Asianet Suvarna News Asianet Suvarna News

ಕಾಂಗ್ರೆಸ್‌ ಗ್ಯಾರಂಟಿ: ಅನ್ನಭಾಗ್ಯದಡಿ ಹಣ ನೀಡುವ ಯೋಜನೆಗೆ ನಾಳೆ 1 ವರ್ಷ..!

ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಮಾಸಿಕ ತಲಾ 10ಕೆ.ಜಿ. ಅಕ್ಕಿನೀಡುವ ಯೋಜನೆ ಇದಾಗಿದ್ದು, ಯೋಜನೆ ಜಾರಿಗೆ ಅಗತ್ಯವಿರುವಷ್ಟು ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ 2023ರ ಜುಲೈ 10ರಂದು ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ಪೈಕಿ ಐದು ಕೆ.ಜಿ. ಅಕ್ಕಿ ಬದಲಿಗೆ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚಾಲನೆ ನೀಡಿತ್ತು.  

july 10th 1 year of Annabhagya money giving scheme in karnataka grg
Author
First Published Jul 9, 2024, 12:17 PM IST | Last Updated Jul 9, 2024, 1:01 PM IST

ಸಂಪತ್ ತರೀಕೆರೆ

ಬೆಂಗಳೂರು(ಜು.09):  ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಿಗೆ ಡಿಬಿಟಿ ಮೂಲಕ ನಗದು ವರ್ಗಾವಣೆ ವ್ಯವಸ್ಥೆ ಜಾರಿಗೆ ಬಂದು ಜು.10ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಈವರೆಗೆ ಸುಮಾರು 3.50 ಕೋಟಿಗೂ ಹೆಚ್ಚು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 7 ಸಾವಿರ ಕೋಟಿ ರು.ಗಳಿಗೂ ಅಧಿಕ ಮೊತ್ತವನ್ನು ಜಮೆ ಮಾಡಲಾಗಿದೆ.

ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಮಾಸಿಕ ತಲಾ 10ಕೆ.ಜಿ. ಅಕ್ಕಿನೀಡುವ ಯೋಜನೆ ಇದಾಗಿದ್ದು, ಯೋಜನೆ ಜಾರಿಗೆ ಅಗತ್ಯವಿರುವಷ್ಟು ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ 2023ರ ಜುಲೈ 10ರಂದು ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ಪೈಕಿ ಐದು ಕೆ.ಜಿ. ಅಕ್ಕಿ ಬದಲಿಗೆ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚಾಲನೆ ನೀಡಿತ್ತು.  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಅನ್ನ ಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಅಂತ್ಯೋದಯ, ಬಿಪಿಎಲ್ ಸೇರಿದಂತೆ ಒಟ್ಟು 1.13 ಕೋಟಿ ಕಾರ್ಡ್‌ಗಳ ಪೈಕಿ ಒಂದು ಕೋಟಿಗೂ ಹೆಚ್ಚು ಕಾರ್ಡ್‌ಗಳ 3.50 ಕೋಟಿಗೂ ಅಧಿಕ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು 660 ಕೋಟಿ ರು. ಜಮೆ ಮಾಡಲಾಗುತ್ತಿದೆ.

ಬಿಜೆಪಿಯವರು ಭಾರತ್ ಅಕ್ಕಿ ಸ್ಕೀಂ ಲೋಕಸಭೆ ಎಲೆಕ್ಷನ್‌ಗಾಗಿ ತಂದದ್ದು: ಸಿಎಂ ಸಿದ್ದರಾಮಯ್ಯ

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಮೂರ್ನಾಲ್ಕು ತಿಂಗಳು ಫಲಾನುಭವಿಗಳ ಖಾತೆಗೆ ಹೆಚ್ಚುವರಿ ಅಕ್ಕಿಯ ಹಣ ಜಮೆಯಾ ಗಿರಲಿಲ್ಲ. ಆಹಾರ ಇಲಾಖೆ ಹೊಸ ಸಾಫ್ ವೇರ್‌ ಪರಿಷ್ಕರಿಸಿದ ಬಳಿಕ ಮೇ ತಿಂಗಳವರೆಗಿನ ಹಣವನ್ನು ಜಮೆ ಮಾಡಲಾಗಿದೆ. ಜೂನ್ ತಿಂಗಳಿನ ಹಣ ಜಮೆಗೆ ಬಾಕಿ ಉಳಿದಿದ್ದು ಈ ತಿಂಗಳ 10ರೊಳಗೆ ಪೂರ್ಣ ಮೊತ್ತ ಜಮೆ ಮಾಡುವುದಾಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ನೀಡಿದ್ದ ಆಶ್ವಾಸನೆಯಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಅನ್ನಭಾಗ್ಯ ಸೇರಿ ಐದುಗ್ಯಾರಂಟಿಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಅದರಂತೆ ಅನ್ನಭಾಗ್ಯ ಯೋಜನೆಯಡಿ ಹತ್ತು ಕೆ.ಜಿ. ಅಕ್ಕಿ ಕೊಡಬೇಕಾಗಿತ್ತು. ಆದರೆ, ಕೇಂದ್ರ ಸರ್ಕಾರ ಉಚಿತವಾಗಿ 5 ಕೆ.ಜಿ. ಮಾತ್ರ ಹಂಚಿಕೆ ಮಾಡುತ್ತಿದ್ದು, ಹೆಚ್ಚುವರಿ 5 ಕೆ.ಜಿ. ಅಕ್ಕಿ ಕೊಡಲು ನಿರಾಕರಿಸಿತ್ತು. ಈ ಕಾರಣ ವಿವಿಧ ರಾಜ್ಯಗಳ ಮುಖ್ಯಮಂತ್ರಿಯವರಿಗೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿ, ಸಾಕಷ್ಟು ಪ್ರಯತ್ನಪಟ್ಟರೂ ಹೆಚ್ಚುವರಿ ಅಕ್ಕಿ ಸಿಗಲಿಲ್ಲ. ಇದೇ ಕಾರಣಕ್ಕೆ ಕೇಂದ್ರ-ರಾಜ್ಯಗಳ ನಡುವೆ ಸಾಕಷ್ಟುಜಟಾಪಟಿ ನಡೆಯಿತು. ಅಂತಿಮವಾಗಿ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಅಕ್ಕಿ ಬದಲು ನೇರ ನಗದು ವರ್ಗಾವಣೆ ಮಾಡಲು ತೀರ್ಮಾನಿಸಿ, 2023ರ ಜುಲೈ 10 ರಿಂದ ಜಾರಿಗೆ ತರಲಾಯಿತು.

ನೂತನ ಸಾಫ್ಟ್‌ವೇ‌ರ್: 

ಡಿಬಿಟಿ ಮುಖೇನ ಕಾರ್ಡ್‌ದಾರರ ಖಾತೆಗೆ ಹಣ ವರ್ಗಾವಣೆ ಮಾಡಲು ದೀರ್ಘ ಪ್ರಕ್ರಿಯೆ ನಡೆಯುತ್ತದೆ. ಮೊದಲು ಎನ್‌ಐಸಿ ವೆಬ್‌ಸೈಟ್‌ನಲ್ಲಿ ಕಾರ್ಡ್‌ಗಳನ್ನು ನಮೂದಿಸಬೇಕು. ಬಳಿಕಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಡಿಬಿಟಿ ಪೋರ್ಟಲ್, ಖಜಾನೆ ಇಲಾಖೆಯ ಕೆ2 ಪೋರ್ಟಲ್‌ನಲ್ಲಿ ಅರ್ಹತೆ ಇರುವ ಕಾರ್ಡ್‌ಗಳಿಗೆ ಅನುಮೋದನೆ ಪಡೆಯಬೇಕು. ನಂತರ, ಆರ್‌ಬಿಐ ಅನುಮತಿ ಸೇರಿ ಬೇರೆ ಬೇರೆ ಪ್ರಕ್ರಿಯೆ ಮುಗಿದ ಬಳಿಕ ಕಾರ್ಡ್ ದಾರರ ಖಾತೆಗೆ ನೇರವಾಗಿ ನಗದು ವರ್ಗಾವಣೆ ಮಾಡಬೇಕಿತ್ತು. ಈ ಪ್ರಕ್ರಿಯೆಗೆ ಸಾಕಷ್ಟು ಸಮಯ ಬೇಕಾಗುತ್ತಿತ್ತು. ಇದನ್ನು ತಪ್ಪಿಸಲು ಆಹಾರ ಇಲಾಖೆ ಹೊಸದಾಗಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದೆ. ಹೀಗಾಗಿ, ಇನ್ನುಮುಂದೆ ನಿಗದಿತ ಸಮಯದಲ್ಲಿ ಕಾರ್ಡ್ ದಾರರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

Latest Videos
Follow Us:
Download App:
  • android
  • ios