ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು[ಜ.15]: ಇತ್ತೀಚೆಗೆ ರಾಜ್ಯದಲ್ಲಿ ಸಿಕ್ಕಿಬಿದ್ದ ‘ಜಿಹಾದಿ ಗ್ಯಾಂಗ್‌’ ವಿರುದ್ಧ ಸಿಸಿಬಿ ತನಿಖೆ ಚುರುಕುಗೊಂಡಂತೆ ರೋಚಕ ಸಂಗತಿಗಳು ಹೊರಬರುತ್ತಿದ್ದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಐಸಿಸ್‌ ಉಗ್ರರಿಗೆ ತರಬೇತಿ ನೀಡಲು ಜಮೀನು ಖರೀದಿಸುವುದಕ್ಕೆ ಇವರು ಯತ್ನಿಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಗುಂಡ್ಲುಪೇಟೆ ತಾಲೂಕಿನಲ್ಲಿ ಭೂಮಿ ಕೊಳ್ಳುವ ಹೊಣೆಗಾರಿಕೆಯನ್ನು ತನ್ನ ನಂಬಿಕಸ್ಥ ಬಂಟ ಮನ್ಸೂರ್‌ ಖಾನ್‌ ಎಂಬಾತನಿಗೆ ರಾಜ್ಯದ ಐಸಿಸ್‌ ಸಂಘಟನೆಯ ‘ಕಮಾಂಡರ್‌’ ಮೆಹಬೂಬ್‌ ಪಾಷ ವಹಿಸಿದ್ದ. ಈ ಸೂಚನೆ ಮೇರೆಗೆ ಮನ್ಸೂರ್‌, ಗುಂಡ್ಲುಪೇಟೆಗೆ ತೆರಳಿ ಜನ ಸಂಚಾರದಿಂದ ದೂರವಿರುವ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಜಾಗಕ್ಕೆ ಹುಡುಕಾಟ ನಡೆಸಿದ್ದ ಎನ್ನಲಾಗಿದೆ.

ಇತ್ತೀಚೆಗೆ ಪಾಷನ ಸಂಪರ್ಕ ಜಾಲದಲ್ಲಿದ್ದ ಇಬ್ಬರನ್ನು ಗುಂಡ್ಲುಪೇಟೆಯಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ವಿಚಾರಿಸಿದಾಗ ಜಮೀನು ಖರೀದಿ ರಹಸ್ಯ ಬಯಲಾಗಿದೆ. ಆದರೆ ಪ್ರಾಥಮಿಕ ಹಂತದಲ್ಲಿದ್ದ ಕಾರಣ ಜಮೀನು ವ್ಯವಹಾರ ಸ್ಥಗಿತವಾಗಿದೆ. ತನ್ನ ಹಿಂಬಾಲಕರು ಸೆರೆಯಾದ ನಂತರ ಭೂಗತನಾಗಿರುವ ಮೆಹಬೂಬ್‌ ಪಾಷ ಹಾಗೂ ಮನ್ಸೂರ್‌ನ ಬಂಧನಕ್ಕೆ ತನಿಖೆ ಚುರುಕುಗೊಳಿಸಲಾಗಿದೆ ಎಂದು ಸಿಸಿಬಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ರಾಜ್ಯದಲ್ಲಿ ‘ಉಗ್ರ’ ಸಭೆ! ಕರ್ನಾಟಕದಲ್ಲಿ ಹಬ್ಬುತ್ತಿದೆ ಭಯೋತ್ಪಾದಕ ಜಾಲ

ಮುಸ್ಲಿಮರಲ್ಲಿ ಭೀತಿ ಹುಟ್ಟಿಸಲು ಯತ್ನ:

ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್‌ ಸೇಟ್ಸ್‌ (ಐಸಿಸ್‌) ಬಲವರ್ಧನೆಗೆ ಯೋಜಿಸಿದ್ದ ತಮಿಳುನಾಡಿನ ಖಾಜಾ ಮೊಹಿದ್ದೀನ್‌, ಕರ್ನಾಟಕದ ಹೊಣೆಗಾರಿಕೆಯನ್ನು ಬೆಂಗಳೂರಿನ ಸದ್ದುಗುಂಟೆಪಾಳ್ಯದ ಮೆಹಬೂಬ್‌ ಪಾಷಗೆ ವಹಿಸಿದ್ದ. ಬಳಿಕ ಪಾಷ, ಸ್ಥಳೀಯವಾಗಿ ಟ್ರಸ್ಟ್‌ ಸ್ಥಾಪಿಸಿದ್ದ. ಇದರ ಮೂಲಕ ತನ್ನ ಸಂಬಂಧಿಕರೂ ಸೇರಿದಂತೆ ಯುವಕರನ್ನು ಸೆಳೆದು, ಪ್ರಸ್ತುತ ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಭೀತಿಯ ವಾತಾವರಣವಿದೆ ಎಂದು ಯುವ ಸಮೂಹದಲ್ಲಿ ಐಸಿಸ್‌ ಪರ ಒಲವು ಮೂಡಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಐಸಿಸ್‌ಗೆ ಹೊಸ ಸದಸ್ಯರ ನೇಮಕಾತಿ ಬಳಿಕ ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು ಸಹ ಖಾಜಾ ಸೂಚನೆ ಮೇರೆಗೆ ಪಾಷ ಸಿದ್ಧತೆ ನಡೆಸಿದ್ದ. ತನ್ನ ಟ್ರಸ್ಟ್‌ ಹೆಸರಿನಲ್ಲಿ ಗುಂಡ್ಲುಪೇಟೆ ತಾಲೂಕಿನಲ್ಲಿ ಸಾಮಾಜಿಕ ಚಟುವಟಿಕೆಯ ನೆಪದಲ್ಲಿ ಭೂಮಿ ಖರೀದಿಸಿ, ಅನಂತರ ಅಲ್ಲಿ ಟ್ರೇನಿಂಗ್‌ ಕ್ಯಾಂಪ್‌ ಕಟ್ಟುವುದು ಆತನ ಯೋಜನೆಯಾಗಿತ್ತು. ಈ ಕಾರ್ಯಕ್ಕೆ ಮನ್ಸೂರ್‌ನನ್ನು ನಿಯೋಜಿಸಿದ ಪಾಷ, ನಂತರ ಮನ್ಸೂರ್‌ ಮೂಲಕವೇ ಗುಂಡ್ಲುಪೇಟೆ ತಾಲೂಕಿನಲ್ಲಿ ಭೂಮಿ ಖರೀದಿ ವ್ಯವಹಾರಕ್ಕೆ ಯತ್ನಿಸಿದ್ದ ಎಂದು ಮೂಲಗಳು ಮಾಹಿತಿ ನೀಡಿವೆ.

ಲ್ಯಾಪ್‌ಟಾಪ್‌ ನೀಡಿದ ಸುಳಿವು:

ಬೆಂಗಳೂರಿನಲ್ಲಿ ಪಾಷಾನ ಮೂವರು ಸಹಚರರನ್ನು ಸಿಸಿಬಿ ಸಹಕಾರದಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದರು. ಆ ಶಂಕಿತರಿಂದ ಪಿಸ್ತೂಲ್‌, ಜೀವಂತ ಗುಂಡುಗಳು ಮಾತ್ರವಲ್ಲದೆ ಲ್ಯಾಪ್‌ಟಾಪ್‌ ಜಪ್ತಿಯಾಗಿತ್ತು. ಇದರಲ್ಲಿ ತಮ್ಮ ಸಂಘಟನೆಯ ಕುರಿತು ಶಂಕಿತರು ರೂಪಿಸಿದ್ದ ನೀಲನಕ್ಷೆ ಸಿಸಿಬಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ.

ಗುಂಡ್ಲುಪೇಟೆಯಲ್ಲಿ ಉದ್ದೇಶಿತ ತರಬೇತಿ ಶಿಬಿರದ ಸುಳಿವು ಲಭಿಸಿತು. ಇದರ ಬೆನ್ನುಹತ್ತಿದಾಗ ಮನ್ಸೂರ್‌ ಸಂಪರ್ಕದಲ್ಲಿ ಸ್ಥಳೀಯ ಮೌಲ್ವಿ ಹಾಗೂ ಸ್ಥಳೀಯ ರಿಯಲ್‌ ಎಸ್ಟೇಟ್‌ ಏಜೆಂಟ್‌ ಮಾಹಿತಿ ಸಿಕ್ಕಿತು. ಆಗ ಜಮೀನು ಖರೀದಿಗೆ ಯತ್ನಿಸಿದ ವಿಷಯ ಬೆಳಕಿಗೆ ಬಂದಿತು. ಈ ಭೂ ವ್ಯವಹಾರವು ಪ್ರಾಥಮಿಕ ಹಂತದಲ್ಲಿರುವಾಗಲೇ ಮೆಹಬೂಬ್‌ ಪಾಷನ ಬೆಂಬಲಿಗರು ಸೆರೆಯಾದರು. ಹಾಗಾಗಿ ಯೋಜನೆ ನಿಂತು ಹೋಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.