ಬೆಂಗಳೂರು :  ಮೈತ್ರಿ ಸರ್ಕಾರದ ಪಾಲುದಾರಿಕೆ ಪಕ್ಷವಾದ ಕಾಂಗ್ರೆಸ್‌ ತನ್ನ ಕೋಟಾದ ನಿಗಮ-ಮಂಡಳಿಗಳಿಗೆ ನೇಮಕ ಮಾಡಿದ ತಿಂಗಳ ಬಳಿಕ ಜೆಡಿಎಸ್‌ನಲ್ಲಿ ಇದೀಗ ಜೀವ ಬಂದಿದ್ದು, ಮೊದಲ ಹಂತದಲ್ಲಿ 10 ಶಾಸಕರಿಗೆ ನಿಗಮ- ಮಂಡಳಿ ಸ್ಥಾನ ನೀಡಲು ಜೆಡಿಎಸ್‌ ವರಿಷ್ಠ ತೀರ್ಮಾನಿಸಿದ್ದಾರೆ.

ವಿಧಾನಸಭೆಯ 7 ಮತ್ತು ವಿಧಾನಪರಿಷತ್‌ನ ಮೂವರು ಸದಸ್ಯರನ್ನು ನಿಗಮ-ಮಂಡಳಿಗಳಿಗೆ ನೇಮಕ ಮಾಡಲು ನಿರ್ಧರಿಸಲಾಗಿದ್ದು, ಸೋಮವಾರ ಪಟ್ಟಿಹೊರಬೀಳುವ ಸಾಧ್ಯತೆ ಇದೆ.

ಕಾಂಗ್ರೆಸ್‌ ನಿಗಮ-ಮಂಡಳಿ ನೇಮಕ ಮಾಡಿ ತಿಂಗಳಾದರೂ ಜೆಡಿಎಸ್‌ನಲ್ಲಿ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಇದರಿಂದ ಪಕ್ಷದಲ್ಲಿಯೇ ಅಸಮಾಧಾನ ವ್ಯಕ್ತವಾಗಿತ್ತು. ಈ ಬಗ್ಗೆ ಅರಿತ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಾರದು ಎಂಬ ಕಾರಣಕ್ಕಾಗಿ ನಿಗಮ-ಮಂಡಳಿ ನೇಮಕಕ್ಕೆ ಹಸಿರು ನಿಶಾನೆ ತೋರಿದ್ದಾರೆ ಎಂದು ಹೇಳಲಾಗಿದೆ.

ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್‌.ವಿ.ದತ್ತಾ, ಪಕ್ಷದ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಪಟ್ಟಿಯೊಂದನ್ನು ವರಿಷ್ಠರಿಗೆ ತಲುಪಿಸಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸಹ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ. ಸಣ್ಣಪುಟ್ಟಬದಲಾವಣೆಯೊಂದಿಗೆ ಸೋಮವಾರ ಪಟ್ಟಿಪ್ರಕಟವಾಗುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ನಡೆಸಿದ ಸಂದರ್ಭದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಂಜುನಾಥ್‌ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅವರಿಗೂ ನಿಗಮ-ಮಂಡಳಿ ಸ್ಥಾನ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಇನ್ನುಳಿದಂತೆ ಶಾಸಕರಾದ ಶಿವಲಿಂಗೇಗೌಡ, ಗೋಪಾಲಯ್ಯ, ಮಾಗಡಿ ಕ್ಷೇತ್ರದ ಮಂಜುನಾಥ್‌ ಸೇರಿದಂತೆ ಏಳು ವಿಧಾನಸಭಾ ಸದಸ್ಯರಿಗೆ ನಿಗಮ-ಮಂಡಳಿ ಸ್ಥಾನ ನೀಡಲು ವರಿಷ್ಠರು ತೀರ್ಮಾನಿಸಿದ್ದಾರೆ. ವಿಧಾನಪರಿಷತ್‌ನ ಮೂವರಿಗೆ ಅವಕಾಶ ನೀಡಲಾಗಿದೆ. 10 ಶಾಸಕರ ಪೈಕಿ ಮೂರು ಅಥವಾ ನಾಲ್ಕು ಶಾಸಕರಿಗೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಲಾಗುತ್ತದೆ.

ಎರಡನೇ ಹಂತದ ಪಟ್ಟಿಯಲ್ಲಿ ವಿಧಾನಸಭೆ ಚುನಾವಣೆ ವೇಳೆ ಕಡಿಮೆ ಅಂತರದ ಮತದಲ್ಲಿ ಸೋಲನುಭವಿಸಿದ ಮಾಜಿ ಶಾಸಕರಿಗೆ ನಿಗಮ-ಮಂಡಳಿ ಸ್ಥಾನ ನೀಡಲಾಗುವುದು. ಮಾಜಿ ಶಾಸಕ ಕೋನರೆಡ್ಡಿ ಮತ್ತು ವಿಧಾನಪರಿಷತ್‌ ಮಾಜಿ ಸದಸ್ಯ ರಮೇಶ್‌ ಬಾಬು ಹೆಸರನ್ನು ಸಹ ಅಂತಿಮಗೊಳಿಸಲಾಗಿದೆ. ಕೋನರೆಡ್ಡಿಗೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡುವ ಸಾಧ್ಯತೆ ಇದೆ. ಜೆಡಿಎಸ್‌ಮೂರನೇ ಹಂತದ ಪಟ್ಟಿಯಲ್ಲಿ ಇನ್ನುಳಿದ ಕಾರ್ಯಕರ್ತರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗಿದೆ.