ನವದೆಹಲಿ [ಅ.09]: ಅಸೋಸಿಯೇಷನ್‌ ಆಫ್‌ ಡೆಮಾಕ್ರೆಟಿಕ್‌ ರಿಫಾರ್ಮ್ ಸಂಸ್ಥೆ ಬಿಡುಗಡೆ ಮಾಡಿರುವ 2017-18ನೇ ಸಾಲಿನ ಪ್ರಾದೇಶಿಕ ಪಕ್ಷಗಳ ಆಸ್ತಿ ವಿವರದ ಅನ್ವಯ, ಎಚ್‌.ಡಿ.ದೇವೇಗೌಡ ಅಧ್ಯಕ್ಷರಾಗಿರುವ ಜಾತ್ಯತೀತ ಜನತಾದಳ (ಜೆಡಿಎಸ್‌) ಪಕ್ಷದ ಒಟ್ಟು ಆಸ್ತಿ ಒಂದು ವರ್ಷದಲ್ಲಿ ದ್ವಿಗುಣಗೊಂಡಿದೆ.

2016-17ನೇ ಸಾಲಿನಲ್ಲಿ ಜೆಡಿಎಸ್‌ ಆಸ್ತಿ 7.61 ಕೋಟಿ ರು. ಇದ್ದರೆ, 2017-18ನೇ ಸಾಲಿನಲ್ಲಿ ಆಸ್ತಿಯ ಪ್ರಮಾಣ 15.44 ಕೋಟಿ ರು.ಗೆ ಏರಿದೆ. ಅಂದರೆ ಒಟ್ಟು ಆಸ್ತಿಯಲ್ಲಿ ಶೇ.102.9ರಷ್ಟುಏರಿಕೆ ದಾಖಲಾಗಿದೆ. ಈ ಮೂಲಕ ಅತಿ ಹೆಚ್ಚು ಆಸ್ತಿ ಹೊಂದಿರುವ ದೇಶದ ಪ್ರಾದೇಶಿಕ ಪಕ್ಷಗಳ ಪೈಕಿ ಜೆಡಿಎಸ್‌ಗೆ 9ನೇ ಸ್ಥಾನ ಲಭ್ಯವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚುನಾವಣಾ ಆಯೋಗಕ್ಕೆ ವಿವಿಧ ಪ್ರಾದೇಶಿಕ ಪಕ್ಷಗಳು ಸಲ್ಲಿಕೆ ಮಾಡಿರುವ ಮಾಹಿತಿ ಆಧರಿಸಿ ಈ ಪಟ್ಟಿತಯಾರಿಸಲಾಗಿದೆ. ಇದೇ ವೇಳೆ ಜೆಡಿಎಸ್‌ನ ಒಟ್ಟು ಆಸ್ತಿ ಪೈಕಿ 8.43 ಕೋಟಿ ರು. ಕಾಯ್ದಿಟ್ಟ ನಿಧಿಯಾಗಿದೆ. 2016-17ನೇ ಸಾಲಿನಲ್ಲಿ ಈ ಪ್ರಮಾಣ ಕೇವಲ 0.61 ಕೋಟಿ ರು. ಆಗಿತ್ತು. ಅಂದರೆ ಕಾಯ್ದಿಟ್ಟನಿಧಿಯಲ್ಲಿ ಶೇ.1281ರಷ್ಟುಭಾರೀ ಹೆಚ್ಚಳ ಕಂಡುಬಂದಿದೆ. ಇನ್ನು 2016-17ರಲ್ಲಿ 7 ಕೋಟಿ ರು. ಸಾಲ ಇದ್ದಿದ್ದಾಗಿ ಪಕ್ಷ ಹೇಳಿಕೊಂಡಿದ್ದು, 2017-18ರಲ್ಲಿ ಅಷ್ಟೇ ಸಾಲ ಮುಂದುವರೆದಿದೆ ಎಂದು ಪಕ್ಷ ಮಾಹಿತಿ ನೀಡಿದೆ.