ಬೆಂಗಳೂರು[ಜ.14]: ಕನಕಪುರ ಬಳಿಯ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ವಿಚಾರ ಸಂಬಂಧ ಪ್ರತಿಭಟನೆ ನಡೆಸಲು ಬೆಂಗಳೂರು, ಮಂಗಳೂರಿನಿಂದ ಯಾವ ಕಾರಣಕ್ಕಾಗಿ ಹೊಗಬೇಕಿತ್ತು ಎಂದು ಬಿಜೆಪಿ ಹೋರಾಟದ ವಿರುದ್ಧ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹರಿಹಾಯ್ದಿದ್ದಾರೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಏಸು ಪ್ರತಿಮೆ ಸ್ಥಾಪನೆ ಮಾಡುತ್ತೇನೆ ಎಂದಿದ್ದಾರೆ. ಅದರಲ್ಲಿ ನಾನು ತಪ್ಪು ಕಂಡು ಹಿಡಿಯುವುದಿಲ್ಲ ಎಂದೂ ದೇವೇಗೌಡ ಹೇಳಿದ್ದಾರೆ.

ರಾಮನಗರದಲ್ಲಿ ಬಿಜೆಪಿಗೆ ಕಮಲ ಅರಳಿಸಲು ಸುವರ್ಣಾವಕಾಶ?

ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಟ್ಟದ ಮೇಲೆ ಏಸು ಶಿಲೆ ನಿರ್ಮಾಣ ಮಾಡುತ್ತೇನೆ ಎಂದು ಶಿವಕುಮಾರ್‌ ಅವರು ಒಂದು ನಿರ್ಣಯ ತೆಗೆದುಕೊಂಡಿರಬಹುದು. ಅದಕ್ಕೆ ನಮ್ಮದೇನೂ ಅಭ್ಯಂತರ ಇಲ್ಲ. ಆದರೆ, ಬೆಂಗಳೂರು, ಮಂಗಳೂರಿನಿಂದ ಯಾಕೆ ಪ್ರತಿಭಟನೆ ಮಾಡಲು ಹೋಗಬೇಕು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಪ್ರತಿಮೆ ಮಾಡಲು ಬಿಡುವುದಿಲ್ಲ ಎಂಬ ಬಿಜೆಪಿ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸಲಿದೆ. ಮಾಧ್ಯಮದವರಿಗೆ ಬಿಜೆಪಿ ಬಗ್ಗೆ ಭ್ರಮೆ ಇದೆ. 19 ಚಚ್‌ರ್‍ಗಳನ್ನು ಒಡೆದು, ಬೈಬಲ್‌ಗಳನ್ನು ಸುಟ್ಟುಹಾಕಿದ್ದರು. ಚಚ್‌ರ್‍ಗಳನ್ನು ಸುಟ್ಟು ಹಾಕಿದಾಗ ದೇವೇಗೌಡ ಮಾತ್ರ ಎಲ್ಲಾ ಕಡೆ ಹೋಗಿದ್ದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಈ ದೇಶದಲ್ಲಿ ಸರ್ವಧರ್ಮಗಳು ಇವೆ. ಇದನ್ನು ದೊಡ್ಡ ವಿಚಾರವನ್ನಾಗಿ ಯಾಕೆ ಮಾಡಲಾಗುತ್ತಿದೆ ಎಂಬುದು ಗೊತ್ತಿದೆ. ಇದೆಲ್ಲಾ ರಾಜಕಾರಣವೋ, ತಮಾಷೆಯೋ ಎಂದು ಗೌಡರು ಕೇಳಿದರು.

ಬೆಟ್ಟದ ಮೇಲೆ ಏಸು ಶಿಲುಬೆ ನಿಲ್ಲಿಸುವ ಬಗ್ಗೆ ಯಾರಿಗೂ ಅಭ್ಯಂತರ ಇಲ್ಲ. ಆದರೆ, ಅದನ್ನು ತಡೆಯಲು ಬೆಂಗಳೂರು, ಮಂಗಳೂರಿನಿಂದ ಹೋಗುವ ಅವಶ್ಯಕತೆ ಏನಿತ್ತು? ಈ ವಿಚಾರವನ್ನು ಸರ್ಕಾರ ನೋಡಿಕೊಳ್ಳಲಿದೆ ಎಂದರು.

ಬಿಜೆಪಿ ಪ್ರತಿಭಟನೆಯಿಂದ ಗಡಗಡ ನಡುಗುತ್ತಿದ್ದೇನೆ: ಡಿಕೆಶಿ ವ್ಯಂಗ್ಯ