ಬೆಂಗಳೂರು(ಜ.01): ಹೊಸ ವರ್ಷದಲ್ಲಿ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರವನ್ನು ನಿರ್ಮಿಸುವ ಜತೆಗೆ ಪ್ರಜ್ಞಾಪೂರ್ವಕ ಮತ್ತು ಜವಾಬ್ದಾರಿಯುತ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾವು ಸಾಂಕ್ರಾಮಿಕ ರೋಗವನ್ನು ಮೀರಿ ಸಾಗಬಹುದಾಗಿದೆ ಎಂದು ಈಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಸಲಹೆ ನೀಡಿದ್ದಾರೆ.

ಕೋವಿಡ್‌-19 ಪೀಡಿತ ಜಗತ್ತಿಗೆ ಹೊಸ ವರ್ಷದ ಸಂದೇಶ ನೀಡಿರುವ ಸದ್ಗುರು, ‘ಕೊರೋನಾ ವೈರಸ್‌ನಿಂದ ಹಲವು ಪಾಠಗಳನ್ನು ಕಲಿಯುತ್ತಿರುವ ಈ ಸಂದರ್ಭದಲ್ಲಿ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರವನ್ನು ಸರಿಹೊಂದಿಸುವ ನಮ್ಮ ಪ್ರಯತ್ನದಲ್ಲಿ ಹತಾಶಭಾವ ಮತ್ತು ತೊಡಕುಗಳು ಬರದಂತೆ ನೋಡಿಕೊಳ್ಳಬೇಕು’ ಎಂದಿದ್ದಾರೆ.

ಗೋಡೆಗಳ ನಡುವೆ ಹೊಸ ವರ್ಷದ ಸಂಭ್ರಮ

‘ಈ ಸಾಂಕ್ರಾಮಿಕ ರೋಗವು ಹಲವು ಬಗೆಯಲ್ಲಿ ಅಡ್ಡಿ ತಂದೆಸಗಿದೆಯಾದರೂ, ಇದು ಕಡಿಮೆ ಪ್ರಮಾಣದ ಪರಿಣಾಮವನ್ನೇ ಹೊಂದಿದೆ. ನಾಗರಿಕರ ಪ್ರಜ್ಞಾಪೂರ್ವಕ ಮತ್ತು ಜವಾಬ್ದಾರಿಯುತ ನಡವಳಿಕೆಯಿಂದ ಅದನ್ನು ಸ್ಥಗಿತಗೊಳಿಸಬಹುದು. ಈ ಸಾಂಕ್ರಾಮಿಕವನ್ನು ಸೋಲಿಸಬೇಕಿದೆ. ಮನುಷ್ಯರು ವಿವಶರಾಗಿ ಪ್ರತಿಕ್ರಿಯಿಸುವ ಬದಲು ಪ್ರಜ್ಞಾಪೂರ್ವಕವಾಗಿ ಸ್ಪಂದಿಸುವ ಮೂಲಕ ಹೆಚ್ಚು ಸುಸಂಸ್ಕೃತ ಮತ್ತು ಸುಸ್ಥಿರ ಪ್ರಪಂಚದ ಹೊಸ ಸಾಧ್ಯತೆಗಳನ್ನು ಸೃಷ್ಟಿಸಬೇಕಿದೆ’ ಎಂದು ಹೇಳಿದ್ದಾರೆ.