Asianet Suvarna News Asianet Suvarna News

20 ಗಂಟೆ ವಿಚಾರಣೆ ಬಳಿಕ ರೆಡ್ಡಿಗೆ ಜೈಲಿಗೆ : ಎಷ್ಟು ದಿನ ಸೆರೆ ವಾಸ..?

ಬಿಜೆಪಿಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇದೀಗ ಆ್ಯಂಬಿಡೆಂಟ್‌ನ ‘ಇ.ಡಿ. ಡೀಲ್’ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಮತ್ತೆ ಜೈಲು ಸೇರಿದ್ದಾರೆ. 

Janardhan Reddy Sent Jail For 14 Days
Author
Bengaluru, First Published Nov 12, 2018, 7:23 AM IST

ಬೆಂಗಳೂರು :  ಅಕ್ರಮ ಗಣಿಗಾರಿಕೆಯಲ್ಲಿ ನಾಲ್ಕು ವರ್ಷ ಸೆರೆಮನೆ ವಾಸ ಅನುಭವಿಸಿದ್ದ ಬಿಜೆಪಿಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇದೀಗ ಆ್ಯಂಬಿಡೆಂಟ್‌ನ ‘ಇ.ಡಿ. ಡೀಲ್’ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಭಾನುವಾರ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. 

‘ಇ.ಡಿ ಡೀಲ್’ ಪ್ರಕರಣದಲ್ಲಿ ಸತತ 20 ಗಂಟೆಗಳ ಕಾಲ ಜನಾರ್ದನ ರೆಡ್ಡಿಯನ್ನು ವಿಚಾರಣೆ ನಡೆಸಿದ ಕೇಂದ್ರ  ಅಪರಾಧ ವಿಭಾಗದ (ಸಿಸಿಬಿ) ತನಿಖಾ ತಂಡ ಅಂತಿಮ ವಾಗಿ ಅವರನ್ನು ಬಂಧಿಸಿ ಐಪಿಸಿ ಸೆಕ್ಷನ್ 120 ಬಿ (ಒಳ ಸಂಚು), 420 (ವಂಚನೆ), 467 - 468  (ನಕಲಿ ದಾಖಲೆ ಸೃಷ್ಟಿ) ಆರೋಪದಡಿ ದೂರು ದಾಖಲಿಸಿತು. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಒಪ್ಪಿಸಿತು. ಜೈಲಿನಲ್ಲಿ ಅವರಿಗೆ 10902 ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ. 

ಭಾನುವಾರ ಮಧ್ಯಾಹ್ನ ಕೋರಮಂಗಲದಲ್ಲಿನ 1 ನೇ ಎಸಿಎಂಎಂ ನ್ಯಾಯಾಧೀಶರಾದ ಜಗದೀಶ್ ಅವರ ಮುಂದೆ ಜನಾರ್ದನ ರೆಡ್ಡಿ ಅವರನ್ನು ಸಿಸಿಬಿ ತನಿಖಾ ಧಿಕಾರಿಗಳು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದರು.  ವಿಚಾರಣೆ ನಡೆಸಿದ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. 

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಸಿಬಿ ಅಪರಾಧ ವಿಭಾಗದ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಆ್ಯಂಬಿಡೆಂಟ್ ವಂಚನೆ  ಪ್ರಕರಣದಲ್ಲಿ ಇ.ಡಿ. (ಜಾರಿ ನಿದೇರ್ಶನಾಲಯ) ಇಲಾಖೆಯ ಹೆಸರು ಹೇಳಿ ಜನಾರ್ದನ ರೆಡ್ಡಿ 20 ಕೋಟಿ ರು. ಲಪಟಾಯಿಸಿ ವಂಚನೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಶನಿವಾರ ತಡರಾತ್ರಿಯವರೆಗೆ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಸೂಕ್ತ ಸಾಕ್ಷ್ಯಾಧಾರ ಹಾಗೂ ಸಾಕ್ಷಿಗಳ ಹೇಳಿಕೆ ಆಧಾರದ ಮೇಲೆ ಕಾನೂನಾತ್ಮಕವಾಗಿಯೇ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ವಂಚನೆ ಆಗಿರುವ ಹಣವನ್ನು ಪತ್ತೆ ಹಚ್ಚಿ ಜಪ್ತಿ ಮಾಡಲಾಗುವುದು. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಆ್ಯಂಬಿಡೆಂಟ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದ ಸಾರ್ವಜನಿಕರಿಗೆ ನೀಡಲಾಗುವುದು ಎಂದು ತಿಳಿಸಿದರು.

Follow Us:
Download App:
  • android
  • ios