ಧರ್ಮಸ್ಥಳದ ಬಂಗ್ಲಾಗುಡ್ಡದಲ್ಲಿ ನಡೆದ ಉತ್ಖನನದಲ್ಲಿ ಪುರುಷನ ಅಸ್ಥಿಪಂಜರ ಪತ್ತೆಯಾಗಿದೆ. ಉಡುಪು ಮತ್ತು ಹಗ್ಗ ಪತ್ತೆಯಾಗಿರುವುದರಿಂದ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮಹಜರು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮುಂದಿನ ತನಿಖೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಬೆಳ್ತಂಗಡಿ: ಬಹುಚರ್ಚಿತ ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿರುವ ಪ್ರಕರಣದಲ್ಲಿ ಇಂದಿನ ಉತ್ಖನನ ಕಾರ್ಯಾಚರಣೆಯು ಮಹತ್ವಪೂರ್ಣ ಬೆಳವಣಿಗೆಯೊಂದಿಗೆ ಕೊನೆಗೊಂಡಿದೆ. ಬಂಗ್ಲಾಗುಡ್ಡ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಭೂಮಿಯ ಮೇಲ್ಮೈಯಲ್ಲಿ ಒಂದು ಸಂಪೂರ್ಣ ಅಸ್ಥಿಪಂಜರ ಪತ್ತೆಯಾಗಿದೆ. ಈ ಅಸ್ಥಿಪಂಜರವು ದೂರುದಾರ ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳದಲ್ಲಿ ಸಿಗದೆ ಬೇರೆ ಪಾಯಿಂಟ್‌ನಲ್ಲಿ ಪತ್ತೆಯಾಗಿದೆ. ಪಾಯಿಂಟ್ ನಂ.11 ಕ್ಕೆ ಬದಲಾಗಿ ಹೊಸ ಜಾಗದಲ್ಲಿ ಕಳೇಬರಹ ಸಿಕ್ಕಿದ್ದು. ಈ ಅಸ್ಥಿಪಂಜರದ ಬಳಿಯಲ್ಲಿ ಗಂಡಸಿನ ಉಡುಪುಗಳು ಮತ್ತು ಹಗ್ಗವೂ ಪತ್ತೆಯಾದ ಹಿನ್ನೆಲೆಯಲ್ಲಿ, ವ್ಯಕ್ತಿಯೊಬ್ಬ ಆತ್ಮ1ಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ದುರ್ಘಟನೆ ಒಂದೂವರೆ ವರ್ಷದ ಹಿಂದೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಧರ್ಮಸ್ಥಳ ಕಾಡಿನ ಒಳಭಾಗದಲ್ಲಿ ನಡೆದ ಮಹಜರು ಪ್ರಕ್ರಿಯೆ ಕೂಡ ಇಂದು ಸಂಪೂರ್ಣವಾಗಿ ಮುಕ್ತಾಯಗೊಂಡಿತು. ವೈದ್ಯಕೀಯ ತಜ್ಞರ ತಂಡವು ಅಸ್ಥಿಪಂಜರ ಹಾಗೂ ಮೂಳೆಗಳ ಭಾಗಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಿ,'ಸೇಫ್ ಎವಿಡೆನ್ಸ್ ಬಾಕ್ಸ್'ಗಳಲ್ಲಿ ಪ್ಯಾಕ್ ಮಾಡಿ ಹೊರಟಿದೆ.
ಎಸ್ಐಟಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ವೈದ್ಯರ ತಂಡ ಕಾರ್ಯಾಚರಣೆಯ ಎಲ್ಲ ಹಂತಗಳನ್ನು ಪೂರ್ಣಗೊಳಿಸಿ, ಕಾಡಿನಿಂದ ಹೊರ ಬಂದು ಬೆಳ್ತಂಗಡಿ ಎಸ್ಐಟಿ ಕಚೇರಿಗೆ ತೆರಳಿದೆ. ಇಲ್ಲಿವರೆಗೆ ಆರನೇ ದಿನದ ಉತ್ಖನನ ಕಾರ್ಯಾಚರಣೆ ಆಗಿದೆ.
ಇದರ ನಡುವೆ, ಬಂಗ್ಲಾಗುಡ್ಡದಲ್ಲಿ ನಡೆಯುತ್ತಿರುವ ಇತರ ಪಾಯಿಂಟ್‌ಗಳಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವೂ ಸದ್ಯಕ್ಕೆ ಸ್ಥಗಿತವಾಗಿದೆ. ಅನಾಮಿಕ ದೂರುದಾರ ಹೇಳಿರುವ 11, 12, 13 ಪಾಯಿಂಟ್‌ಗಳ ಉತ್ಖನನ ಕಾರ್ಯ ನಾಳೆ ಆಗುವ ಸಾಧ್ಯತೆ ಇದೆ. ಇಂದು ಊಟದ ಬ್ರೇಕ್ ಕೂಡ ತೆಗೆದುಕೊಳ್ಳದ ಅಧಿಕಾರಿಗಳು ತೀವ್ರ ಕಾರ್ಯಾಚರಣೆ ನಡೆಸಿ ಪರಿಶೀಲಿಸಿದರು. ದೂರುದಾರ ಪಾಯಿಂಟ್ ನಂಬರ್ 11ರ ಬದಲು ಬೇರೆ ಜಾಗ ತೋರಿಸಿದ್ದು, ಅಲ್ಲಿ ಉತ್ಖನನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮುಂದಿನ ಹಂತದಲ್ಲಿ ಮಾದರಿಗಳನ್ನು ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸುವ ಮೂಲಕ ಸತ್ಯಾಂಶ ಬಯಲಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಆರನೇ ದಿನದ ಕಾರ್ಯಾಚರಣೆ ಅಂತ್ಯಗೊಂಡಿದ್ದು, ನಾಳೆ 7ನೇ ದಿನ ಯಾವ ರೀತಿಯಲ್ಲಿ ಕಾರ್ಯಾಚರಣೆ ಮುಂದುವರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
