ಲಾಕ್ಡೌನ್ ಬಳಿಕ ಜಂಗಲ್ ಲಾಡ್ಜ್‌ಸ್ ಓಪನ್: ಪ್ರಕೃತಿ ಸೌಂದರ್ಯ ಸವಿಯಲು ಮುಗಿಬಿದ್ದ ಪ್ರವಾಸಿಗರು
* ಪ್ರಸ್ತುತ ಕೊರೋನಾದಿಂದ ಶೇ.50 ರಷ್ಟು ಜನಕ್ಕೆ ಮಾತ್ರ ಅವಕಾಶ
* ಸಾರ್ವಜನಿಕರು ಉಳಿದುಕೊಳ್ಳುವ ಎಲ್ಲ ಕೋಣೆಗಳಿಗೆ ಸ್ಯಾನಿಟೈಜ್
* ರೆಸಾರ್ಟ್ ಸೇರಿದಂತೆ ಜೆಎಲ್‌ಆರ್‌ನ ಎಲ್ಲ ಸಿಬ್ಬಂದಿಗೆ ಕೋವಿಡ್ ಲಸಿಕೆ
ಬೆಂಗಳೂರು(ಜು.01): ಲಾಕ್‌ಡೌನ್‌ನಿಂದ ಕಾಂಕ್ರೇಟ್ ನಾಡಲ್ಲಿ ಸಿಲುಕಿಕೊಂಡಿದ್ದ ಜನತೆ ಪ್ರಕೃತಿ ಸೌಂದರ್ಯ ಸವಿಯಲು ಹಾತೊರೆಯುತ್ತಿದ್ದು, ಅರಣ್ಯದ ಮಧ್ಯಭಾಗಗಳಲ್ಲಿ ಉಳಿದು ಪ್ರಕೃತಿ ಸೌಂದರ್ಯ ಸವಿಲು ಜಂಗಲ್ ಲಾಡ್ಜ್‌ಸ್ ಮತ್ತು ರೆಸಾರ್ಟ್ (ಜೆಎಲ್‌ಆರ್) ಮೊರೆ ಹೋಗುತ್ತಿದ್ದಾರೆ.
ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ಜಾರಿಯಿದ್ದ ಲಾಕ್‌ಡೌನ್‌ನಿಂದ ನಗರಗಳಿಂದ ಹೊರ ಹೋಗಲು ಅವಕಾಶ ವಿರಲಿಲ್ಲ. ಇದೀಗ ಆನ್ಲಾಕ್ ಜಾರಿಯಾಗುತ್ತಿದ್ದಂತೆ ನಾಡಿನಿಂದ ಕಾಡಿನತ್ತ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಆನ್ಲಾಕ್ ಘೋಷಣೆ ಬಳಿಕ ಜೂನ್ 21ರಿಂದ ಈವರೆಗೂ 1,400ಕ್ಕೂ ಹೆಚ್ಚು ಮಂದಿ ಜಂಗಲ್ ಲಾಡ್ಜ್‌ಗಳಿಗೆ ಭೇಟಿ ನೀಡಿದ್ದಾರೆ.
ಕಬಿನಿ, ಬಂಡೀಪುರ, ಕೆಗುಡಿ ಸೇರಿದಂತೆ ಸುಮಾರು 26 ಭಾಗಗಳಲ್ಲಿ ಜೆಎಲ್‌ಆರ್ ಲಾಡ್ಜ್‌ಗಳನ್ನು ಹೊಂದಿದ್ದು ಒಟ್ಟು 750ಕ್ಕೂ ಹೆಚ್ಚು ಜನ ಉಳಿದುಕೊಳ್ಳಬಹುದಾಗಿದೆ. ಪ್ರಸ್ತುತ ಕೊರೋನಾದಿಂದ ಶೇ.50 ರಷ್ಟು ಜನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲದೆ, ಆನ್ಲೈನ್ ಮೂಲಕ ಮುಂಗಡವಾಗಿ ಕಾಯ್ದಿರಿಸಲು ಅವಕಾವಿದ್ದು, ಪ್ರಸ್ತುತು ಶೇ.100 ರಷ್ಟುಕೊಠಡಿಗಳನ್ನು ಕಾಯ್ದಿರಿಸಿದ್ದಾರೆ ಎಂದು ಜೆಎಲ್‌ಆರ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜು. 5ರ ಬಳಿಕ ಪ್ರವಾಸಿ ತಾಣಗಳು ಮುಕ್ತ..?
ವಾರಾಂತ್ಯಕ್ಕೆ ವಿಶೇಷ ಕೊಡುಗೆ:
ರಾಜ್ಯದಲ್ಲಿ ವಾರಾಂತ್ಯ ಕಫ್ರ್ಯೂ ಜಾರಿಯಲ್ಲಿದ್ದು, ಶನಿವಾರ ಮತ್ತು ಭಾನುವಾರಗಳಂದು ಜನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಾರಾಂತ್ಯಕ್ಕೆ ವಿಶೇಷ ಪ್ಯಾಕೇಜ್ ಪ್ರಕಟಿಸಿರುವ ಜೆಎಲ್‌ಆರ್, ಶುಕ್ರವಾರ ಸಂಜೆ ರೆಸಾರ್ಟ್ ತಲುಪಿದರೆ ಸೋಮವಾರ ಬೆಳಗ್ಗೆಯವರೆಗೂ ಅಲ್ಲಿಯೇ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಈ ಮೂರು ದಿನಗಳ ಪ್ಯಾಕೇಜ್ ಒಂದು ದಿನದ ಶುಲ್ಕ ಮಾತ್ರ ಪಡೆಯಲಾಗುತ್ತಿದೆ. ಜೊತೆಗೆ, ಸಾಮಾನ್ಯ ದಿನಗಳಲ್ಲಿ ಪ್ರವಾಸಿಗರಿಗಾಗಿ ಶೇ.30 ರಿಂದ 50ರ ವರೆಗೂ ರಿಯಾಯಿತಿ ನೀಡಲಾಗುತ್ತಿದೆ ಎಂದು ಜೆಎಲ್‌ಆರ್‌ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಮಾಹಿತಿ ನೀಡಿದ್ದಾರೆ.
ಕಟ್ಟು ನಿಟ್ಟಿನ ಕ್ರಮ:
ಜೆಎಲ್‌ಆರ್‌ನ ಎಲ್ಲ ರೆಸಾರ್ಟ್‌ಗಳಲ್ಲಿ ಕಟ್ಟುನಿಟ್ಟಾಗಿ ಕೊರೋನಾ ನಿಯಮಗಳನ್ನು ಜಾರಿ ಮಾಡಲಾಗಿದೆ. ಪ್ರವಾಸಿಗರು ಮತ್ತು ಸಿಬ್ಬಂದಿಗೆ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಮಾಡಲು ಸೂಚಿಸಲಾಗಿದೆ. ರೆಸ್ಟೋರೆಂಟ್‌ಗಳಲ್ಲಿ ಸ್ವಚ್ಛತೆ ಕಾಪಾಡುತ್ತಿದ್ದು ಕೊಠಡಿ ಕಾಯ್ದಿರಿಸಿದ ಪ್ರವಾಸಿಗರು ಮತ್ತು ಸಿಬ್ಬಂದಿ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲದೆ, ಪ್ರತಿಯೊಬ್ಬರಿಗೂ ದೇಹದ ಉಷ್ಣಾಂಶ ಪರಿಶೀಲಿಸಿ ರೆಸಾರ್ಟ್ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲದೆ, ಸಾರ್ವಜನಿಕರು ಉಳಿದುಕೊಳ್ಳುವ ಎಲ್ಲ ಕೋಣೆಗಳನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಲಾಗಿದೆ. ಜೊತೆಗೆ, ರೆಸಾರ್ಟ್ ಸೇರಿದಂತೆ ಜೆಎಲ್‌ಆರ್‌ನ ಎಲ್ಲ ಸಿಬ್ಬಂದಿಗೆ ಲಸಿಕೆ ಹಾಕಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಮನೆ ಮಾದರಿ ಆಹಾರ:
ಜೆಎಲ್‌ಆರ್‌ಗಳಲ್ಲಿ ಪ್ರವಾಸ ಕೈಗೊಳ್ಳುವವರಿಗೆ ಅತ್ಯಂತ ಉತ್ತಮ ಗುಣಮಟ್ಟದ ಸರಳ ಆಹಾರ ಪದ್ದತಿ ಇರಲಿದೆ. ಊಟದೊಂದಿಗೆ ಆಯಾ ಭಾಗಗಳಲ್ಲಿನ (ಬಂಡೀಪುರಲ್ಲಿ ಚಾಮರಾಜನಗರದ ವಿಶೇಷ ಖಾದ್ಯ) ವಿಶೇಷ ಖಾದ್ಯ ನೀಡಲಾಗುತ್ತಿದೆ. ಸಸ್ಯಹಾರ ಮತ್ತು ಮಾಂಸಹಾರದ ಜೊತೆಗೆ, ಉತ್ತರ ಮತ್ತು ದಕ್ಷಿಣ ಭಾರತದ ಒಂದೆರಡು ತಿಂಡಿಗಳನ್ನು ಸೇರಿಸಲಾಗುತ್ತಿದೆ. ಕೊರೋನಾ ಮುನ್ನೆಚ್ಚರಿಕಾ ಕ್ರಮವಾಗಿ ಸ್ವಯಂ ಸೇವಾ (ಬಫೆಟ್)ವ್ಯವಸ್ಥೆ ಇದ್ದು, ಮನೆಯಲ್ಲಿ ಸಿದ್ದಪಡಿಸಿದ ರೀತಿಯ ಆಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಕ್ಷೇತ್ರಕ್ಕೆ ಸರ್ಕಾರ ನೆರವು: ಸಚಿವ ಯೋಗೇಶ್ವರ್
ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲಿ ಭಾಗಿ:
ಕನ್ನಡಪ್ರಭ- ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿ ನಡೆಸುತ್ತಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ಜೆಎಲ್‌ಆರ್ ಕೈ ಜೋಡಿಸಿದೆ. ಈ ಸಂಸ್ಥೆಯ ಹೋಟೆಲ್‌ಗಳ ಮೂಲಕ ಅಭಿಯಾನದಲ್ಲಿ ಭಾಗಿಯಾಗುವವರಿಗೆ ಆತಿಥ್ಯ ನೀಡಲಾಗುತ್ತಿದೆ. ಈ ಅಭಿಯಾನದಲ್ಲಿ ನಟ ಮುರಳಿ ಜೆಎಲ್‌ಆರ್ ಸಂಸ್ಥೆಯ ರೆಸಾರ್ಟ್‌ಗಳಲ್ಲಿ ಉಳಿದು ಕೊಳ್ಳುತ್ತಿದ್ದು, ಅರಣ್ಯ ವಾಸಿಗಳು ಮತ್ತು ಕಾಡಂಚಿನ ಪ್ರದೇಶಗಳಲ್ಲಿ ವನ್ಯಜೀವಿ ಸಂರಕ್ಷಣೆ ಕುರಿತು ಅರಿವು ಮೂಡಿಸುತ್ತಿದ್ದಾರೆ.
ಕೊರೋನಾ ಆನ್ಲಾಕ್ ಘೋಷಣೆ ಬಳಿಕ ಜೆಎಲ್‌ಆರ್‌ನ ಎಲ್ಲ ರೆಸಾರ್ಟ್‌ಗಳು ಪುನರಾರಂಭವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಆಗಮಿಸುತ್ತಿದ್ದಾರೆ. ವಿಶೇಷ ರಿಯಾತಿಗಳನ್ನು ಘೋಷಣೆ ಮಾಡಿದ್ದು ಪರಿಸರದ ಸೌಂದರ್ಯ ಪ್ರಿಯರಿಗೆ ಸುವರ್ಣಾವಕಾಶವಾಗಿದೆ ಎಂದು ಜೆಎಲ್‌ಆರ್ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ತಿಳಿಸಿದ್ದಾರೆ.