ಬಿಜೆಪಿ ಪ್ರತಿಭಟನೆಯಿಂದ ಗಡಗಡ ನಡುಗುತ್ತಿದ್ದೇನೆ: ಡಿಕೆಶಿ| ಕಲ್ಲಡ್ಕ ಪ್ರಭಾಕರ ಭಟ್ ಯಾರು? ನನಗೆ ಗೊತ್ತಿಲ್ಲ| ಕನಕಪುರಕಕ್ಕೆ ಯಾರು ಬೇಕಾದರೂ ಬರಬಹುದು
ಬೆಂಗಳೂರು[ಜ.14]: ಕನಕಪುರ ಚಲೋ ಹಮ್ಮಿಕೊಂಡಿರುವ ಬಿಜೆಪಿಯ ನಡೆಯಿಂದ ಗಡಗಡ ನಡುಗುತ್ತಿದ್ದೇನೆ. ಈಗಲೂ ನಡುಗುತ್ತಾ ಅವರಿಗೆ ಹೆದರಿ ಮನೆಯಿಂದ ಹೊರಗಡೆ ಬಂದಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಿಜೆಪಿ ನಾಯಕರಿಗೆ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.
ಬಿಜೆಪಿಯವರ ಬಳಿ ಅಧಿಕಾರ ಇದೆ. ಅವರು ಏನು ಬೇಕಾದರೂ ಮಾಡಲಿ. ನನ್ನ ಕ್ಷೇತ್ರದಲ್ಲಿ ಅಶಾಂತಿ ಉಂಟು ಮಾಡಿದರೂ ನಾನು ಮಾತನಾಡುವುದಿಲ್ಲ. ನನ್ನ ಕಾರ್ಯಕರ್ತರಿಗೂ ಅವರು ಏನೇ ಮಾತನಾಡಿದರೂ ಯಾರೂ ಪ್ರತಿಕ್ರಿಯಿಸಬೇಡಿ ಎಂದು ಹೇಳಿದ್ದೇನೆ. ಬಿಜೆಪಿಯವರು ರಾಜಕೀಯಕ್ಕೆ ಏನು ಬೇಕೋ ಅದನ್ನು ಮಾಡಿಕೊಳ್ಳಲಿ ಎಂದಿದ್ದಾರೆ.
ಡಿಕೆ ಸಹೋದರರ ವಿರುದ್ಧ ಮತಾಂತರದ ಗಂಭೀರ ಆರೋಪ
ಏಸು ಪ್ರತಿಮೆ ನಿರ್ಮಾಣದ ವಿರುದ್ಧ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವತಿಯಿಂದ ಕನಕಪುರ ಚಲೋ ಹಮ್ಮಿಕೊಂಡಿರುವ ಕುರಿತು ಸೋಮವಾರ ಬೆಂಗಳೂರಿನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಯಾರು? ನನಗೆ ಯಾರೂ ಗೊತ್ತಿಲ್ಲ. ನನ್ನ ಕ್ಷೇತ್ರಕ್ಕೆ ಯಾರಾದರೂ ಬರಲಿ. ಅಡ್ಡಿಪಡಿಸುವುದು ನನ್ನ ಧರ್ಮವಲ್ಲ. ಸೋಮವಾರ ಕನಕಪುರಕ್ಕೆ ಬೇರೆ ಬೇರೆ ಕಡೆಯಿಂದ ಎಷ್ಟುಗಾಡಿಗಳು ಬಂದಿವೆ ಎಂಬುದು ಗೊತ್ತಿದೆ. ರಾಮನಗರದ ಮಾಜಿ ಮಂತ್ರಿ ಒಬ್ಬರು ನನಗೆ ಮಾಹಿತಿ ಕೊಟ್ಟರು. ತಪ್ಪು ತಿಳ್ಕೊಬೇಡಿ ಅಣ್ಣಾ.. ಏನೋ ಮಾಡ್ಕೊಂಡು ಹೋಗ್ತಾರೆ ಅಂದರು. ಪಾಪ ಅವರ ಹೆಸರನ್ನ ಬಹಿರಂಗಪಡಿಸಲ್ಲ. ಅವರು ಇನ್ನು ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಆಗಬೇಕಾಗಿದೆ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.
ಕನಕಪುರ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ, ಮಾಡಲಿ. ಕನಕಪುರದಲ್ಲಿ ಕಸ ಗುಡಿಸಿ ಸ್ವಚ್ಛಗೊಳಿಸುತ್ತೇವೆ ಎನ್ನುತ್ತಿದ್ದಾರೆ. ಬರುವವರೆಲ್ಲರೂ ನಾವು ಮಾಡಿರುವ ಕೆಲಸಗಳನ್ನೂ ನೋಡಲಿ. ಸೋಲಾರ್ ಪ್ಯಾನೆಲ್ ಮಾಡಿ ರೈತರಿಗೆ ಪಂಪ್‌ಸೆಟ್ ಕೊಟ್ಟಿದ್ದೇನೆ. ಪ್ರತಿ ಊರಿಗೆ ಕಾವೇರಿ ನೀರು ಕೊಟ್ಟಿದ್ದೇನೆ. ಕಟ್ಟಡ ನಿರ್ಮಾಣಗಳನ್ನೂ ನೋಡಲಿ. ದೇಶದಲ್ಲೇ ನರೇಗಾ ಕಾರ್ಯಕ್ರಮ ಅತ್ಯುತ್ತಮವಾಗಿ ಜಾರಿಗೆ ಬಂದಿದೆ ಎಂಬ ಪ್ರಮಾಣಪತ್ರ ಬಂದಿದೆ. ಇವೆಲ್ಲವನ್ನೂ ತಿಳಿದುಕೊಳ್ಳಲಿ ಎಂದರು.
ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿದ್ದಾಗ ಶಿವಕುಮಾರ ಸ್ವಾಮೀಜಿ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿಗಳ ಸ್ಮಾರಕಕ್ಕೆ ಜಮೀನು ನೀಡಲು ಪ್ರಸ್ತಾವನೆ ಕಳುಹಿಸಿದ್ದೇವೆ. ಶಿವಕುಮಾರ ಸ್ವಾಮಿಗಳ ಸ್ಮಾರಕಕ್ಕೆ 16 ಎಕರೆ ಪ್ರಸ್ತಾವನೆ ಸಲ್ಲಿಸಿದ್ದೆವು. ಹೀಗಿದ್ದರೂ ನಮ್ಮ ಬಗ್ಗೆ ಅಪಪ್ರಚಾರ ಮಾಡುವುದಾದರೆ ಮಾಡಲಿ ಎಂದು ತಿರುಗೇಟು ನೀಡಿದರು.
ದೆಹಲಿಗೆ ತೆರಳುವ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ ಅವರು, ನಾನು ಪಕ್ಷದ ಬಗ್ಗೆ ಮಾತನಾಡುವುದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಪಕ್ಷದ ವಿಚಾರಗಳನ್ನು ಮಾತನಾಡಬೇಕಾದ ಜಾಗದಲ್ಲಿ ಮಾತನಾಡುತ್ತೇನೆ. ನನ್ನ ವಿಚಾರ ನನ್ನ ಹಿಂದೆ ಬೀಳುವವರಿಗೆ ಗೊತ್ತಾಗುತ್ತದೆ ಬಿಡಿ ಎಂದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 14, 2020, 9:24 AM IST