ಜು. 5ರ ಬಳಿಕ ಪ್ರವಾಸಿ ತಾಣಗಳು ಮುಕ್ತ..?
* ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಕಾರ್ಯ ಆರಂಭ
* ಜಲಸಾಹಸಿ ಕ್ರೀಡೆಗಳಿಗೆ ಅವಕಾಶವಿಲ್ಲ
* ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸಿಗರ ಆಗಮನಕ್ಕೆ ನಿರ್ಬಂಧಿಸಿದ್ದ ಜಿಲ್ಲಾಡಳಿತ
ಜಿ.ಡಿ. ಹೆಗಡೆ
ಕಾರವಾರ(ಜೂ.30): ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುದುರಿಕೊಂಡಿದ್ದ ಪ್ರವಾಸೋದ್ಯಮ ಚಟುವಟಿಕೆಗಳು ಜುಲೈ ಮೊದಲ ವಾರದಲ್ಲಿ ಗರಿಗೆದರಿಕೊಳ್ಳುವ ಸಾಧ್ಯತೆಯಿದೆ.
ಕೋವಿಡ್ 2ನೇ ಅಲೆಯಿಂದಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಪ್ರವಾಸಿಗರ ಆಗಮನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಕೋವಿಡ್ ಸೋಂಕು ಕಡಿಮೆಯಾಗುತ್ತಿದ್ದು, ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರಿಗೆ ಜುಲೈ ತಿಂಗಳ ಮೊದಲ ವಾರದಲ್ಲಿ ಪ್ರವೇಶಕ್ಕೆ ಅನುಮತಿಸುವ ಸಾಧ್ಯತೆಯಿದೆ.
ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಾ ಬಂದ ಕಾರಣ ಸರ್ಕಾರ ವಿಧಿಸಿದ್ದ ನಿರ್ಬಂಧಗಳನ್ನು ಹಂತ-ಹಂತವಾಗಿ ಸಡಿಲಿಕೆ ಮಾಡುತ್ತಿದ್ದು, ಜಿಲ್ಲೆಗೆ ಸಂಬಂಧಿಸಿದಂತೆ ಜುಲೈ ಮೊದಲ ವಾರದಲ್ಲಿ ಪ್ರವಾಸಿ ತಾಣಗಳಿಗೆ ಸಾರ್ವಜನಿಕರು ಪ್ರವೇಶಿಸಲು ಅನುಮತಿ ನೀಡಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯಿಂದ ಚಿಂತನೆ ನಡೆಸಲಾಗುತ್ತಿದೆ.
ಉಂಚಳ್ಳಿ, ಸಾತೊಡ್ಡಿ, ಮಾಗೋಡ ಒಳಗೊಂಡು ವಿವಿಧ ಜಲಪಾತ, ಯಾಣ, ರವೀಂದ್ರನಾಥ ಟಾಗೋರ ಕಡಲ ತೀರ, ಮುರ್ಡೇಶ್ವರ, ಗೋಕರ್ಣ, ಕಾಸರಗೋಡ ಕಡಲ ತೀರ... ಹೀಗೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಚಟುವಟಿಕೆಗಳು ಗರಿಗೆದರಿಕೊಳ್ಳಲಿದೆ. ಕಳೆದ ಹಲವಾರು ತಿಂಗಳಿನಿಂದ ಪ್ರವಾಸಿಗರಿಲ್ಲದೇ ಖಾಲಿ ಖಾಲಿಯಾಗಿದ್ದ ತಾಣಗಳಲ್ಲಿ ಕೆಲವೇ ದಿನದಲ್ಲಿ ಪ್ರವಾಸಿಗರಿಂದ ತುಂಬಿಕೊಳ್ಳುವ ಸಾಧ್ಯತೆಯಿದೆ.
ಜೋಗ ವೀಕ್ಷಣೆಗೆ ಮುಕ್ತ ಅವಕಾಶ : ಮಾರ್ಗಸೂಚಿ ಪಾಲನೆ ಕಡ್ಡಾಯ
ಟಾಗೋರ ಕಡಲ ತೀರ, ಮುರ್ಡೇಶ್ವರ, ಗೋಕರ್ಣದ ಓಂ ಕಡಲ ತೀರ, ಯಾಣ, ಸಾತೋಡ್ಡಿ, ಮಾಗೋಡ ಉಂಚಳ್ಳಿ ಒಳಗೊಂಡು ವಿವಿಧ ಕಡೆ 2020ನೇ ಸಾಲಿನಲ್ಲಿ ದೇಶಿ ಪ್ರವಾಸಿಗರು 22,75,086, ವಿದೇಶಿ ಪ್ರವಾಸಿಗರು 3480 ಒಟ್ಟೂ22,78,566 ಪ್ರವಾಸಿಗರು ಆಗಮಿಸಿದ್ದರು. 2021 ಜನವರಿಯಿಂದ ಮೇ ತಿಂಗಳ ವರೆಗೆ ದೇಶಿ ಪ್ರವಾಸಿಗರು 15,56,215, ವಿದೇಶಿ 260, ಒಟ್ಟೂ15,56,247 ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದರು.
ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿನ ಅನ್‌ಲಾಕ್ ಆಗುತ್ತಿದ್ದಂತೆ ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮಳೆಗಾಲದಲ್ಲಿ ವಿಶೇಷವಾಗಿ ಜಲಪಾತಗಳು ಮೈತುಂಬಿ ಹರಿಯುವುದರಿಂದ ಅದನ್ನು ನೋಡಲು ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ಈ ಅವಧಿಯಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳುವುದಕ್ಕೆ ವಿಧಿಸಿದ್ದ ನಿಷೇಧ ವಾಪಸ್ ಪಡೆಯುವ ಸಾಧ್ಯತೆಯಿದೆ.
ಕಾರವಾರದ ಯುದ್ಧನೌಕೆ ಸಂಗ್ರಹಾಲಯ, ರಾಕ್ ಗಾರ್ಡನ್ ಮೊದಲಾದ ಕಡೆ ಸ್ವಚ್ಛತಾ ಕಾರ್ಯ ಮಾಡಿಕೊಳ್ಳಲು ಸಂಬಂಧಿಸಿದವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಮುರ್ಡೇಶ್ವರ, ಗೋಕರ್ಣ, ದಾಂಡೇಲಿಗಳಲ್ಲಿ ಜಲಸಾಹಸಿ ಕ್ರೀಡೆಗಳು ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, ಮಳೆಗಾಲವಾದ್ದರಿಂದ ಇವುಗಳ ಚಟುವಟಿಕೆ ಅವಕಾಶ ಇರುವುದಿಲ್ಲ. ಹೀಗಾಗಿ ಕೇವಲ ಕಡಲ ತೀರಗಳು, ಜಲಪಾತ, ಧಾರ್ಮಿಕ ಕ್ಷೇತ್ರ ಇತ್ಯಾದಿ ಕಡೆಗಳಿಗೆ ಪ್ರವಾಸಿಗರ ಆಗಮನಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ.
ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವಾಸಿಗರ ಆಗಮನವನ್ನು ಜಿಲ್ಲಾಡಳಿತ ನಿರ್ಬಂಧಿಸಿತ್ತು. ಈಗ ಕೋವಿಡ್ ಸೋಂಕಿನ ಪ್ರಕರಣ ಕಡಿಮೆಯಾಗುತ್ತಿದ್ದು, ಜುಲೈ 5 ಬಳಿಕ ಪ್ರವಾಸಿ ತಾಣಗಳಿಗೆ ಮುಕ್ತ ಅವಕಾಶ ನೀಡಲು ಚಿಂತನೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಜಿಲ್ಲಾಧಿಕಾರಿ ಜತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅವಕಾಶ ನೀಡಿದರೂ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಸ್. ಪುರುಷೋತ್ತಮ ತಿಳಿಸಿದ್ದಾರೆ.