿ ಶಿಫಾರಸು.