ಬೆಂಗಳೂರು(ಜೂ.04): ಮಹಾಮಾರಿ ಕೊರೋನಾ ವೈರಸ್‌ ರಣಕೇಕೆ ಹಾಕುತ್ತಿದೆ. ಈ ಸಮಯದಲ್ಲಿ ಸರ್ಕಾರ ಶಾಲೆಗಳನ್ನು ಪ್ರಾರಂಭಿಸುವುದು ಶುದ್ಧ ತಪ್ಪು. ಕೊರೋನಾ ನಿಲ್ಲುವ ಮೊದಲು ಶಾಲೆಗಳನ್ನ ಪ್ರಾರಂಭಿಸಿದರೆ ರಾಜ್ಯದಲ್ಲಿ ಅನಾಹುತ ಆಗುವುದು ನಿಶ್ಚಿತ. ಸಣ್ಣ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಜರ್ ಹಾಕುತ್ತಾ ಕೂಡಲು ಆಗುವುದಿಲ್ಲ ಎಂದು ಮಾಜಿ ಶಿಕ್ಷಣ ಹಾಗೂ ಜೆಡಿಎಸ್ ಎಂಎಲ್‌ಸಿ ಬಸವರಾಜ್ ಹೊರಟ್ಟಿ ಅವರು ಹೇಳಿದ್ದಾರೆ. 

ಇಂದು(ಗುರುವಾರ) ನಗರದ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾ ರಜೆ, ಹಬ್ಬದ ರಜೆ ಕಟ್ ಮಾಡಬಹುದು, ಶನಿವಾರ ಪೂರ್ತಿ ದಿನ ತರಗತಿಗಳನ್ನ ನಡೆಸಬಹುದು. ಆದರೆ, ಸಧ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನ ಅರಂಭಿಸುವುದು ಬೇಡ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 

ಶಾಲೆಗಳ ಪ್ರಾರಂಭ ಬಗ್ಗೆ ಮಹತ್ವ ವಿಚಾರಗಳನ್ನ ತಿಳಿಸಿದ ಸಚಿವ ಸುರೇಶ್ ಕುಮಾರ್‌

ಖಾಸಗಿ ಲಾಬಿಗೆ ಸಚಿವ ಸುರೇಶ್ ಕುಮಾರ್ ‌ಮಣಿದಿದ್ದಾರೆ ಅಂತ ನಾನು ಹೇಳುವುದಿಲ್ಲ. ಮಕ್ಕಳ ಭವಿಷ್ಯ ಹಾಳಾಗುತ್ತದೆ ಅಂತ ಅಧಿಕಾರಿಗಳು ಹೇಳಿರಬಹುದು. ಆದರೆ ಮಂತ್ರಿಗಳಾದವರು ಅಧಿಕಾರಿಗಳ ಮಾತನ್ನು ಪೂರ್ತಿ ಕೇಳಬಾರದು. ಎಷ್ಟು ಬೇಕೋ ಅಷ್ಟು ಕೇಳಿ ನಮ್ಮ‌ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ವಿಜಯಪುರದ ನರ್ಸರಿ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಶಾಲೆಯನ್ನ ಓಪನ್ ಮಾಡಿದ್ದಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಸಣ್ಣ ಮಕ್ಕಳಿಗೆ ಗೊತ್ತಿರೋದಿಲ್ಲ ಅಂತಹ ಶಾಲೆಯನ್ನ ಯಾರು ತೆರೆದಿದ್ದಾರೆ ಅಂಥವರನ್ನ ಒದ್ದು ಒಳಗಾಗಬೇಕು.  ಎಲ್ಲ ಕಳ್ಳರಿದ್ದಾರೆ, ಅವರಿಗೆ ದುಡ್ಡು ಮುಖ್ಯ,ಶಿಕ್ಷಣ ಅಲ್ಲ ಎಂದು ಹೇಳಿದ್ದಾರೆ. 

"

ಇನ್ನು ರಾಜ್ಯಸಭಾ ಚುನಾವಣೆಯ ವಿಚಾರದ ಬಗ್ಗೆ ಮಾತನಾಡಿದ ಅವರು, ನಮಗೆ ಒಂದು ಸ್ಥಾನಕ್ಕೆ ಮತಗಳು ಕಡಿಮೆ‌ ಬೀಳುತ್ತವೆ. ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕುಮಾರಸ್ವಾಮಿಗೆ ಯಾವುದೇ ಗೊಂದಲ ಇಲ್ಲ. ದೇವೇಗೌಡರು ಅಭ್ಯರ್ಥಿಯಾದರೆ ಉತ್ತಮ ಅಂತ ನನ್ನ ಅಭಿಪ್ರಾಯವಾಗಿದೆ. ಆರೋಗ್ಯ ಸರಿ ಇಲ್ಲ ಬೇಡ ಅಂತ ದೇವೆಗೌಡರು ಹೇಳುತ್ತಿರುವುದು‌ ನಿಜವಾಗಿದೆ. ದೇವೇಗೌಡರು ನಿಲ್ಲದಿದ್ದರೆ ನಮ್ಮಲ್ಲಿ ಬೇರೆ ಯಾರಾದರೂ ನಿಲ್ಲಬೇಕು, ಕಾಂಗ್ರೆಸ್ ಬೆಂಬಲ ಅಥವಾ ಬಿಜೆಪಿ ಬೆಂಬಲ ಪಡೆಯುವ ಬಗ್ಗೆ ನಮ್ಮಲ್ಲಿ ಕೆಲವರು ಚರ್ಚೆ ನಡೆಸಿರುವುದು ನಿಜ. ತತ್ವ ಸಿದ್ದಾಂತಕ್ಕೆ ಯಾರೂ ಗಮನ ಕೊಡುವುದಿಲ್ಲ. ಈ ಬಗ್ಗೆ ನಾಳೆ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಆಗುತ್ತದೆ ಎಂದು ಹೇಳಿದ್ದಾರೆ.