Asianet Suvarna News Asianet Suvarna News

ಜನತಾ ಕರ್ಫ್ಯೂ : ಸಾವಿರಕ್ಕೂ ಅಧಿಕ ವಾಹನಗಳು ಜಪ್ತಿ

 ಕೊರೋನಾ ಸೋಂಕಿನ ಎರಡನೇ ಅಲೆ ತಡೆಗೆ ರಾಜ್ಯ ಸರ್ಕಾರ ಘೋಷಿಸಿರುವ ಜನತಾ ಕರ್ಫ್ಯೂ ಮೊದಲ ದಿನವಾದ ಬುಧವಾರದಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಯಶಸ್ವಿಯಾಗಿದ್ದು, ಅನಗತ್ಯವಾಗಿ ರಸ್ತೆಗೆ ಇಳಿದ ಸಾವಿರಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಲಾಯಿತು. 

Janatha  curfew Police Seized More than 1000 vehicle on April 28 snr
Author
Bengaluru, First Published Apr 29, 2021, 8:18 AM IST

 ಬೆಂಗಳೂರು (ಏ.29):  ಜನರೇ ಸ್ವಯಂಪ್ರೇರಣೆ ಮತ್ತು ಪೊಲೀಸರ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕೊರೋನಾ ಸೋಂಕಿನ ಎರಡನೇ ಅಲೆ ತಡೆಗೆ ರಾಜ್ಯ ಸರ್ಕಾರ ಘೋಷಿಸಿರುವ ಜನತಾ ಕರ್ಫ್ಯೂ ಮೊದಲ ದಿನವಾದ ಬುಧವಾರದಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಮಾರುಕಟ್ಟೆಗಳಲ್ಲಿ ಮಾತ್ರ ಎಂದಿನಂತೆ ಜನಜಂಗುಳಿ ಮುಂದುವರಿದಿದ್ದು ಕೋವಿಡ್‌ ನಿಯಮಾವಳಿ ಮರೆತು ವ್ಯವಹರಿಸಿದ್ದು ಬಿಟ್ಟರೆ ಮತ್ತೆಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಓಡಾಡಿದ್ದು ಕಂಡುಬಂದಿಲ್ಲ. ಆದರೂ ಬೆಳಗಾವಿ, ಚಿತ್ರದುರ್ಗ, ಕಲಬುರಗಿ ಸೇರಿದಂತೆ ಅನೇಕ ಕಡೆಗಳಲ್ಲಿ ಅನಗತ್ಯವಾಗಿ ರಸ್ತೆಗಳಿದ 1146ಕ್ಕೂ ಅಧಿಕ ವಾಹನಗಳನ್ನು ಮುಟ್ಟುಗೋಲು ಹಾಕುವ, ದಂಡ ವಿಧಿಸಿ ಬಿಸಿ ಮುಟ್ಟಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಮಂಗಳವಾರ ರಾತ್ರಿ 9 ಗಂಟೆಯಿಂದಲೇ ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿದ್ದು ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಗದಗ, ಬಳ್ಳಾರಿ, ಉತ್ತರ ಕನ್ನಡ ಸೇರಿದಂತೆ ಹೆಚ್ಚಿನ ಜಿಲ್ಲೆಗಳಲ್ಲಿ ಜನ ಸ್ವಯಂಪ್ರೇರಿತರಾಗಿ ಮನೆಯಲ್ಲೇ ಉಳಿದುಕೊಂಡಿದ್ದರು. ಬೆಳಗ್ಗೆ 6ರಿಂದ 10 ಗಂಟೆವರೆಗೆ ಹಾಲು, ತರಕಾರಿ, ದಿನಸಿ ಮೊದಲಾದ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ್ದರಿಂದ ಮಾರುಕಟ್ಟೆ, ದಿನಸಿ ಅಂಗಡಿಗಳಿಗೆ ಜನ ಮುಗಿಬಿದ್ದಿದ್ದರು. ಆದರೆ 10 ಗಂಟೆಯಾಗುತ್ತಿದ್ದಂತೆ ಜನಸಂದಣಿ ಕಡಿಮೆಯಾಗಿದೆ. ಚಿತ್ರದುರ್ಗ, ಕಲಬುರಗಿ, ಯಾದಗಿರಿ, ರಾಯಚೂರುಗಳಲ್ಲಿ ಮಾತ್ರ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಹೋಗಿ ಬರುವ ವಾಹನಗಳನ್ನು ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಲ್ಲಿ ಒಂದೇ ದಿನ ದಾಖಲೆಯ 22,596 ಕೇಸ್‌, 137 ಮಂದಿ ಸಾವು! ...

ಈ ವೇಳೆ ಬೆಂಗಳೂರಿನಲ್ಲಿ ನಿಯಮ ಉಲ್ಲಂಘಿಸಿ ರಸ್ತೆಗಿಳಿದ ಒಟ್ಟು 434 ವಾಹ​ನ​ ಸೇರಿದಂತೆ ರಾಜ್ಯಾದ್ಯಂತ ಒಟ್ಟು 1146ಕ್ಕೂ ಅಧಿಕ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು. ಬೆಂಗಳೂರು ನಗರ ಹೊರತುಪಡಿಸಿದರೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 136, ಚಿತ್ರದುರ್ಗ 133, ಧಾರವಾಡ ಜಿಲ್ಲೆಯಲ್ಲಿ 155 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಶಿವಮೊಗ್ಗದಲ್ಲಿ ರಸ್ತೆಯಲ್ಲಿ ಬೇಕಾಬಿಟ್ಟಿಸಂಚರಿಸುತ್ತಿದ್ದ ದ್ವಿಚಕ್ರವಾಹನ ಸವಾರರಿಗೆ ದಂಡ ವಿಧಿಸಿದ್ದರೆ ಬಾಗಲೋಕೋಟೆಯಲ್ಲಿ ಅನಗತ್ಯ ಓಡಾಡುತ್ತಿದ್ದವರಿಗೆ ರಸ್ತೆ ಮಧ್ಯೆಯೇ ಬಸ್ಕಿ ಹೊಡೆಸಿದ್ದಾರೆ. ಉಡುಪಿಯಲ್ಲಿ ಮಾಸ್ಕ್‌ ಧರಿಸದ 231 ಮಂದಿಗೂ ಒಟ್ಟು 80 ಸಾವಿರ ರು., ಧಾರವಾಡದಲ್ಲಿ ಸಾಮಾಜಿಕ ಅಂತರ ಕಾಪಾಡದ 28 ಜನರಿಗೆ ಒಟ್ಟು 5600 ರು. ದಂಡ ವಿಧಿಸಿದ್ದಾರೆ. ಕೊಪ್ಪಳದಲ್ಲಿ ಅಗತ್ಯ ವಸ್ತುಗಳ ಹೊರತಾದ ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಿದ 10 ಅಂಗಡಿಗಳನ್ನು ಮುಟ್ಟುಗೋಲು ಹಾಕಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಪೊಲೀಸರ ಕಟ್ಟುನಿಟ್ಟಿನ ಕ್ರಮ ಜೊತೆಗೆ ಜನರ ಸ್ವಯಂಶಿಸ್ತಿನಿಂದಾಗಿ ಬಹುತೇಕ ರಾಜ್ಯದ ಎಲ್ಲಾ ಜಿಲ್ಲಾಕೇಂದ್ರ, ತಾಲೂಕು ಕೇಂದ್ರಗಳ ಜನನಿಬಿಡ ರಸ್ತೆಗಳು ಬಿಕೋ ಅನ್ನುತ್ತಿದ್ದವು. ರೋಗಿಗಳ ಸಂಬಂಧಿಕರು, ಸೇವಾ ನಿರತರ ಓಡಾಟ ಹೊರತುಪಡಿಸಿದರೆ ಉಳಿದಂತೆ ಜನಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.

ನಗರ, ಪಟ್ಟಣಗಳ ಕೇಂದ್ರ ಭಾಗ, ಹೆದ್ದಾರಿಗಳಲ್ಲಿನ ಬಹುತೇಕ ಹೋಟೆಲ್‌ಗಳು ಬಂದಾಗಿದ್ದವು. ಕೆಲವೇ ಕೆಲವು ಹೋಟೆಲ್‌ಗಳು ಪಾರ್ಸಲ್‌ ನೀಡಿದ್ದು ಕಂಡುಬಂತು. ಮದ್ಯ ಮಾರಾಟಕ್ಕೂ ಅವಕಾಶವಿದ್ದರೂ ಮದ್ಯದ ಅಂಗಡಿಗಳ ಮುಂದೆ ಸಹ ಕ್ಯೂ ಇರಲಿಲ್ಲ.

- ಜನರ ಸ್ವಯಂಪ್ರೇರಣೆ, ಪೊಲೀಸರ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ನಿನ್ನೆ ಜನತಾ ಕರ್ಫ್ಯೂ ಸಂಪೂರ್ಣ ಯಶಸ್ವಿ

- ಅಗತ್ಯ ವಸ್ತು ಖರೀದಿ ಬಿಟ್ಟರೆ ಅನಗತ್ಯವಾಗಿ ಕಾಣಿಸಿಕೊಳ್ಳದ ಜನ

ಚಿತ್ರದುರ್ಗ, ಕಲಬುರಗಿ, ರಾಯಚೂರಲ್ಲಿ ಲಘು ಲಾಠಿ ಪ್ರಹಾರ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

- ಬೆಳ್ಳಂಬೆಳಗ್ಗೆಯೇ ಮಾರುಕಟ್ಟೆಗಳಲ್ಲಿ ಜನಜಂಗುಳಿ

ಕೊರೋನಾ ನಿಯಮಾವಳಿ ಮರೆತು ತರಕಾರಿ, ಹಣ್ಣುಗಳಿಗೆ ಮುಗಿಬಿದ್ದ ನಾಗರಿಕರು

- ರಾಜ್ಯಾದ್ಯಂತ 1146ಕ್ಕೂ ಅಧಿಕ ವಾಹನಗಳು ಜಪ್ತಿ

ಕೊಪ್ಪಳದಲ್ಲಿ ನಿಯಮ ಮೀರಿ ತೆರೆದಿದ್ದ 10ಕ್ಕೂ ಅಧಿಕ ಮಳಿಗೆಗಳಿಗೆ ದಂಡ

Follow Us:
Download App:
  • android
  • ios