Asianet Suvarna News Asianet Suvarna News

ಒಳಮೀಸಲಿನಿಂದ ಸರ್ವರಿಗೂ ನ್ಯಾಯ: ಪ್ರಭು ಚವ್ಹಾಣ್‌

ಒಳಮೀಸಲಾತಿ ಜಾರಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನಕ್ಕೆ ಸಂಪೂರ್ಣ ಸಹಮತ ಇದೆ. ಸಚಿವ ಸಂಪುಟ ತೀರ್ಮಾನ ವಿಚಾರದಲ್ಲಿ ನನ್ನ ಭಿನ್ನಾಭಿಪ್ರಾಯ ಟಿಪ್ಪಣಿ ಇದೆ ಎಂದು ಕೆಲವೆಡೆ ಹಬ್ಬಿಸಲಾಗಿದೆ. ಇದು ಸತ್ಯಕ್ಕೆ ದೂರುವಾಗಿದ್ದು, ಸಚಿವ ಸಂಪುಟ ಸಭೆಯ ತೀರ್ಮಾನಕ್ಕೆ ಯಾವುದೇ ಭಿನ್ನಾಭಿಪ್ರಾಯದ ಟಿಪ್ಪಣಿಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಪ್ರಭು ಚವ್ಹಾಣ್‌. 

Justice for All With Internal Reservation Says Minister Prabhu Chauhan grg
Author
First Published Mar 28, 2023, 9:11 AM IST

ಬೆಂಗಳೂರು(ಮಾ.28):  ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಪರಿಶಿಷ್ಟಜಾತಿಯಲ್ಲಿನ ಎಲ್ಲಾ ಸಮುದಾಯಗಳಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳ ಹಂಚಿಕೆಯನ್ನು ಆಯಾ ಜಾತಿ ಜನಾಂಗಗಳ ಗುಂಪಿನ ಜನಸಂಖ್ಯೆಗೆ ಅನುಗುಣವಾಗಿ ಶೇಕಡಾವಾರು ಹಂಚಿಕೆ ಮಾಡಿ ಸರ್ವರಿಗೂ ನ್ಯಾಯ ಒದಗಿಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿದ್ದಾರೆ.

ಸೋಮವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನಕ್ಕೆ ಸಂಪೂರ್ಣ ಸಹಮತ ಇದೆ. ಸಚಿವ ಸಂಪುಟ ತೀರ್ಮಾನ ವಿಚಾರದಲ್ಲಿ ನನ್ನ ಭಿನ್ನಾಭಿಪ್ರಾಯ ಟಿಪ್ಪಣಿ ಇದೆ ಎಂದು ಕೆಲವೆಡೆ ಹಬ್ಬಿಸಲಾಗಿದೆ. ಇದು ಸತ್ಯಕ್ಕೆ ದೂರುವಾಗಿದ್ದು, ಸಚಿವ ಸಂಪುಟ ಸಭೆಯ ತೀರ್ಮಾನಕ್ಕೆ ಯಾವುದೇ ಭಿನ್ನಾಭಿಪ್ರಾಯದ ಟಿಪ್ಪಣಿಯನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಳ ಶೆಡ್ಯೂಲ್‌ 9ಕ್ಕೆ ಸೇರಿಸಿ: ಕೇಂದ್ರಕ್ಕೆ ರಾಜ್ಯದಿಂದ ಪತ್ರ

ನ್ಯಾ.ಸದಾಶಿವ ಆಯೋಗದ ವರದಿಯನ್ನು ಆಧಾರವಾಗಿಟ್ಟುಕೊಳ್ಳದೆ ಒಳಮೀಸಲಾತಿ ಬಗ್ಗೆ ಚರ್ಚೆ ಮಾಡೋಣ ಎನ್ನುವ ಅಭಿಪ್ರಾಯದ ಕುರಿತು ವಿವರಣೆ ನೀಡುವ ವೇಳೆ ನನ್ನ ಅಭಿಪ್ರಾಯವನ್ನು ಲಿಖಿತ ಮೂಲಕ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರಿಗೆ ನೀಡಿದ್ದೇನೆ. ಆ ಲಿಖಿತ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ, ಸಚಿವ ಸಂಪುಟ ತೀರ್ಮಾನಕ್ಕೆ ವ್ಯತಿರಿಕ್ತವಾಗಿ ಭಿನ್ನಾಭಿಪ್ರಾಯ ಟಿಪ್ಪಣಿ ನೀಡಿದ್ದೇನೆ ಎಂಬರ್ಥದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಎಲ್ಲಾ ಜಾತಿ ಜನಾಂಗಕ್ಕೆ ನ್ಯಾಯ ಸಿಕ್ಕಿದೆ. ಸರ್ವರಿಗೂ ಅನುಕೂಲವಾಗಿರುವಂತಹ ಒಂದು ಮಹತ್ವದ ತೀರ್ಮಾನ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎಲ್ಲಾ ಸಮುದಾಯಗಳ ಪರವಾಗಿ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.

ಪರಿಶಿಷ್ಟಜಾತಿಯ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಜಾತಿಗಳಿಗೆ ಸಂವಿಧಾನ ಬದ್ಧವಾಗಿ ಲಭ್ಯವಾಗುವ ಮೀಸಲಾತಿ ಸೌಲಭ್ಯಗಳ ಹಂಚಿಕೆಯಲ್ಲಿನ ತಾರತಮ್ಯಗಳ ನಿವಾರಣೆಗೆ ಒಳ ಮೀಸಲಾತಿ ಕೊಡುವ ಕುರಿತು ಪರಿಶೀಲನೆ ನಡೆಸಿ ಸಚಿವ ಸಂಪುಟ ಸಭೆಗೆ ಅಭಿಪ್ರಾಯ ನೀಡುವ ಸಂಬಂಧ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಲಾಯಿತು. ಸಮಿತಿಯು ನಾಲ್ಕು ಬಾರಿ ಸಭೆ ನಡೆಸಿ ವಿಸ್ತೃತವಾಗಿ ಪರಿಶೀಲಿಸಿ ಸರ್ವಸಮ್ಮತ ವರದಿಯನ್ನು ಸಚಿವ ಸಂಪುಟ ಉಪಸಮಿತಿ ಸಲ್ಲಿಸಿತು. 2011ರ ಜನಗಣತಿ ಆಧಾರದ ಮೇಲೆ ಎಡಗೈ ಸಮುದಾಯಕ್ಕೆ ಶೇ.6, ಬಲಗೈ ಸಮುದಾಯಕ್ಕೆ ಶೇ.5.5, ಸ್ಪರ್ಶ ದಲಿತರಿಗೆ ಶೇ.4.5 ಮತ್ತು ಇತರೆ ದಲಿತರಿಗೆ ಶೇ.1ರಷ್ಟು ಒಳಮೀಸಲಾತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಲಂಬಾಣಿ, ಭೋವಿ, ಕೊರಚ, ಕೊರಮ ಜನಾಂಗದವರಿಗೆ ಈ ಹಿಂದೆ ಇದ್ದ ಆತಂಕ ನಿವಾರಣೆಯಾಗಿದ್ದು, ಯಾರಿಗೂ ಅನ್ಯಾಯವಾಗಿಲ್ಲ ಎಂದು ವಿವರಿಸಿದರು.

ಮುಸ್ಲೀಮರ ಮೀಸಲಾತಿಗೆ ಕೊಕ್‌, ಸಿಎಂ ಕೊನೆಯ ಕ್ಯಾಬಿನೆಟ್‌ ಸಭೆಯಲ್ಲಿ ಮಹತ್ವದ ನಿರ್ಣಯ?

ಸಿದ್ದರಾಮಯ್ಯ ವಿರುದ್ಧ ಕಿಡಿ

ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಆಡಳಿತದಲ್ಲಿ ನ್ಯಾ. ಸದಾಶಿವ ಆಯೋಗದ ವರದಿಯನ್ನು ಒಪ್ಪಲು ಮುಂದಾಗಿರಲಿಲ್ಲ. ಅವರು ಯಾಕೆ ಇಷ್ಟು ವರ್ಷ ವರದಿಯನ್ನು ಜಾರಿಗೊಳಿಸಲಿಲ್ಲ. ಎಸ್‌ಸಿಯಲ್ಲಿನ ಉಪಜಾತಿಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ರಚಿಸಿದ ನ್ಯಾ.ಸದಾಶಿವ ಆಯೋಗ ನೀಡಿದ ವರದಿಯನ್ನು ಜಾರಿಗೊಳಿಸದೆ ನಿರಾಶಕ್ತಿ ತೋರಿದ ಕಾಂಗ್ರೆಸ್‌ ಪಕ್ಷದಲ್ಲಿ ಪ್ರಭಾವಿ ದಲಿತ ನಾಯಕರುಗಳಿರುವುದು ಹಾಸ್ಯಸ್ಪದ ಎಂದು ಪ್ರಭು ಚವ್ಹಾಣ್‌ ಕಿಡಿಕಾರಿದರು.

ತಪ್ಪು ಮಾಹಿತಿಗೆ ಕಿವಿ ಕೊಡಬೇಡಿ

ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿ ಒಪ್ಪಿಲ್ಲ. ದಲಿತರಲ್ಲಿನ ಒಳ ಮೀಸಲಾತಿಗೆ ನ್ಯಾ.ಸದಾಶಿವ ಆಯೋಗದ ವರದಿ ಪರಿಗಣಿಸಿಲ್ಲ. 2011ರ ಜನಗಣತಿ ಆಧರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂತ್ರದ ಅನ್ವಯ ಸರ್ವರಿಗೂ ಅನುಕೂಲವಾಗುವಂತೆ ಹಂಚಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನಮ್ಮ ಸಮಾಜದ ಬಗ್ಗೆ ಗೌರವ ಕಾಳಜಿ ಇರುವವರು. ಇದನ್ನು ಸಹಿಸದ ಪ್ರತಿಪಕ್ಷಗಳು ತಪ್ಪು ಮಾಹಿತಿ ನೀಡುತ್ತಿವೆ. ಈ ತಪ್ಪು ಮಾಹಿತಿಗೆ ಸಮಾಜ ಬಾಂಧವರು ಕಿವಿಗೊಡಬಾರದು. ನಮ್ಮ ಸಮುದಾಯ ಎಸ್‌ಸಿಯಲ್ಲಿಯೇ ಮುಂದುವರಿಯಲಿದೆ. ನಿರ್ದಿಷ್ಟ ಹೆಚ್ಚು ಮೀಸಲು ಸಿಗಲಿದೆ ಅಂತ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ. 

Follow Us:
Download App:
  • android
  • ios